More

    ಚೀಟಿ ಇಲ್ಲದೆ ಔಷಧ ನೀಡಿದರೆ ಶಿಸ್ತು ಕ್ರಮ

    ಹಿರೇಕೆರೂರ: ವೈದ್ಯರ ಚೀಟಿ ಇಲ್ಲದೆ ಔಷಧ ಅಂಗಡಿಯವರು ರೋಗಿಗಳಿಗೆ ನೇರವಾಗಿ ಔಷಧ, ಮಾತ್ರೆಗಳನ್ನು ನೀಡಬಾರದು. ಅಂಥ ಪ್ರಕರಣ ಕಂಡುಬಂದಲ್ಲಿ ತಾಲೂಕು ವೈದ್ಯಾಧಿಕಾರಿಗಳು, ತಹಸೀಲ್ದಾರರು, ಪೊಲೀಸ್ ಇಲಾಖೆ ಸಹಾಯದಿಂದ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
    ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಿರೇಕೆರೂರ, ರಟ್ಟಿಹಳ್ಳಿ ತಾಲೂಕಿನ ಎಲ್ಲ ಖಾಸಗಿ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. ಕೆಲ ಹಳ್ಳಿ, ಪಟ್ಟಣಗಳಲ್ಲಿ ಕಿರಾಣಿ ಮತ್ತಿತರ ಅಂಗಡಿಗಳಲ್ಲಿ ಔಷಧ, ಮಾತ್ರೆ ಮಾರಾಟ ಮಾಡುತ್ತಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಕರೊನಾ 2ನೇ ಅಲೆ ನಿಯಂತ್ರಿಸಲು ಸರ್ಕಾರಿ, ಖಾಸಗಿ ವೈದ್ಯರ ನಡುವೆ ಸಮನ್ವಯ ಹೆಚ್ಚಬೇಕು ಎಂದರು.
    ಕೊನೆಯ ಗಳಿಗೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಿರುವುದರಿಂದ ಕರೊನಾ ಸೋಂಕಿನಿಂದ ಸಾವು-ನೋವುಗಳು ಹೆಚ್ಚಾಗತೊಡಗಿವೆ. ಹಳ್ಳಿ, ಪಟ್ಟಣಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಅಂಥವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ತಾಲೂಕು ಆರೋಗ್ಯಾಧಿಕಾರಿಗಳು, ತಹಸೀಲ್ದಾರರು, ಪೊಲೀಸ್ ಇಲಾಖೆ ಮೇಲಧಿಕಾರಿಗಳು, ಖಾಸಗಿ ವೈದ್ಯರನ್ನು ಒಳಗೊಂಡ ವಾಟ್ಸ್​ಆಪ್ ಗ್ರುಪ್ ರಚಿಸಿಕೊಂಡು ಕರೊನಾ ನಿಯಂತ್ರಿಸಲು ಮುಂಜಾಗ್ರತೆ ವಹಿಸಬೇಕು. ಹಿರೇಕೆರೂರ ವಿಧಾನಸಭೆ ಕ್ಷೇತ್ರದಲ್ಲಿ ಮದುವೆ, ಜಾತ್ರೆ, ಸಭೆ-ಸಮಾರಂಭಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಯಾವುದೇ ರೋಗಿಯಲ್ಲಿ ಶೀತ, ಕೆಮ್ಮು, ಜ್ವರ ಕಾಣಿಸಿದ ಕೂಡಲೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಖಾಸಗಿ ವೈದ್ಯರು ತಿಳಿಸಬೇಕು. ಸಲಹೆ-ಸೂಚನೆಗಳನ್ನು ನೀಡಿ ಕೋವಿಡ್ ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸಬೇಕು ಎಂದರು.
    ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖಾಸಗಿ ವೈದ್ಯರು ಮಹತ್ವದ ಸಲಹೆ, ಸೂಚನೆಗಳನ್ನು ನೀಡಿದರು.
    ತಹಸೀಲ್ದಾರರಾದ ಉಮಾ ಕೆ.ಎ., ಕೆ. ಗುರುಬಸವರಾಜ, ತಾಲೂಕು ಆರೋಗ್ಯಾಧಿಕಾರಿ ಡಾ. ಎಲ್.ಎಚ್. ಚಿದಾನಂದ, ಸಿಪಿಐ ರುದ್ರಗೌಡ ಪಾಟೀಲ, ಖಾಸಗಿ ವೈದ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts