More

    ಸಾಯಲಿ ಕರೊನಾ; ಸ್ವಲ್ಪ ಹೊತ್ತು ನಗೋಣ: ಫೇಸ್‍ಬುಕ್ ಲೈವ್‍ನಲ್ಲಿ ನಗಿಸಿದ ಗುರುಪ್ರಸಾದ್

    ಬೆಂಗಳೂರು: ನಟ-ನಿರ್ದೇಶಕ ಗುರುಪ್ರಸಾದ್, ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ದೂರವೇ. ಫೇಸ್‍ಬುಕ್ ಅಥವಾ ಟ್ವಿಟರ್‍ನಲ್ಲಿ ಅವರು ಕಾಣಿಸಿಕೊಳ್ಳುವುದು ಕಡಿಮೆಯೇ. ಆದರೆ, ಬುಧವಾರ ಮಧ್ಯಾಹ್ನ ಅವರು ಫೇಸ್‍ಬುಕ್‍ನಲ್ಲಿ ಲೈವ್ ಬಂದಿದ್ದಾರೆ. ಒಂದು ಗಂಟೆ ಕಾಲ, ವಿವಿಧ ಜೋಕುಗಳನ್ನು ಹೇಳಿ ಪ್ರೇಕ್ಷಕರನ್ನು ನಗಿಸಿದ್ದಾರೆ. ಇದನ್ನು ಅವರು ಒಂದೇ ದಿನಕ್ಕೆ ಸೀಮಿತಗೊಳಿಸಿಲ್ಲ. ಇನ್ನು ಮುಂದಿನ ದಿನಗಳಲ್ಲೂ ಅವರು ಆಗಾಗ ಫೇಸ್‍ಬುಕ್‍ನಲ್ಲಿ ಲೈವ್ ಬಂದು, ಜನರನ್ನು ನಗಿಸುವುದಕ್ಕೆ ತೀರ್ಮಾನಿಸಿದ್ದಾರೆ. ಅದಕ್ಕೆ ಕಾರಣ, ಕರೊನಾ.

    ಗುರುಪ್ರಸಾದ್ ಫೇಸ್‍ಬುಕ್‍ನಲ್ಲಿ ಲೈವ್ ಬರುವುದಕ್ಕೂ, ಕರೊನಾಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಅದನ್ನು ಅವರ ಮಾತಲ್ಲೇ ಕೇಳಿ. `ನಾನು ಸಾಮಾನ್ಯವಾಗಿ ಲೈವ್ ಬರಲ್ಲ. ಅದರ ಅವಶ್ಯಕತೆಯೂ ಇಲ್ಲ. ಈ ಸಂದರ್ಭದಲ್ಲಿ ಕರೊನಾ ಭಯದಿಂದ ಎಲ್ಲರೂ ಮನೆಯಲ್ಲಿ ಕೂತಿದ್ದಾರೆ. ಇಂತಹ ಸಮಯದಲ್ಲಿ ಜನರನ್ನ ನಗಿಸಬೇಕು, ಅವರನ್ನು ಈ ದುಃಖದಿಂದ ಆಚೆ ತರಬೇಕು ಎನ್ನುವುದೇ ನನ್ನ ಉದ್ದೇಶ.

    ನಾನು ಇದುವರೆಗೂ ನಾಲ್ಕು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದೇನೆ. ಒಂದೊಂದು ಚಿತ್ರ ಒಂದೊಂದು ಚಾನೆಲ್‍ನಲ್ಲಿದೆ. `ಮಠ’ ಕಸ್ತೂರಿಯಲ್ಲಿದೆ. `ಎದ್ದೇಳು ಮಂಜುನಾಥ’ ಜೀ ಟಿವಿ, `ಡೈರೆಕ್ಟರ್ಸ್ ಸ್ಪೆಷಲ್’ ಸುವರ್ಣ, `ಎರಡನೇ ಸಲ’ ಕಲರ್ಸ್‍ನಲ್ಲಿದೆ. ನಾಳೆ ಕರೊನಾ ಬಂದು ನಾನು ಸತ್ತು ಹೋದರೆ ಆ ಚಾನೆಲ್‍ನವರೆಲ್ಲಾ ನನ್ನ ಸಿನಿಮಾ ಹಾಕುತ್ತಾರೆ. ಇಂಥ ಸಂದರ್ಭದಲ್ಲಿ ಜನ ನನ್ನ ಸಿನಿಮಾ ಎಂಜಾಯ್ ಮಾಡುತ್ತಿರಬೇಕು ಮತ್ತು ನನ್ನ ಹೆಣ ಸ್ಮಶಾನಕ್ಕೆ ಹೋಗುತ್ತಿರಬೇಕು ಎಂಬುದು ನನ್ನ ಆಸೆ. ನನ್ನ ಸಿನಿಮಾಗಳು ನಗಿಸುವುದಕ್ಕೆ ಸಾಧ್ಯವಾದರೆ, ನಾನು ಸಹ ಅದೇ ರೀತಿ ಮಾಡಬಹುದು ಎಂದನಿಸಿತು. ಮನೆಯಲ್ಲೇ ಕೂತು ನನಗೆ ನಗಿಸುವುದಕ್ಕೆ ಸಾಧ್ಯವಾದರೆ, ಸಮಾಜಕ್ಕೆ ಏನಾದರೂ ಕೊಟ್ಟಂತಾಗುತ್ತದೆ. ನಗೋಣ, ನಗಿಸೋಣ, ಒಂದಿಷ್ಟು ಹಗುರಾಗೋಣ ಅಂತ. ನಾನು ನನ್ನ ಜೀವನದಲ್ಲಿ ಇದುವರೆಗೂ ಕೇಳಿರುವ ಬೆಸ್ಟ್ ಜೋಕ್ಸ್ ಇಟ್ಟುಕೊಂಡು, ಯಾವುದೇ ಗಿಮಿಕ್ ಮಾಡದೆ, ಎಲ್ಲರನ್ನೂ ನಗಿಸೋಣ ಎನ್ನುವುದೇ ನನ್ನ ಈ ಕಾರ್ಯಕ್ರಮದ ಉದ್ದೇಶ’ ಎಂದು ಗುರುಪ್ರಸಾದ್ ತಾವು ಫೇಸ್‍ಬುಕ್ ಲೈವ್ ಬಂದ ಕಾರಣವನ್ನು ಹೇಳಿದ್ದಾರೆ.

    ಅಂದಹಾಗೆ, ಗುರುಪ್ರಸಾದ್ ಸದ್ಯಕ್ಕೆ ಜಗ್ಗೇಶ್ ಅಭಿನಯದ `ರಂಗನಾಯಕ’ ಚಿತ್ರದ ಪ್ರೀಪ್ರೊಡಕ್ಷನ್‍ನಲ್ಲಿ ತೊಡಗಿಸಿಕೊಂಡಿದ್ದು, ಚಿತ್ರಕಥೆ-ಸಂಭಾಷಣೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಕರೊನಾ ಹಾವಳಿ ಕಡಿಮೆಯಾದ ನಂತರ ಚಿತ್ರ, `ರಂಗನಾಯಕ’ ಪ್ರಾರಂಭವಾಗುವ ಸಾಧ್ಯತೆ ಇದೆ.

    Guruprasad Manjunatha ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಮಾರ್ಚ್ 25, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts