More

    ಸ್ಮಾರ್ಟ್ ಸಿಟಿಗೆ ಕಾವೂರು ಪೇಟೆ ಕೊಳಚೆ ನೀರು ಅಪವಾದ

    ಮಂಗಳೂರು: ಮುಖ್ಯ ರಸ್ತೆ ಬದಿಯ ತೆರೆದ ಚರಂಡಿಯಲ್ಲಿ ನಾಲ್ಕೈದು ತಿಂಗಳಿನಿಂದ ಹರಿಯುತ್ತಿರುವ ಕೊಳಚೆ ನೀರು, ಪರಿಸರವಿಡೀ ಗಬ್ಬು ವಾಸನೆ, ಚರಂಡಿಯಲ್ಲಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ, ಸ್ಥಳೀಯರಿಗೆ ಮೂಗು ಮುಚ್ಚಿಕೊಂಡಿರಬೇಕಾದ ದುಸ್ಥಿತಿ.

    ಇದು ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರು ನಗರದ ಕಾವೂರು ಪೇಟೆಯ ಚಿತ್ರಣ. ಇಲ್ಲಿನ ಪೊಲೀಸ್ ಠಾಣೆ ಎದುರು ಮುಖ್ಯ ರಸ್ತೆ ಬದಿ ಹಲವು ಸಮಯದಿಂದ ಕೊಳಚೆ ನೀರು ಹರಿಯುತ್ತಿದೆ. ಕಟೀಲು, ಬಜ್ಪೆ ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವವರನ್ನು ಕೊಳಚೆ ನೀರಿನ ವಾಸನೆ ಸ್ವಾಗತಿಸುವಂತಿದೆ.

    ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದ್ದು, ಪರಿಸರವಿಡೀ ಗಬ್ಬು ವಾಸನೆ ಬರುತ್ತಿದೆ. ಕಾವೂರು ಪೊಲೀಸ್ ಠಾಣೆ ಎದುರಲ್ಲೇ ಕೊಳಚೆ ನೀರು ಹರಿಯುತ್ತಿದೆ. ಚರಂಡಿಯಲ್ಲಿ ತ್ಯಾಜ್ಯ ತುಂಬಿದ ಪರಿಣಾಮ ನೀರು ರಸ್ತೆಯಲ್ಲಿ ಹರಿಯಲು ಹೆಚ್ಚು ದಿನ ಬೇಕಾಗಿಲ್ಲ. ಇಲ್ಲಿ ಒಳಚರಂಡಿ ವ್ಯವಸ್ಥೆ ಇದ್ದು, ಹಳೇ ಸಪೂರ ಪೈಪ್ ಇರುವ ಕಾರಣ ಪ್ರಸ್ತುತ ಕೊಳಚೆ ನೀರಿನ ಪ್ರಮಾಣ ಹೆಚ್ಚಳವಾದ ಕಾರಣ ನೀರು ಸೋರಿಕೆಯಾಗುತ್ತಿದೆ.

    ಕಾವೂರು ಪೇಟೆಯಿಂದ ಬಿಜೈ ಕಡೆಗೆ ಬರುವ ಮುಖ್ಯ ರಸ್ತೆಯ ಬದಿಯಲ್ಲೇ ಕೊಳಚೆ ನೀರು ಹರಿಯುತ್ತಿದೆ. ಈ ರಸ್ತೆಯಲ್ಲಿ ಪ್ರತಿ ದಿನ ಸಾವಿರಾರು ಮಂದಿ ಸಂಚರಿಸುತ್ತಾರೆ. ವಾಹನದಲ್ಲಿ ಹೋಗುವಾಗಲೂ ಕೊಳಚೆ ವಾಸನೆ ಮೂಗಿಗೆ ಬಡಿಯುತ್ತದೆ. ಇಲ್ಲಿನ ಅಂಗಡಿ, ಪೆಟ್ರೋಲ್ ಪಂಪ್ ಸಿಬ್ಬಂದಿ, ಪೊಲೀಸರು ದಿನವಿಡೀ ಮೂಗು ಮುಚ್ಚಿಕೊಂಡಿರಬೇಕಾದ ಅನಿವಾರ್ಯತೆ ಇದೆ.

    ಪ್ಲಾಸ್ಟಿಕ್ ರಾಶಿ: ಚರಂಡಿಯ ಬಳಿಯಲ್ಲೇ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ರಾಶಿ ಬಿದ್ದಿದೆ. ಕೆಲವರು ವಾಹನಗಳಲ್ಲಿ ಬಂದು ಪ್ಲಾಸ್ಟಿಕ್‌ನಲ್ಲಿ ಕಟ್ಟಿದ ತ್ಯಾಜ್ಯ ಎಸೆದು ಹೋಗುವುದರಿಂದ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ಬೀಳಲು ಕಾರಣವಾಗಿದೆ. ಆ್ಯಂಟನಿ ವೇಸ್ಟ್ ತ್ಯಾಜ್ಯ ಸಂಗ್ರಹ ಮಾಡುವವರು ಕೂಡಾ ಅದನ್ನು ತೆಗೆದುಕೊಂಡು ಹೋಗುತ್ತಿಲ್ಲ. ಚರಂಡಿಯ ತನಕ ಕಾಂಕ್ರೀಟ್ ರಸ್ತೆ ಇದ್ದು, ದ್ವಿಚಕ್ರ ಸವಾರರು ಅಥವಾ ಪಾದಚಾರಿಗಳು ಆಕಸ್ಮಾತ್ ಬದಿಗೆ ಸರಿದರೆ ಕೊಳಚೆ ಚರಂಡಿಗೆ ಬೀಳುವ ಸ್ಥಿತಿ ಇದೆ. ತ್ಯಾಜ್ಯ ತಂದು ಹಾಕುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ಕಾವೂರು ಪೇಟೆಯ ಕೊಳಚೆ ನೀರಿನ ಸಮಸ್ಯೆ ಗಮನಕ್ಕೆ ಬಂದಿದೆ. ಎಡಿಬಿಯವರು ಬಂದು ಪರಿಶೀಲನೆ ನಡೆಸಿದ್ದಾರೆ. ಹಲವು ವರ್ಷಗಳ ಹಿಂದೆ ಅಳವಡಿಸಿದ ಒಳಚರಂಡಿ ಪೈಪ್ ಸಾಮರ್ಥ್ಯ ಈಗ ಸಾಕಾಗದ ಕಾರಣ ನೀರು ಸೋರಿಕೆಯಾಗುತ್ತಿದೆ. ಈಗಾಗಲೇ ಪರಿಶೀಲನೆ ನಡೆಸಿದ್ದು, ಆದಷ್ಟು ಶೀಘ್ರ ಕಾಮಗಾರಿ ಆರಂಭಗೊಂಡು ಸಮಸ್ಯೆ ಪರಿಹಾರವಾಗಲಿದೆ.
    ಸುಮಂಗಲಾ ಮನಪಾ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts