More

    ಪರಿಷತ್ ತಂತ್ರಗಾರಿಕೆಗೆ ಆಕ್ಷೇಪ; ಬಿಜೆಪಿಯಲ್ಲಿ ಅಸಮಾಧಾನ

    ಬೆಂಗಳೂರು: ವಿಧಾನಪರಿಷತ್​ನಲ್ಲಿ ನಡೆದ ಕೋಲಾಹಲ ರಾಷ್ಟ್ರೀಯ ಸುದ್ದಿಯಾಗಿದೆ. ರಾಷ್ಟ್ರೀಯ ಪಕ್ಷಗಳ ವರಿಷ್ಠರು ಈ ಬೆಳವಣಿಗೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಬಿಜೆಪಿ ನಾಯಕರು ಪಕ್ಷದ ತಂತ್ರಗಾರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವಿಶ್ವಾಸ ಮಂಡನೆಗೆ ಜೆಡಿಎಸ್ ಬೆಂಬಲವೂ ಇದೆ ಎಂದು ಸ್ಪಷ್ಟವಾದ ಮೇಲೆ ಅವರಿಂದಲೂ ಪತ್ರ ಪಡೆದುಕೊಂಡು ಜಂಟಿ ಕಾರ್ಯಾಚರಣೆ ಮಾಡಿದ್ದರೆ ಸೂಕ್ತವಾಗುತ್ತಿತ್ತು. ಈಗ ಈ ಘಟನೆ ಕಪ್ಪುಚುಕ್ಕೆಯಾಯಿತು ಎಂದು ಹಿರಿಯ ಸಚಿವರೊಬ್ಬರೇ ಬೇಸರ ಹೊರಹಾಕಿದ್ದಾರೆ. ಬಾಗಿಲಿಗೆ ಒದ್ದಿದ್ದು, ಉಪ ಸಭಾಪತಿಯನ್ನು ಕಾಂಗ್ರೆಸ್​ನವರು ಎಳೆದು ಹಾಕಿದ್ದು ಒಂದು ಭಾಗವಾದರೂ ಬಿಜೆಪಿ ಹೆಸರೂ ಈ ಘಟನೆಯಲ್ಲಿ ತಳುಕು ಹಾಕಿಕೊಂಡಿತು. ಇಂತಹದ್ದಕ್ಕೆ ಅವಕಾಶ ಕೊಡದಂತೆ ಸಭಾಪತಿ ಅವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಅವಕಾಶವಿತ್ತು. ತಂತ್ರಗಾರಿಕೆಯಲ್ಲಿ ವಿಫಲವಾದೆವು ಎಂದು ಒಪ್ಪಿಕೊಂಡಿದ್ದಾರೆ. ಜೆಡಿಎಸ್ ಕೂಡ ಅವಿಶ್ವಾಸ ಹೊಂದಿದೆ ಎಂದಾದ ಮೇಲೆ ಅವರದೇ ಪತ್ರದ ಮೇಲೆ ಸಭಾಪತಿಯನ್ನು ಇಳಿಸಿ ತಂತ್ರಗಾರಿಕೆ ಮೆರೆಯಬಹುದಿತ್ತು. ಏಕೆಂದರೆ, ಸಭಾಪತಿ ಜೆಡಿಎಸ್ ಬೆಂಬಲದಿಂದಾಗಿ ಆ ಸ್ಥಾನದಲ್ಲಿದ್ದಾರೆ. ಅವರೇ ಬೆಂಬಲ ಹಿಂಪಡೆದರೆ ಬಿಜೆಪಿ ವಿರುದ್ಧ ಟೀಕೆಗಳು ಬರುತ್ತಿರಲಿಲ್ಲ ಎಂದಿದ್ದಾರೆ.

    ಈ ವಿಚಾರ ಪಕ್ಷದಲ್ಲಿ ಸಾಕಷ್ಟು ಚರ್ಚೆ ನಡೆದಿದ್ದು, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಿಲ್ಲ ಎಂದು ಹಲವು ನಾಯಕರು ಅಸಮಾಧಾನಿತರಾಗಿದ್ದರೆಂದು ತಿಳಿದುಬಂದಿದೆ. ಜತೆಗೆ ಪರಿಷತ್ ಸಭಾಪತಿ ಸ್ಥಾನವನ್ನು ಜೆಡಿಎಸ್​ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆ ನಡೆದಿರುವಾಗ, ಅದು ಸಾಧ್ಯವೇ ಇಲ್ಲ ಎಂದು ಒಂದು ಬಣ ಪಟ್ಟು ಹಿಡಿದಿದೆ. ಪಕ್ಷದ ಸದಸ್ಯರು ಹೆಚ್ಚಿದ್ದಾರೆ, ಬಹುಮತ ಇರುವವರಿಗೆ ಈ ಸ್ಥಾನ ಸಿಗಬೇಕೆಂಬ ಅಭಿಪ್ರಾಯವಿದೆ. ಕಡಿಮೆ ಸ್ಥಾನ ಹೊಂದಿದವರಿಗೆ ಅವಕಾಶ ಬಿಟ್ಟುಕೊಡುವ ಬಗ್ಗೆ ಯಾರು ಆಲೋಚಿ ಸುತ್ತಿದ್ದಾರೋ ಗೊತ್ತಿಲ್ಲವೆಂದು ಸಚಿವರೊಬ್ಬರು ತಿಳಿಸಿದ್ದಾರೆ.

    ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

    ವಿಧಾನಪರಿಷತ್ ಸಭಾಂಗಣದಲ್ಲಿ ಡಿ.15 ರಂದು ನಡೆದ ಘಟನೆ, ಸಭಾಪತಿ ಪೀಠದಲ್ಲಿ ಕುಳಿತವರು ಮತ್ತು ಉಪಸಭಾಪತಿ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಸದಸ್ಯ ಆಯನೂರು ಮಂಜುನಾಥ್ ಸಭಾಪತಿಗಳನ್ನು ಒತ್ತಾಯಿಸಿದ್ದಾರೆ. ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರಿಗೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ಆಯನೂರು, ನೀವೊಬ್ಬ ಸಜ್ಜನ ಪ್ರಾಮಾಣಿಕ ರಾಜಕಾರಣಿ. ಕಪ್ಪುಚುಕ್ಕೆಯಿಲ್ಲದ ನಿಮ್ಮ ರಾಜಕೀಯ ಪ್ರಯಾಣ ಕರಾಳ ಘಟನೆಗೆ ಅವಕಾಶ ನೀಡಿದ್ದು ದುರಂತ. ಸರ್ವಶ್ರೇಷ್ಠ ಸದನದ ಹೆಮ್ಮೆಯ ಪರಂಪರೆ ಮುರಿದು ಬಿತ್ತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 2017ರಲ್ಲಿ ಕಾಂಗ್ರೆಸ್ ನೀಡಿದ ಅವಿಶ್ವಾಸ ನೋಟಿಸ್​ಗೆ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಹಾಕಿಕೊಟ್ಟ ಸತ್ಸಂಪ್ರದಾಯ ಏಕೆ ಪಾಲಿಸಲಾಗಲಿಲ್ಲ ಎಂಬುದೇ ಅರ್ಥವಾಗುತ್ತಿಲ್ಲ. ನೀವು ಸಭಾಪತಿ ಸ್ಥಾನದ ಘನತೆ, ಗೌರವ ಕಾಪಾಡುವುದರ ಬದಲು ನಿಮ್ಮ ಸ್ಥಾನ ಕಾಪಾಡಿಕೊಳ್ಳಲು ಪ್ರಯತ್ನಿಸಿದ್ದು ದುರ್ದೈವದ ಸಂಗತಿ. ಕುರ್ಚಿಗಾಗಿ ಇಷ್ಟೊಂದು ಬದಲಾಗುವ ಅಪ್ರಮಾಣಿಕರಾಗುವ ಅವಶ್ಯಕತೆ ಇತ್ತೆ? ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಈಗಲಾದರೂ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿ ಸ್ಥಾನ ತೆರವು ಮಾಡುವುದು ಉಚಿತ ಎಂದಿದ್ದಾರೆ.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಕ್ರಮ ಅವಶ್ಯ: ಸಾಂವಿಧಾನಿಕ ಹುದ್ದೆಯನ್ನು ಅಪವಿತ್ರಗೊಳಿಸಿದ ಕಾಂಗ್ರೆಸ್​ನ ಸಚೇತಕ ನಾರಾಯಣಸ್ವಾಮಿ, ಸದಸ್ಯರಾದ ಚಂದ್ರಶೇಖರ್ ಬಿ. ಪಾಟೀಲ್ ಮತ್ತು ಶ್ರೀನಿವಾಸ ಮಾನೆ ಹಾಗೂ ಉಪಸಭಾಪತಿಗಳ ಮೇಲೆ ಎರಗಿ ಕೊರಳುಪಟ್ಟಿಗೆ ಕೈಹಾಕಿ ಎಳೆದೊಯ್ದು ನಾರಾಯಣಸ್ವಾಮಿ, ನಜೀರ್ ಅಹ್ಮದ್, ಪ್ರಕಾಶ್ ರಾಥೋಡ್ ಮುಂತಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯ ಹಾಗೂ ಅನಿವಾರ್ಯ ಎಂದು ಆಯನೂರು ಮಂಜುನಾಥ್ ಹೇಳಿದ್ದಾರೆ.

    ದಂಡ ವಿಧಿಸಲು ಸಭಾಪತಿಗೆ ಒತ್ತಾಯ

    ಮೈಸೂರು: ವಿಧಾನಪರಿಷನ್​ನಲ್ಲಿ ಗದ್ದಲ ವೇಳೆ ಮಾಸ್ಕ್ ಹಾಕದೆ, ದೈಹಿಕ ಅಂತರ ಕಾಯ್ದುಕೊಳ್ಳದೆ ಎಂಎಲ್​ಸಿಗಳು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದಾರೆ. ಇವರಿಗೆ ಕಡ್ಡಾಯವಾಗಿ ದಂಡ ಹಾಕಲೇಬೇಕು. ಸಭಾಪತಿ ಈ ಕುರಿತು ನಿರ್ಣಯ ಕೈಗೊಳ್ಳಲಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. ನಿಯಮಗಳು ಎಲ್ಲರಿಗೂ ಒಂದೇ. ಜನಸಾಮಾನ್ಯರು ಈ ವಿಚಾರದಲ್ಲಿ ಧ್ವನಿ ಎತ್ತಿರುವುದು ನ್ಯಾಯಸಮ್ಮತವಾಗಿದ್ದು, ಎಲ್ಲರಿಗೂ ಒಂದೇ ನಿಯಮ ಅನ್ವಯ ಆಗಲಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts