More

    ಕಾರ್ತಿಕ್-ಶಾಬಾಜ್ ಸಾಹಸ; ಆರ್‌ಸಿಬಿ ಜಯಭೇರಿ, ರಾಜಸ್ಥಾನ ರಾಯಲ್ಸ್ ಓಟಕ್ಕೆ ತಡೆ

    ಮುಂಬೈ: ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ (44*ರನ್, 23 ಎಸೆತ, 7 ಬೌಂಡರಿ, 1 ಸಿಕ್ಸರ್) ಮತ್ತು ಆಲ್ರೌಂಡರ್ ಶಾಬಾಜ್ ಅಹ್ಮದ್ (45 ರನ್, 26 ಎಸೆತ, 4 ಬೌಂಡರಿ, 3 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಸಾಹಸದ ಬಲದಿಂದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಅಗ್ರಸ್ಥಾನಿ ರಾಜಸ್ಥಾನಕ್ಕೆ ಇದು ಟೂರ್ನಿಯಲ್ಲಿ ಮೊದಲ ಸೋಲಾಗಿದ್ದರೆ, ಆರ್‌ಸಿಬಿ ಸತತ 2ನೇ ಜಯ ಸಾಧಿಸಿ ಬೀಗಿತು.

    ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್‌ಗೆ ಇಳಿದ ರಾಜಸ್ಥಾನ, ಆರಂಭಿಕ ಜೋಸ್ ಬಟ್ಲರ್ (70* ರನ್, 47 ಎಸೆತ, 6 ಸಿಕ್ಸರ್) ಆಸರೆಯಲ್ಲಿ 3 ವಿಕೆಟ್‌ಗೆ 169 ರನ್ ಪೇರಿಸಿತು. ಪಂದ್ಯದ ಮೊದಲ 16 ಓವರ್‌ವರೆಗೂ ಆರ್‌ಸಿಬಿ ನಿಯಂತ್ರಿತ ಬೌಲಿಂಗ್ ಪ್ರದರ್ಶಿಸಿತ್ತು. ಆದರೆ ಶಿಮ್ರೊನ್ ಹೆಟ್ಮೆಯರ್ (42* ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಜತೆಗೂಡಿ ಬಟ್ಲರ್ ಇನಿಂಗ್ಸ್‌ನ ಕೊನೆಯ 4 ಓವರ್‌ಗಳಲ್ಲಿ 62 ರನ್ ದೋಚುವ ಮೂಲಕ ಸವಾಲಿನ ಮೊತ್ತಕ್ಕೆ ನೆರವಾದರು. ಪ್ರತಿಯಾಗಿ ಆರ್‌ಸಿಬಿ 13ನೇ ಓವರ್‌ನಲ್ಲಿ 87 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಭೀತಿ ಎದುರಿಸಿತು. ಆಗ ಜತೆಗೂಡಿದ ಕಾರ್ತಿಕ್-ಶಾಬಾಜ್ ಜೋಡಿ ರಾಜಸ್ಥಾನದ ಬಲಿಷ್ಠ ಬೌಲಿಂಗ್ ವಿಭಾಗದ ಎದುರು ಕೆಚ್ಚೆದೆಯ ನಿರ್ವಹಣೆ ತೋರಿ 6ನೇ ವಿಕೆಟ್‌ಗೆ 33 ಎಸೆತಗಳಲ್ಲೇ 67 ರನ್ ಸಿಡಿಸುವ ಮೂಲಕ ಆರ್‌ಸಿಬಿ ತಂಡವನ್ನು ಗೆಲುವಿನತ್ತ ಮುನ್ನಡೆಸಿತು. ಅಂತಿಮವಾಗಿ ಆರ್‌ಸಿಬಿ 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್ ಪೇರಿಸಿ ಜಯಿಸಿತು.

    ಕೊಹ್ಲಿ ರನೌಟ್, ಕಾಡಿದ ಚಾಹಲ್
    ನಾಯಕ ಫಾಫ್​ ಡು ಪ್ಲೆಸಿಸ್ (29 ರನ್, 20 ಎಸೆತ, 5 ಬೌಂಡರಿ) ಮತ್ತು ಅನುಜ್ ರಾವತ್ (26 ರನ್, 25 ಎಸೆತ, 4 ಬೌಂಡರಿ) ಮೊದಲ ವಿಕೆಟ್‌ಗೆ 55 ರನ್ ಸೇರಿಸುವ ಮೂಲಕ ಆರ್‌ಸಿಬಿ ಚೇಸಿಂಗ್‌ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಆದರೆ ತನ್ನ ಮಾಜಿ ಸ್ಪಿನ್ನರ್ ಯಜುವೇಂದ್ರ ಚಾಹಲ್ (11ಕ್ಕೆ 2) ದಾಳಿಗಿಳಿದ ಬಳಿಕ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿತು. ಪ್ಲೆಸಿಸ್ ವಿಕೆಟ್ ಕಬಳಿಸಿ ಮೊದಲ ಆಘಾತ ನೀಡಿದರು. ರಾವತ್‌ಗೆ ನವದೀಪ್ ಸೈನಿ ಡಗೌಟ್ ದಾರಿ ತೋರಿದರು. ಬಳಿಕ ಚಾಹಲ್ ಓವರ್‌ನಲ್ಲಿ ವಿರಾಟ್ ಕೊಹ್ಲಿ (5), ಡೇವಿಡ್ ವಿಲ್ಲಿ ಜತೆಗಿನ ವಿಕೆಟ್ ನಡುವಿನ ಓಟದ ಗೊಂದಲದಿಂದ ನಾನ್-ಸ್ಟ್ರೈಕರ್‌ನಲ್ಲಿ ರನೌಟ್ ಬಲೆಗೆ ಬಿದ್ದರು. ಮರು ಎಸೆತದಲ್ಲೇ ಡೇವಿಡ್ ವಿಲ್ಲಿ (0) ಬೌಲ್ಡಾದರು. ಇದರಿಂದ ಆರ್‌ಸಿಬಿ 62 ರನ್‌ಗೆ 4 ವಿಕೆಟ್ ಕಳೆದುಕೊಂಡು ತತ್ತರಿಸಿತ್ತು.

    ಬಟ್ಲರ್-ಹೆಟ್ಮೆಯರ್ ಭರ್ಜರಿ ಆಟ
    12ನೇ ಓವರ್‌ನಲ್ಲಿ 3 ವಿಕೆಟ್‌ಗೆ 86 ರನ್ ಗಳಿಸಿದ್ದ ರಾಜಸ್ಥಾನ ಸಾಧಾರಣ ಮೊತ್ತದತ್ತ ಮುಖಮಾಡಿತ್ತು. ಆಗ ಜತೆಗೂಡಿದ ಬಟ್ಲರ್-ಹೆಟ್ಮೆಯರ್ ಜೋಡಿ ಮುರಿಯದ 4ನೇ ವಿಕೆಟ್‌ಗೆ 51 ಎಸೆತಗಳಲ್ಲಿ 83 ರನ್ ಪೇರಿಸುವ ಮೂಲಕ ರಾಜಸ್ಥಾನ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಹೆಟ್ಮೆಯರ್ ಕೂಡ ಕ್ರೀಸ್‌ಗೆ ಇಳಿದ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರು. ಆದರೆ ಕೊನೇ 2 ಓವರ್‌ಗಳಲ್ಲಿ ಇಬ್ಬರೂ ಪೈಪೋಟಿಗಿಳಿದವರಂತೆ ರನ್ ದೋಚಿದರು. ಸಿರಾಜ್ ಎಸೆದ ಇನಿಂಗ್ಸ್‌ನ 19ನೇ ಓವರ್‌ನಲ್ಲಿ 19 ರನ್ ಮತ್ತು ಆಕಾಶ್ ದೀಪ್ ಎಸೆದ ಕೊನೇ ಓವರ್‌ನಲ್ಲಿ 3 ಸಿಕ್ಸರ್ ಸಹಿತ 23 ರನ್ ಸೂರೆಗೈದರು.

    ಡೇವಿಡ್ ವಿಲ್ಲಿ ಆರಂಭಿಕ ಆಘಾತ
    ಯುವ ಆರಂಭಿಕ ಯಶಸ್ವಿ ಜೈಸ್ವಾಲ್ (4) ಮತ್ತೊಮ್ಮೆ ವೈಲ್ಯ ಕಂಡರು. ಪಂದ್ಯದ 2ನೇ ಓವರ್‌ನಲ್ಲೇ ವೇಗಿ ಡೇವಿಡ್ ವಿಲ್ಲಿ, ಜೈಸ್ವಾಲ್ ವಿಕೆಟ್ ಉರುಳಿಸಿದರು. ಆಗ ಜೋಸ್ ಬಟ್ಲರ್-ದೇವದತ್ ಪಡಿಕಲ್ ಜೋಡಿ 2ನೇ ವಿಕೆಟ್‌ಗೆ 49 ಎಸೆತಗಳಲ್ಲಿ 70 ರನ್ ಪೇರಿಸಿ ಆಸರೆಯಾಯಿತು. ಪಡಿಕಲ್ (37 ರನ್, 29 ಎಸೆತ, 2 ಬೌಂಡರಿ, 2 ಸಿಕ್ಸರ್) ತಮ್ಮ ಮಾಜಿ ತಂಡದ ವಿರುದ್ಧ ವಿಶ್ವಾಸದಿಂದಲೇ ಆಟ ಆರಂಭಿಸಿದರು. ಆದರೂ ರಾಯಲ್ಸ್‌ಗೆ ಪವರ್‌ಪ್ಲೇನಲ್ಲಿ ರನ್‌ಬರ ಕಾಡಿತು. ಮೊದಲ 6 ಓವರ್‌ಗಳಲ್ಲಿ 35 ರನ್‌ಗಳಷ್ಟೇ ಬಂದವು. ಪವರ್‌ಪ್ಲೇನಲ್ಲಿ 3 ಓವರ್ ಎಸೆದ ವಿಲ್ಲಿ 16 ರನ್ ನೀಡಿ 1 ವಿಕೆಟ್ ಕಬಳಿಸಿದರು. ವಿಲ್ಲಿ ಎದುರು ಬಟ್ಲರ್ ರನ್‌ಗೆ ತಿಣುಕಾಡಿದರು. ಆದರೆ ಫೀಲ್ಡಿಂಗ್‌ನಲ್ಲಿ ವಿಲ್ಲಿ, ಬಟ್ಲರ್‌ಗೆ ಜೀವದಾನ ನೀಡಿ ಸಹಕರಿಸಿದರು. ಪವರ್‌ಪ್ಲೇ ಬಳಿಕ ಆಕಾಶ್‌ದೀಪ್ ಎಸೆದ ಮೊದಲ ಓವರ್‌ನಲ್ಲಿ ವಿಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಕ್ಯಾಚ್ ಕೈಚೆಲ್ಲಿದರು. ನಂತರ ರನ್‌ಗತಿ ಏರಿಸಲು ಮುಂದಾದ ಪಡಿಕಲ್, ಇನಿಂಗ್ಸ್‌ನ 10ನೇ ಓವರ್ ಎಸೆದ ಹರ್ಷಲ್ ಪಟೇಲ್ ಎಸೆತದಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

    15 ಓವರ್ ಬಟ್ಲರ್ ಪರದಾಟ, ಕೊನೇ 5 ಓವರ್ ಆರ್ಭಟ!
    ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಬಿರುಸಿನ ಶತಕ ಸಿಡಿಸಿದ್ದ ಜೋಸ್ ಬಟ್ಲರ್ ಆರ್‌ಸಿಬಿ ವಿರುದ್ಧ ಆರಂಭದಲ್ಲಿ ರನ್‌ಗಾಗಿ ತಿಣುಕಾಡಿದ್ದರು. ಜತೆಗೆ ಅವರಿಗೆ ಹೆಚ್ಚು ಸ್ಟ್ರೈಕ್ ಕೂಡ ಸಿಗಲಿಲ್ಲ. ಇನಿಂಗ್ಸ್‌ನ ಮೊದಲ 15 ಓವರ್‌ಗಳಲ್ಲಿ ಬಟ್ಲರ್ 33 ಎಸೆತಗಳನ್ನಷ್ಟೇ ಎದುರಿಸಿ 37 ರನ್ ಗಳಿಸಿದ್ದರು. ಬಳಿಕ ಸ್ಲಾಗ್ ಓವರ್ ಆರಂಭವಾಗುತ್ತಿದ್ದಂತೆ ಬಟ್ಲರ್ ಆರ್ಭಟಕ್ಕಿಳಿದರು. ಅದರಲ್ಲೂ ಕೊನೇ 2 ಓವರ್‌ಗಳಲ್ಲಿ ಬಟ್ಲರ್ ಎದುರಿಸಿದ 7 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 27 ರನ್ ಕಸಿದರು. ಬಟ್ಲರ್ 36 ರನ್ ಗಳಿಸಿದ್ದಾಗ ಹರ್ಷಲ್ ಎಸೆತದಲ್ಲಿ ಅಂಪೈರ್ ಎಲ್‌ಬಿ ತೀರ್ಪು ನೀಡಿದ್ದರೂ, ಡಿಆರ್‌ಎಸ್‌ನಲ್ಲಿ ಬಚಾವ್ ಆಗಿದ್ದರು. ಜೋಸ್ ಬಟ್ಲರ್ ಹಾಲಿ ಆವೃತ್ತಿಯಲ್ಲಿ 200 ರನ್ ಪೂರೈಸಿದ ಮೊದಲ ಬ್ಯಾಟರ್ ಎನಿಸಿದರು.

    ಮ್ಯಾಕ್ಸ್‌ವೆಲ್, ಹ್ಯಾಸಲ್‌ವುಡ್ ಅಲಭ್ಯ
    ಆಸೀಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವೇಗಿ ಜೋಶ್ ಹ್ಯಾಸಲ್‌ವುಡ್ ಆರ್‌ಸಿಬಿಗೆ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾದರು. ಗುತ್ತಿಗೆ ಆಟಗಾರರು ಏಪ್ರಿಲ್ 6ರವರೆಗೆ ಐಪಿಎಲ್‌ನಲ್ಲಿ ಆಡಬಾರದು ಎಂಬ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆಯಿಂದಾಗಿ ಮ್ಯಾಕ್ಸ್‌ವೆಲ್, ಈಗಾಗಲೆ ಆರ್‌ಸಿಬಿ ಬಯೋಬಬಲ್ ಸೇರಿದ್ದರೂ ಕಣಕ್ಕಿಳಿಯಲಿಲ್ಲ. ಏ.9ರಂದು ಮುಂಬೈ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ಮತ್ತೊಂದೆಡೆ ಹ್ಯಾಸಲ್‌ವುಡ್ ಇನ್ನೂ ತಂಡ ಕೂಡಿಕೊಂಡಿಲ್ಲ ಮತ್ತು ಏ.12ರಂದು ಸಿಎಸ್‌ಕೆ ವಿರುದ್ಧ ನಡೆಯಲಿರುವ ಪಂದ್ಯದವರೆಗೆ ಆಡಲು ಲಭ್ಯರಿರುವುದಿಲ್ಲ.

    ನೀಲಿಚಿತ್ರ ನಟಿಯಿಂದ ಶಮಿಗೆ ಮೆಚ್ಚುಗೆ; ಕ್ರಿಕೆಟ್ ಪ್ರೇಮಿಗಳಿಗೆ ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts