ಚಿಕ್ಕೋಡಿ: ತಾಲೂಕಿನ ಕೃಷ್ಣಾ ಹಾಗೂ ಉಪನದಿಗಳ ಪ್ರದೇಶದಲ್ಲಿ ಕೆಲದಿನಗಳಿಂದ ಸುರಿಯುತ್ತಿದ್ದ ವರುಣನ ಅಬ್ಬರ ಸ್ವಲ್ಪ ತಗ್ಗಿದೆಯಾದರೂ ಮಹಾರಾಷ್ಟ್ರದ ಮಹಾಬಲೇಶ್ವರ ಸೇರಿ ಕೊಯ್ನ ಮತ್ತಿತರ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನದಿ ನೀರಿನ ಮಟ್ಟದಲ್ಲಿ ಮತ್ತಷ್ಟು ಏರಿಕೆಯಾಗಿದೆ.
ಕೃಷ್ಣಾ ಹಾಗೂ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳು ಮೈದುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದ ಕೃಷಿ ಭೂಮಿಗಳಿಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಲಾರಂಭಿಸಿದೆ. ಹೀಗಾಗಿ ಮತ್ತೊಮ್ಮೆ ಜನರಿಗೆ ಪ್ರವಾಹದ ಆತಂಕ ಮನೆ ಮಾಡಿದ್ದು, ನದಿ ತೀರದಲ್ಲಿ ‘ಹೈ ಅಲರ್ಟ್’ ಘೋಷಣೆ ಮಾಡಲಾಗಿದೆ. ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕು ವ್ಯಾಪ್ತಿಯಲ್ಲಿನ ಕೃಷ್ಣಾ ಹಾಗೂ ದೂಧಗಂಗಾ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕೆಳಹಂತದ 7 ಸೇತುವೆಗಳು ಇನ್ನೂ ಜಲಾವೃತಗೊಂಡಿವೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಸದಲಗಾ-ಬೋರಗಾಂವ ಸೇತುವೆ ಸಂಚಾರ ಸಹ ಶನಿವಾರ ನಸುಕಿನ ವೇಳೆಯಲ್ಲಿ ಕಡಿತಗೊಳ್ಳುವ ಸಂಭವವಿದೆ. ಮುಳುಗಡೆಗೊಂಡ ಸೇತುವೆಗಳು: ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ-ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಬಳಿ ನಿರ್ಮಿಸಿರುವ ಮಲಿಕವಾಡ-ದತ್ತವಾಡ ಸೇತುವೆ ಮತ್ತು ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿದ್ನಾಳ-ಹುನ್ನರಗಿ, ಕಾರದಗಾ-ಭೋಜ, ಭೋಜವಾಡಿ-ಕುನ್ನೂರ, ಜತ್ರಾಟ-ಭೀವಶಿ, ಸಿದ್ನಾಳ-ಅಕ್ಕೋಳ ಸೇರಿ ಕೆಳಹಂತದ 7 ಸೇತುವೆಗಳು ಜಲಾವೃತಗೊಂಡಿವೆ.
ನೀರು ಬಿಡುಗಡೆ: ಮಹಾರಾಷ್ಟ್ರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ರಾಜಾಪುರ ಬ್ಯಾರೇಜ್‌ಗೆ 1.21 ಲಕ್ಷ ಕ್ಯೂಸೆಕ್ ಹಾಗೂ ದೂಧಗಂಗಾ ನದಿಯಿಂದ 30,800 ಕ್ಯೂಸೆಕ್ ಸೇರಿ ಕಲ್ಲೋಳ ಬಳಿಯ ಕೃಷ್ಣಾ ನದಿಗೆ 1,51,800 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಬ್ಯಾರೇಜ್‌ನಿಂದ 1,47,000 ಕ್ಯೂಸೆಕ್, ಆಲಮಟ್ಟಿ ಜಲಾಶದಿಂದ 1,50,000 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಆದರೂ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ.
ಮಳೆ ವಿವರ: ಕೊಯ್ನ- 153 ಮಿ.ಮೀ, ವಾರಣಾ- 88 ಮಿ.ಮೀ., ಕಾಳಮ್ಮವಾಡಿ- 163 ಮಿ.ಮೀ., ನವಜಾ- 106 ಮಿ.ಮೀ, ಮಹಾಬಲೇಶ್ವರ- 166 ಮಿ.ಮೀ., ರಾಧಾನಗರಿ- 148 ಮಿ.ಮೀ., ಪಾಟಗಾಂವ- 290 ಮಿ.ಮೀ., ಕೊಲ್ಲಾಪುರ- 22 ಮಿ.ಮೀ., ಸಾಂಗಲಿ- 05 ಮಿ.ಮೀ. ಮಳೆಯಾಗಿದೆ. ಚಿಕ್ಕೋಡಿ- 11.6 ಮಿ.ಮೀ., ಸದಲಗಾ- 10 ಮಿ.ಮೀ., ಅಂಕಲಿ- 8.4 ಮಿ.ಮೀ., ಜೋಡಟ್ಟಿ-3.4 ಮಿ.ಮೀ., ನಾಗರಮುನ್ನೋಳಿ- 3.2 ಮಿ.ಮೀ. ಮಳೆಯಾಗಿರುವ ವರದಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.