More

    ಹಬ್ಬದ ವೈಭವ, ಸಂಭ್ರಮ ಮರುಕಳಿಸಲಿ…: ನಾಗರಾಜ ಇಳೆಗುಂಡಿ ಅವರ ದಿಕ್ಸೂಚಿ ಅಂಕಣ

    ನಾವು ಈ ಇಡೀ ಜಗತ್ತನ್ನು ಒಂದು ಉತ್ಸವವಾಗಿ ಮಾರ್ಪಡಿಸಬೇಕು. ಮಾನವನ ಕೈಲಿ ಇದು ಸಾಧ್ಯವಿದೆ
    -ಓಶೋ ರಜನೀಶ್

    ಹಬ್ಬದ ವೈಭವ, ಸಂಭ್ರಮ ಮರುಕಳಿಸಲಿ...: ನಾಗರಾಜ ಇಳೆಗುಂಡಿ ಅವರ ದಿಕ್ಸೂಚಿ ಅಂಕಣನಮಗೆ ಹಬ್ಬಹರಿದಿನಗಳೆಂದರೆ ಬರೀ ಆಚರಣೆಯಲ್ಲ. ಅಥವಾ ವಿಶೇಷವಾದ ಖಾದ್ಯ ಮಾಡಿ ತಿಂದುಂಡು ತೇಗಿ ಜಿಹ್ವಾಚಾಪಲ್ಯ ತಣಿಸುವ ದಿನವೂ ಅಲ್ಲ. ಪ್ರತಿ ಹಬ್ಬಕ್ಕೂ ಒಂದೊಂದು ಹಿನ್ನೆಲೆ. ಆ ಹಿನ್ನೆಲೆಯಲ್ಲಿ ತತ್ತ್ವದ ಅವತರಣ. ಆ ತತ್ವದ ಬೆಳಕಿನಲ್ಲಿ ಜೀವನ ಸಾಗಿಸಬೇಕೆಂಬ ಆಶಯ ನಮ್ಮದು. ಹೀಗೆಂದೇ, ಅನೇಕರು ಈ ಹಬ್ಬಗಳ ಒಳಹೊಕ್ಕು ನೋಡದೆ ಬರೀ ಹೊರಗಿನ ಆಚರಣೆಗೆ ಕಣ್ಣನೋಟವನ್ನು ಸೀಮಿತಗೊಳಿಸಿಕೊಂಡು ‘ಇದೆಂತಹ ಹಬ್ಬ ಬರಿ ಅರ್ಥವಿಲ್ಲದ ಆಚರಣೆ’ಎಂದು ಮೂಗೆಳೆಯುವುದೂ ಉಂಟು.

    ‘ಹಬ್ಬಗಳು ಎಂದರೆ ದೇವರತ್ತ ನಾವು ಸಾಗುವ ಮಾರ್ಗದ ನಕ್ಷೆ ಇದ್ದಂತೆ’ ಎನ್ನುತ್ತಾನೆ ಅನಾಮಿಕ ತತ್ತ್ವಜ್ಞಾನಿ. ‘ವಿವೇಕಿಗಳಿಗೆ ಜೀವನವೇ ಒಂದು ಹಬ್ಬ’ ಎನ್ನುವ ಮೂಲಕ, ಹಬ್ಬದ ಮಹಿಮೆಯನ್ನು ಜೀವನಕ್ಕೇ ವಿಸ್ತರಿಸುತ್ತಾನೆ ರಾಲ್ಪ ಎಮರ್ಸನ್. ಈ ಜಗತ್ತೇ ಒಂದು ಮಹಾಉತ್ಸವ ಎಂದು ಜೀವನದ ಸಾರ್ಥಕತೆಯನ್ನು ತೆರೆದಿಡುತ್ತಾರೆ ಮಹಾಕವಿ ರವೀಂದ್ರನಾಥ ಠಾಗೋರ್. ಗಮನಿಸಿ ನೋಡಿದರೆ ನಮ್ಮೆಲ್ಲ ಹಬ್ಬಗಳೂ ವೈಯಕ್ತಿಕತೆಯ ಜತೆಗೆ ಸಾಮೂಹಿಕ ಆಯಾಮವನ್ನೂ ಹೊಂದಿವೆ. ಮನೆಯಲ್ಲಿ ಹಬ್ಬವನ್ನಾಚರಿಸಿ ನಂತರ ಊರವರೆಲ್ಲ ಒಂದೆಡೆ ಸೇರುವುದು ಈ ಸಾಮೂಹಿಕತ್ವದ ಭಾಗವೇ ಆಗಿದೆ. ನಮ್ಮ ಹಬ್ಬಗಳು ಏಕತೆಯನ್ನು ಬೆಸೆಯುವ ಪರಿ ಹಲವು ರೀತಿಗಳಲ್ಲಿ ಕಂಡುಬರುತ್ತದೆ. ಧಾರ್ವಿುಕತೆಯ ಜತೆಗೆ ಜನಜೀವನಕ್ಕೆ ಅಗತ್ಯವಾದ ಆರ್ಥಿಕ ಚಟುವಟಿಕೆಗಳಿಗೂ ಆದ್ಯತೆ ನೀಡಿರುವುದು ಗಮನಾರ್ಹ. ಜೀವನ ಸಾಗಲು ಒಬ್ಬರಿಂದ ಮತ್ತೊಬ್ಬರಿಗೆ ಹಣದ ಚಲಾವಣೆ ಆಗಬೇಕು. ಹಬ್ಬಗಳೂ ಇದಕ್ಕೆ ಸೂಕ್ತ ವೇದಿಕೆ ಕಲ್ಪಿಸುತ್ತವೆ. ಉದಾಹರಣೆಗೆ- ನವರಾತ್ರಿಯನ್ನೇ ತೆಗೆದುಕೊಳ್ಳೋಣ. ನಮ್ಮ ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬದ ವಹಿವಾಟು ಏನು ಕಡಿಮೆಯಾ? ವಿವಿಧ ಜನವರ್ಗಗಳಿಗೆ ಈ ಹಣದ ಪಾಲು ಸಲ್ಲುವ ಮೂಲಕ ಹಬ್ಬ ಈ ಲೆಕ್ಕದಲ್ಲಿಯೂ ಸಾರ್ಥಕತೆ ಪಡೆಯುತ್ತದೆ. ಗುಜರಾತಿನಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆಯುವ ವಹಿವಾಟು ಸಾವಿರಾರು ಕೋಟಿ ರೂ.ಗಳಷ್ಟಿರುತ್ತದೆ. ಅಲ್ಲಿನ ಸಾಂಪ್ರದಾಯಿಕ ಗರ್ಭಾ ನೃತ್ಯ ವಿಶ್ವವಿಖ್ಯಾತ. ಇದರ ಪರಿಕಲ್ಪನೆಯೇ ಅದ್ಭುತ. ಮಣ್ಣಿನ ಲಾಟೀನಿನ ಒಳಗೆ ಒಂದು ದೀಪ ಇರುತ್ತದೆ. ಇದನ್ನು ‘ಗರ್ಭಾ ದೀಪ್’ ಎಂದು ಕರೆಯಲಾಗುತ್ತದೆ. ಈ ದೀಪವು ಜೀವನದ ಸಂಕೇತವಾದರೆ, ಒಳಗಿನ ದೀಪವು ಭ್ರೂಣದ ಸಂಕೇತ. ಈ ಮೂಲಕ, ದೈವತ್ವದ ಸ್ತ್ರೀರೂಪವಾದ ದುರ್ಗಾಮಾತೆಯನ್ನು ಗೌರವಿಸಲಾಗುತ್ತದೆ. ನರ್ತಕರು ದೀಪದ ಸುತ್ತ ವೃತ್ತಾಕಾರದಲ್ಲಿ ನರ್ತಿಸುತ್ತಾರೆ. ಈ ವೃತ್ತವು ಸಮಯದ ಸಂಕೇತ. ಅಂದಹಾಗೆ, ಗುಜರಾತಿನ ನವರಾತ್ರಿ ಉತ್ಸವ ಬಹಳ ಪ್ರಸಿದ್ಧವಾಗಿದ್ದು, ವ್ಯಾಪಾರ ವಹಿವಾಟಿನ ದೃಷ್ಟಿಯಿಂದಲೂ ಮಹತ್ವವಾದುದು. ಭಾರತದ ಪ್ರಮುಖ ಕೈಗಾರಿಕೋದ್ಯಮಗಳ ಒಕ್ಕೂಟವಾದ ಅಸ್ಸೊಚಾಮ್ (ದಿ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ) ವರದಿ ಪ್ರಕಾರ, ನವರಾತ್ರೋತ್ಸವ ಅವಧಿಯಲ್ಲಿ ನಡೆಯುವ ಒಟ್ಟಾರೆ ವ್ಯವಹಾರದ ಪ್ರಮಾಣ 10 ಸಾವಿರ ಕೋಟಿ ರೂ.ಗಿಂತ ಅಧಿಕವಾಗಿರುತ್ತದೆ.

    ಇನ್ನು, ಗಣೇಶೋತ್ಸವ ವಿಚಾರಕ್ಕೆ ಬಂದರೆ, ಈ ಅವಧಿಯಲ್ಲಿ ನಡೆಯುವ ಒಟ್ಟಾರೆ ವಹಿವಾಟು 20 ಸಾವಿರ ಕೋಟಿ ರೂ.ಗಿಂತ ಅಧಿಕ ಎಂದು ಅಸ್ಸೊಚಾಮ್ ಅಂದಾಜಿಸಿದೆ. ಮುಂಬೈ, ಪುಣೆ, ನಾಗಪುರ, ಇಂದೋರ್, ಅಹಮದಾಬಾದ್, ಬೆಂಗಳೂರು ಮುಂತಾದೆಡೆ ಅದ್ದೂರಿಯಾಗಿ ಗಣೇಶೋತ್ಸವ ಆಯೋಜಿಸಲಾಗುತ್ತದೆ. ಮುಂಬೈ ಮಹಾನಗರಿಯೊಂದರಲ್ಲೇ ಸುಮಾರು 15 ಸಾವಿರದಷ್ಟು ಬೃಹತ್ ಮತ್ತು ಸಣ್ಣ ಗಣಪತಿ ಪೆಂಡಾಲ್​ಗಳನ್ನು ಸ್ಥಾಪಿಸಲಾಗುತ್ತದೆ ಎಂದರೆ ಊಹಿಸಿ. ಮತ್ತು ಇಲ್ಲಿನ ಅನೇಕ ಪೆಂಡಾಲ್​ಗಳಲ್ಲಿ ಗಣಪತಿಯನ್ನು ಚಿನ್ನ ಮತ್ತು ವಜ್ರದ ಹಾರಗಳಿಂದ ಅಲಂಕರಿಸಲಾಗುತ್ತದೆ. ಪುಣೆಯಲ್ಲಿ ಸುಮಾರು 6 ಸಾವಿರದಷ್ಟು ಗಣಪತಿ ಪೆಂಡಾಲ್​ಗಳಿರುತ್ತವೆ. ನಮ್ಮಲ್ಲೇ ತೆಗೆದುಕೊಂಡರೆ, ಹುಬ್ಳಳ್ಳಿ, ಬೆಂಗಳೂರು, ಬೆಳಗಾವಿ, ಶಿವಮೊಗ್ಗ ಮುಂತಾದೆಡೆ ನಡೆಯುವ ಗಣೇಶ ಹಬ್ಬ ಏನು ಕಡಿಮೆ ವೈಭವದ್ದಾ? ಕಡಿಮೆ ವಹಿವಾಟಿನದಾ?

    ಭಾರತದಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯುವ ಮತ್ತೊಂದು ಹಬ್ಬವೆಂದರೆ ಅದು ದೀಪಾವಳಿ. ಮೊದಲೆಲ್ಲ ಈ ಸಂದರ್ಭದಲ್ಲಿ ಚೀನೀ ವಸ್ತುಗಳ ಆರ್ಭಟ ಇರುತ್ತಿತ್ತು. ಆದರೆ ಈಚಿನ ವರ್ಷಗಳಲ್ಲಿ ಚೀನಿ ವಸ್ತುಗಳನ್ನು ನಿಷೇಧಿಸಬೇಕೆನ್ನುವ ಕೂಗು ಜೋರಾಗುತ್ತಿರುವುದರಿಂದಾಗಿ ಈ ಪ್ರಮಾಣ ತಗ್ಗಿದೆ. ಉದಾಹರಣೆಗೆ- 2018ರಲ್ಲಿ ದೀಪಾವಳಿ ಸಮಯದಲ್ಲಿ ದೇಶದಲ್ಲಿ ಸುಮಾರು 8 ಸಾವಿರ ಕೋಟಿ ರೂ. ಮೌಲ್ಯದ ಚೀನಿ ಸಾಮಗ್ರಿಗಳು ಬಿಕರಿಯಾಗಿದ್ದವು. ಅದೇ 2019ರಲ್ಲಿ ಈ ಪ್ರಮಾಣ ಸುಮಾರು 3200 ಕೋಟಿ ರೂ.ಗಳಿಗೆ ತಗ್ಗಿತು. ಚೀನೀ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ ಎಂದು ಕೆಲ ವ್ಯಾಪಾರಿಗಳೇ ಸ್ವಯಂಘೋಷಿಸಿಕೊಂಡಿದ್ದರು. ದೀಪಾವಳಿ ಸಂದರ್ಭದಲ್ಲಿ ಪಟಾಕಿಯದೇ ದೊಡ್ಡ ಸದ್ದು. ಅದರಲ್ಲೂ ಪಟಾಕಿ ಎಂದಾಕ್ಷಣ ತಮಿಳುನಾಡಿನ ಶಿವಕಾಶಿ ನೆನಪು ಸಹಜವಾಗಿಯೇ ಆಗುತ್ತದೆ. ಒಂದು ಕಾಲದಲ್ಲಿ ಶಿವಕಾಶಿ ಪಟಾಕಿಗೆ ಪರ್ಯಾಯ ಹೆಸರಿನಂತಿತ್ತು. ಆದರೆ, ಪಟಾಕಿ ಕಾರ್ಖಾನೆಗಳಲ್ಲಿ ಅಗ್ನಿ ಅವಘಡಗಳು, ಬಾಲಕಾರ್ವಿುಕರನ್ನು ಬಳಸಲಾಗುತ್ತದೆ ಎಂಬ ದೂರುಗಳು ಮುಂತಾದ ಕಾರಣಗಳಿಂದಾಗಿ ಈಗ ಅಲ್ಲಿ ಪಟಾಕಿ ಸದ್ದು ಅಷ್ಟಾಗಿ ಇಲ್ಲ. ಸಂವಿಧಾನದ 24ನೇ ಅನುಚ್ಛೇದದ ಪ್ರಕಾರ, ಮಕ್ಕಳನ್ನು ಕೈಗಾರಿಕೆ, ಗಣಿಗಾರಿಕೆ ಅಥವಾ ಇತರ ಯಾವುದೇ ಅಪಾಯಕಾರಿ ಉದ್ಯೋಗಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಅದು ದಂಡನಾರ್ಹ ಅಪರಾಧ. ಅದರಲ್ಲೂ ಪಟಾಕಿಗೆ ಸಂಬಂಧಿಸಿ ಸುಪ್ರೀಂ ಕೋರ್ಟಿನ ಆದೇಶ ಬಂದ ನಂತರದಲ್ಲಿ ಶಿವಕಾಶಿ ಸದ್ದು ಬಹಳ ಕಡಿಮೆಯಾಯಿತು. ಅಲ್ಲಿ ಸುಮಾರು ಶೇ.30ರಿಂದ 40ರಷ್ಟು ಪಟಾಕಿ ತಯಾರಿಕಾ ಕಾರ್ಖಾನೆಗಳು ಮುಚ್ಚಿವೆ ಎಂಬ ಮಾಹಿತಿ ಇದೆ. ವಾಯುಮಾಲಿನ್ಯ ಹೆಚ್ಚಳ ಇತ್ಯಾದಿ ಕಾರಣಕ್ಕೆ ದೇಶದಲ್ಲಿ ‘ಹಸಿರು ಪಟಾಕಿ’ಗೆ ಆದ್ಯತೆ ಕೊಡಲು ಸೂಚಿಸಿದ ಸುಪ್ರೀಂ ಕೋರ್ಟ್, ದೀಪಾವಳಿ, ಹೊಸ ವರ್ಷ ಮುಂತಾದ ಸಂದರ್ಭಗಳಲ್ಲಿ ಪಟಾಕಿ ಹೊಡೆಯಲು ಕಾಲಾವಧಿಯನ್ನೂ ನಿಗದಿಪಡಿಸಿತು. ಆ ನಂತರದಲ್ಲಂತೂ ದೇಶಾದ್ಯಂತ ಪಟಾಕಿ ಬಳಕೆ ಮತ್ತಷ್ಟು ತಗ್ಗಿತು. ಅದಕ್ಕೂ ಮುನ್ನ ಸಹ, ವಿವಿಧ ಸಂಘಟನೆಗಳು ಜಾಗೃತಿ ಮೂಡಿಸಿದ್ದು, ವಿಶೇಷವಾಗಿ ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ವಾಯುಮಾಲಿನ್ಯ ಹೆಚ್ಚಳ ಮತ್ತು ಅದರಿಂದಾಗುವ ದುಷ್ಪರಿಣಾಮಗಳು- ಹೀಗೆ ವಿವಿಧ ಕಾರಣಗಳಿಂದಾಗಿ ಪಟಾಕಿ ಬಳಕೆ ಮೊದಲಿನಷ್ಟು ಇರಲಿಲ್ಲ.

    ದೇಶದಲ್ಲೀಗ ಪಟಾಕಿ ವ್ಯವಹಾರದ ಮೌಲ್ಯ ಸುಮಾರು 1700-1800 ಕೋಟಿ ರೂ. ಇರಬಹುದೆಂದು ಅಂದಾಜಿಸಲಾಗಿದೆ. ಆದರೆ, ಅನಧಿಕೃತವಾಗಿ, ಅಂದರೆ ನಿಯಮಾವಳಿಗಳ ಹಂಗಿಗೆ ಸಿಲುಕದೆ ವ್ಯವಹಾರ ನಡೆಸುವವರೂ ಇದ್ದಾರೆ. ಆ ಲೆಕ್ಕ ಹಿಡಿದರೆ, ವ್ಯವಹಾರ ಪ್ರಮಾಣ ಹೆಚ್ಚಾಗುತ್ತದೆ. ಆದರೂ, ವಷೇವರ್ಷೆ ಈ ಪ್ರಮಾಣ ಕಡಿಮೆಯಾಗುತ್ತಿದೆ. ಪಟಾಕಿಯಿಂದ ಅನೇಕ ತೊಂದರೆಗಳು ನಿಜವಾದರೂ, ಈ ಉದ್ಯಮವನ್ನು ಅವಲಂಬಿಸಿರುವವರ ಸಂಖ್ಯೆ ಅಗಾಧವಾಗಿದೆ. ಪಟಾಕಿ ಉದ್ಯಮದ ಕಾರ್ವಿುಕರು, ಸಾರಿಗೆ, ವಿತರಣೆ, ಮಾರಾಟ ಎಲ್ಲ ಸೇರಿಸಿದರೆ ಸುಮಾರು 20 ಲಕ್ಷ ಜನರು ಈ ಉದ್ಯಮದಲ್ಲಿ ಜೀವನೋಪಾಯ ಕಂಡುಕೊಂಡಿದ್ದಾರೆ ಎಂದು ವ್ಯಾಪಾರಿ ಸಂಘಟನೆಗಳು ಅಂದಾಜಿಸಿವೆ. ಇನ್ನು, ದೀಪಾವಳಿಯಂಥ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ಲೈಸೆನ್ಸ್ ಪಡೆಯುವವರ ಸಂಖ್ಯೆ ಎರಡು ವರ್ಷ ಹಿಂದೆ ಸುಮಾರು 80 ಲಕ್ಷದಷ್ಟಿತ್ತು. ಈಗ ಪಟಾಕಿ ಮಾರಾಟಕ್ಕೂ ಕೆಲ ನಿಬಂಧನೆಗಳನ್ನು ಹಾಕಲಾಗಿದೆ. ಸಾರ್ವಜನಿಕ ಪ್ರದೇಶದಿಂದ ದೂರದಲ್ಲಿರಬೇಕು, ಇಂತಿಷ್ಟೇ ಜಾಗದಲ್ಲಿರಬೇಕು, ಅಗ್ನಿಶಾಮಕ ವಾಹನ ಹೋಗಲು ಅವಕಾಶ ಇರಬೇಕು- ಇತ್ಯಾದಿ. ಹೀಗಾಗಿ ಪಟಾಕಿ ಮಾರಾಟಗಾರರ ಸಂಖ್ಯೆಯೂ ಗಮನಾರ್ಹವಾಗಿ ತಗ್ಗಿದೆ. ಭಾರತದಂತಹ ದೊಡ್ಡ, ಅಧಿಕ ಜನಸಂಖ್ಯೆ ಇರುವ ದೇಶಗಳಲ್ಲಿ ಇದೊಂದು ಭಾರಿ ಸಮಸ್ಯೆ. ಅಂದರೆ, ಒಂದೆಡೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗುತ್ತಲೇ ಇರಬೇಕು. ಅದೇ ಸಂದರ್ಭದಲ್ಲಿ, ವಾಯುಮಾಲಿನ್ಯವೋ, ಮತ್ತಾವುದೋ ಸಮಸ್ಯೆಯ ಕಾರಣಕ್ಕೆ ಈಗ ಕಾನೂನುಕಟ್ಟಳೆಗಳು ಬಿಗಿಯಾಗುತ್ತಿವೆ. ಹೀಗಾದಾಗ ಅಂಥ ಕೈಗಾರಿಕೆ ಮುಚ್ಚಬೇಕು ಅಥವಾ ವ್ಯವಹಾರ ಪ್ರಮಾಣ ಕಡಿಮೆ ಮಾಡಿಕೊಳ್ಳಬೇಕು. ಆಗಲೂ ಉದ್ಯೋಗ ನಷ್ಟ, ಆದಾಯ ಹಾನಿ. ಉದಾಹರಣೆಗೆ ತಂಬಾಕು ಬೆಳೆಯನ್ನೇ ತೆಗೆದುಕೊಂಡರೆ-ದೇಶದಲ್ಲಿ 40 ಲಕ್ಷಕ್ಕೂ ಅಧಿಕ ಮಂದಿ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ತಂಬಾಕು ಆರೋಗ್ಯಕ್ಕೆ ಹಾನಿಕಾರಕ, ಹಾಗಾಗಿ ತಂಬಾಕು ಉತ್ಪನ್ನಗಳನ್ನು ನಿಷೇಧಿಸಿಬಿಡಿ ಎಂಬುದು ಆರೋಗ್ಯತಜ್ಞರ ವರಾತ. ಹಾಗಂತ ಸರ್ಕಾರಗಳಿಗೆ ಇದೆಲ್ಲ ಗೊತ್ತಿಲ್ಲ ಅಂತಲ್ಲ. ಆದರೆ ಆಳುವವರ ಇಕ್ಕಟ್ಟು, ಬಿಕ್ಕಟ್ಟುಗಳೇ ಬೇರೆ. ಇಂಥ ಕ್ರಮಕ್ಕೆ ಮುಂದಾದರೆ, ಈ ವಲಯದ ಜನರ ಅಸಮಾಧಾನಕ್ಕೆ ಗುರಿಯಾಗಬೇಕಾದ ಸಾಧ್ಯತೆ; ಜತೆಗೆ ತೆರಿಗೆ, ಉದ್ಯೋಗನಷ್ಟ… ಹೀಗೆ ಸರ್ಕಾರಗಳಿಗೆ ನಾನಾ ತಲೆಬೇನೆಗಳು. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದು, ‘ಮಧ್ಯಮಮಾರ್ಗ’ ಅನ್ವೇಷಿಸುವುದು ಸುಲಭವಲ್ಲ.

    ಕರೊನಾದಿಂದಾಗಿ ಈಗ ಸದ್ಯಕ್ಕೆ ನಮ್ಮ ಹಬ್ಬಗಳು, ಆಚರಣೆಗಳ ಮೇಲೆ ಪರಿಣಾಮವಾಗಿದೆ. ಅದರಲ್ಲೂ ವಿಶೇಷವಾಗಿ ದಸರಾ, ದೀಪಾವಳಿ, ಗಣೇಶ ಚೌತಿ ಮುಂತಾದ ದೊಡ್ಡ ಹಬ್ಬಗಳ ಸಂದರ್ಭದಲ್ಲಿ ನಡೆಯುವ ದೊಡ್ಡ ಮಟ್ಟದ ವ್ಯಾಪಾರ ವಹಿವಾಟಿಗೂ ಏಟು ಬಿದ್ದಿದೆ. ಈ ನಷ್ಟದ ಬಿಸಿ ಹೂವು ಮಾರುವವರಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಗಳವರೆಗೆ ವ್ಯಾಪಿಸಿದೆ. ಮೊದಲೇ ಹೇಳಿದಂತೆ, ನಮ್ಮ ಹಬ್ಬಹರಿದಿನಗಳೆಂದರೆ, ಸಾಮೂಹಿಕ ಆಯಾಮವನ್ನೂ ಹೊಂದಿರುತ್ತವೆ. ಅಂದರೆ, ಸರ್ವರ ಒಳಿತು. ಒಬ್ಬರಿಂದ ಒಬ್ಬರಿಗೆ ಹಣದ ಹರಿವು ನಡೆದಾಗಲೇ ಪ್ರಪಂಚ ಸಾಗುವುದು. ಕೇಂದ್ರ ಸರ್ಕಾರ ಈಚೆಗೆ ತನ್ನ ನೌಕರರಿಗೆ ಬೋನಸ್ ಮತ್ತು ಎಲ್​ಟಿಸಿ ಘೋಷಿಸಿತಲ್ಲ, ಅದರ ಹಿಂದಿನ ಒಂದು ಉದ್ದೇಶ ಸಹ, ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಲಿ, ತನ್ಮೂಲಕ ಆರ್ಥಿಕ ಚಟುವಟಿಕೆಗೆ ಅಷ್ಟರಮಟ್ಟಿಗೆ ಇಂಬು ಸಿಗಲಿ ಎಂಬುದಾಗಿತ್ತು. ನಮ್ಮ ದೇಶದ ಆರ್ಥಿಕ ಚಟುವಟಿಕೆಗೆ ಇಂಬು ಕೊಡುವ ಅಂಶಗಳಲ್ಲಿ ಹಬ್ಬಗಳಿಗೂ ಪ್ರಮುಖ ಸ್ಥಾನವಿದೆ. ಜೀವನವೇ ಹಾಗೆ. ‘ನೀ ನನಗಿದ್ದರೆ ನಾ ನಿನಗೆ’. ಓಣಂ, ರಾಮನವಮಿ, ಕೃಷ್ಣ ಜನ್ಮಾಷ್ಟಮಿ, ರಾಮನವಮಿ, ಮಹಾಶಿವರಾತ್ರಿ, ದೀಪಾವಳಿ… ನಮ್ಮ ಇಂಥ ವಿಶೇಷ ದಿನಗಳು ಕಳೆಗಟ್ಟದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಆದಷ್ಟು ಬೇಗ ಈ ಕರೊನಾ ಕರಿನೆರಳು ಕೊನೆಯಾಗಲಿ, ನಾಡಿನ ಎಲ್ಲ ದೇಗುಲಗಳಲ್ಲಿ ಮತ್ತು ಮಠಮಾನ್ಯಗಳಲ್ಲಿ ಮೊದಲಿನಂತೆ ಭಕ್ತರ ಕಲರವ ತುಂಬಲಿ, ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾದ ಹಬ್ಬಹರಿದಿನಗಳಿಗೆ ಮೊದಲಿನ ಸಡಗರ ಮತ್ತೆ ಪ್ರಾಪ್ತವಾಗಲಿ ಎಂಬುದು ಈ ಹೊತ್ತಿನ ಪ್ರಾರ್ಥನೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts