More

    ಕಳೆದು ಹೋಗುತ್ತಿದೆ ಕಥೆ ಹೇಳುವ ಸಂಸ್ಕೃತಿ: ನಾ.ಡಿಸೋಜ ಕಳವಳ

    ಸಾಗರ: ಮಕ್ಕಳ ಜತೆ ಮನೆಯಲ್ಲಿರುವವರೇ ಮುಕ್ತವಾಗಿ ಮಾತನಾಡುವ ಪ್ರವೃತ್ತಿ ಕಡಿಮೆ ಆಗುತ್ತಿದೆ. ಅದರಲ್ಲಿಯೂ ಸಂವಹನಕ್ಕೆ ಮುಖ್ಯವಾದ ಕಥೆ ಹೇಳುವ ಸಂಸ್ಕೃತಿ ಕಳದೇ ಹೋಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹಿರಿಯ ಸಾಹಿತಿ ಡಾ.ನಾ.ಡಿಸೋಜ ಬೇಸರ ವ್ಯಕ್ತಪಡಿಸಿದರು.
    ನಗರದ ನೃತ್ಯಭಾಸ್ಕರ ಸಭಾಂಗಣದಲ್ಲಿ ನಮ್ಮ ರಂಗಸ್ವರೂಪ ಟ್ರಸ್ಟ್‌ನಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ವಿದ್ಯಾರಣ್ಯ ಶಾಲೆ ಮಕ್ಕಳಿಂದ ಏರ್ಪಡಿಸಿದ್ದ ಸಿ.ಟಿ.ಬ್ರಹ್ಮಾಚಾರ್ ನಿರ್ದೇಶನದ ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ನಾಟಕ ಪ್ರದರ್ಶನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
    ಒಂದು ಕಾಲದಲ್ಲಿ ಮನೆಗಳಲ್ಲಿ ಮಕ್ಕಳನ್ನು ಮಲಗಿಸಲು ಅಜ್ಜಿ ಕತೆ ಹೇಳುತ್ತಿದ್ದರು. ಅದನ್ನು ಮತ್ತೆ ಜ್ಞಾಪಿಸುವ ಪ್ರಯತ್ನ ಈ ಕೃತಿಯ ಮೂಲಕ ಮಾಡಿದ್ದೇನೆ. ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ಎಂಬುದು ಒಂದು ಸುಂದರ ಕಲ್ಪನೆ. ಕಥೆಯ ಮೂಲಕ ಹಲವಾರು ಸಂದೇಶಗಳು ರವಾನೆಯಾಗುತ್ತವೆ. ಈಗ ಯಾರೂ ಮನೆಯಲ್ಲಿ ಕತೆ ಹೇಳು ಎಂದು ಅಜ್ಜಿಗೆ ಕಾಟ ಕೊಡುವುದಿಲ್ಲ. ಇದಕ್ಕೆಲ್ಲ ಬದಲಾಗುತ್ತಿರುವ ಜೀವನ ಶೈಲಿಯೇ ಕಾರಣ ಎಂದು ತಿಳಿಸಿದರು.
    ಮಕ್ಕಳಿಗಾಗಿ ನಾನು ಹಲವಾರು ಕತೆ, ಕಾದಂಬರಿ ಬರೆದಿದ್ದೇನೆ. ಕತೆಯಿಂದ ಏನಾದರೂ ಮಕ್ಕಳು ಕಲಿತುಕೊಳ್ಳಲಿ ಎಂಬ ಆಶಯ ನನ್ನದು. ಪುಟ್ಟಜ್ಜಿ ಕತೆ ಹೇಳು ಕತೆಯಲ್ಲಿ ಹಲವಾರು ಅಂಶಗಳು ಮಕ್ಕಳ ಅರಿವಿಗ ಪೊರಕವಾಗಿವೆ. ಬ್ರಹ್ಮಾಚಾರ್ ಇದನ್ನು ರಂಗಪ್ರಯೋಗಕ್ಕೆ ತಂದು ಸಾರ್ಥಕ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಕಥೆಯ ಮೂಲಕ ನೀತಿ ತಿಳಿಸುವ ಪ್ರಯತ್ನ ಆಗಬೇಕು ಎಂದರು.
    ರಂಗಕರ್ಮಿ ಸಿ.ಟಿ.ಬ್ರಹ್ಮಾಚಾರ್ ಮಾತನಾಡಿ, ಕಥೆ ಹೇಳುವುದೂ ಒಂದು ಶಿಕ್ಷಣ ಮಾಧ್ಯಮ. 7ನೇ ತರಗತಿಯ ಪಠ್ಯದಲ್ಲಿರುವ ಸಾಹಿತಿ ಡಾ. ನಾ.ಡಿಸೋಜ ಅವರ ಕಥೆ ಆಧಾರಿತ ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ನಾಟಕವನ್ನು ವಿದ್ಯಾರಣ್ಯ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಏರ್ಪಡಿಸಿರುವುದು ಮಕ್ಕಳಲ್ಲಿ ಕತೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಕಳೆದ 8 ವರ್ಷಗಳಿಂದ ಮಕ್ಕಳಿಗೋಸ್ಕರ ರಂಗ ಚಟುವಟಿಕೆ ನಡೆಸುವುದು, ಮಕ್ಕಳ ರಂಗಭೂಮಿಗೆ ಸ್ಪಂದಿಸುವುದನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.
    ಅಧ್ಯಕ್ಷತೆ ವಹಿಸಿದ್ದ ನಮ್ಮ ರಂಗಸ್ವರೂಪ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಚಂದ್ರಶೇಖರ್, ಸಾಹಿತಿಗಳು ಒಂದೊಂದು ರೂಪದಲ್ಲಿ ಕತೆಯನ್ನು ಸಾಹಿತ್ಯದ ಮೂಲಕ ಕೊಡುತ್ತಾರೆ. ನಾಟಕಕಾರ ಅದನ್ನು ರಂಗಪ್ರಯೋಗಕ್ಕೆ ಅಳವಡಿಸಿ ಪರಿಣಾಮಕಾರಿಯಾಗಿ ಅದನ್ನು ಪ್ರೇಕ್ಷಕರಿಗೆ ತಲುಪಿಸುತ್ತಾನೆ. ದೃಶ್ಯ ಮಾಧ್ಯಮ ಅತ್ಯಂತ ಪರಿಣಾಮಕಾರಿ. ಇದು ಮನಸ್ಸಿಗೆ ಹೆಚ್ಚು ಸಂತಸ ಕೊಡುತ್ತದೆ. ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಕನ್ನಡ ಬೆಳವಣಿಗೆ ಸಂದರ್ಭದಲ್ಲೂ ನಾಟಕ ರಂಗಭೂಮಿ ಹೆಚ್ಚು ಸಹಕಾರಿಯಾಗಿದೆ ಎಂದರು.
    ವಿಶ್ವನಾಥ ಕುಪ್ಪಗಡ್ಡೆ ಉಪಸ್ಥಿತರಿದ್ದರು. ವಿದ್ಯಾರಣ್ಯ ಶಾಲಾ ಮಕ್ಕಳಿಂದ ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು ನಾಟಕ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts