More

    ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣ: ಪೆಡ್ಲರ್​ಗಳನ್ನು ಸಿಲುಕಿಸಲು ಡಿಜಿಟಲ್ ಸಾಕ್ಷ್ಯ

    ಬೆಂಗಳೂರು: ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಸುಳಿಗೆ ಸಿಲುಕಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಕೂಟಕ್ಕೆ ಡಿಜಿಟಲ್ ಸಾಕ್ಷ್ಯಗಳೇ ಮುಖ್ಯವಾಗುವ ಎಲ್ಲ ಲಕ್ಷ್ಮಣಗಳು ಕಾಣುತ್ತಿವೆ.

    ಡ್ರಗ್ಸ್ ಗ್ಯಾಂಗ್ ವಿರುದ್ಧ ಸಿಸಿಬಿ ಕಾರ್ಯಾಚರಣೆ ಶುರು ಮಾಡಿರುವ ವಿಚಾರ ಜೂನ್​ನಲ್ಲಿಯೇ ರಾಗಿಣಿ ಸಹಚರರಿಗೆ ಲಭ್ಯವಾಗಿತ್ತು. ಅಂದಿನಿಂದಲೇ ಸಾಕ್ಷ್ಯನಾಶದಲ್ಲಿ ಗ್ಯಾಂಗ್ ನಿರತವಾಗಿತ್ತು. ಅಷ್ಟರಲ್ಲಿ ಬಾಣಸವಾಡಿ ಠಾಣೆಯಲ್ಲಿ 2018ರ ನ.2ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಜಯನಗರ ಆರ್​ಟಿಒ ಕಚೇರಿ ಎಫ್​ಡಿಎ ರವಿಶಂಕರ್​ನನ್ನು ಮೊದಲು ಬಂಧಿಸಿದ್ದರು. ಅಲರ್ಟ್ ಆದ ಪೆಡ್ಲರ್​ಗಳು ಡ್ರಗ್ಸ್ ಸೇವನೆ ಮತ್ತು ಮಾರಾಟದಿಂದ ದೂರವಿದ್ದರು. ಮನೆಯಲ್ಲಿದ್ದ ಮಾದಕವಸ್ತು, ಮೊಬೈಲ್​ನಲ್ಲಿನ ಸಂದೇಶಗಳ ನಾಶ ಮಾಡಿ ಸಜ್ಜನರಂತೆ ಜೀವನ ನಡೆಸುತ್ತಿದ್ದರು.

    ಸಿಸಿಬಿ ಪೊಲೀಸರು ಕೋರ್ಟ್​ನಿಂದ ವಾರಂಟ್ ಪಡೆದು ದಾಳಿ ನಡೆಸಿದಾಗಲೂ ಮನೆಗಳಲ್ಲಿ ಡ್ರಗ್ಸ್ ಪತ್ತೆಯಾಗಿಲ್ಲ. ಆ ವೇಳೆಗಾಗಲೇ ಸಿಸಿಬಿಯ ಮತ್ತೊಂದು ತಂಡ ರಾಗಿಣಿ ಡ್ರಗ್ಸ್ ಕೂಟದ ಎಲ್ಲ ಸದಸ್ಯರ ಮೊಬೈಲ್ ನಂಬರ್ ಕರೆ ವಿವರ ಸಂಗ್ರಹಿಸಿತ್ತು.

    ಒಬ್ಬೊಬ್ಬರ ಮನೆ ಮೇಲೆ ದಾಳಿ ನಡೆಸಿ ಮೊಬೈಲ್, ಪೆನ್​ಡ್ರೖೆವ್, ಸಿಸಿ ಕ್ಯಾಮರಾ, ಲ್ಯಾಪ್​ಟಾಪ್, ಹಾರ್ಡ್ ಡಿಸ್ಕ್ ಜಪ್ತಿ ಮಾಡಿದ್ದರು. ಈ ಆಧಾರದ ಮೇಲೆ ರಾಗಿಣಿ, ಸಂಜನಾ, ಲೂಪ್ ಪೆಪ್ಪರ್, ಪ್ರಶಾಂತ್ ರಾಂಕಾ, ನಯಾಜ್, ರಾಹುಲ್ ತೋನ್ಸೆ, ವಿರೇನ್ ಖನ್ನಾ ಮತ್ತು ವೈಭವ್ ಜೈನ್​ನನ್ನು ಬಂಧಿಸಿತ್ತು. ಆದರೆ, ಯಾರ ಬಳಿಯೂ ಅಂದುಕೊಂಡ ಪ್ರಮಾಣದ ಡ್ರಗ್ಸ್ ಪತ್ತೆಯಾಗಿರಗಲಿಲ್ಲ. ಪೇಜ್-3 ಪಾರ್ಟಿ ಆಯೋಜಕರು ಮತ್ತು ಸೆಲೆಬ್ರಿಟಿಗಳು ಆದ ಕಾರಣ ವಿಚಾರಣೆ ವೇಳೆ ಮೌನಕ್ಕೆ ಶರಣಾಗಿದ್ದಾರೆ. ಸಾಕ್ಷ್ಯ ಮುಂದಿಟ್ಟರೂ ಗೊತ್ತಿಲ್ಲ ಎಂಬುದಷ್ಟೇ ಉತ್ತರ ಬರುತ್ತಿದೆ. ಪೊಲೀಸ್ ಭಾಷೆಯಲ್ಲಿ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಿಸಿಬಿ ತನಿಖಾಧಿಕಾರಿಗಳು ಡಿಜಿಟಲ್ ಸಾಕ್ಷ್ಯಗಳ ಸಂಗ್ರಹಿಸಿ ಪ್ರಕರಣ ಬಲಗೊಳಿಸಲು ಮುಂದಾಗಿದ್ದಾರೆ.

    ಡೋಪಿಂಗ್ ಟೆಸ್ಟ್​ಗೆ ತಲೆಗೂದಲು ಸಂಗ್ರಹ

    ಬೆಂಗಳೂರು: ಡ್ರಗ್ಸ್ ಕೇಸಿನಲ್ಲಿ ಸಿಲುಕಿರುವ ನಟಿಯರು, ಪೇಜ್-3 ಪಾರ್ಟಿ ಆಯೋಜಕರ ಡೋಪಿಂಗ್ ಪರೀಕ್ಷೆಗಾಗಿ ತಲೆಗೂದಲು ಪಡೆಯಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

    ಹೇರ್ ಪೊಲಿಕ್ ಪರೀಕ್ಷೆ: ಮಾದಕ ವ್ಯಸನಿ ಡ್ರಗ್ಸ್ ಸೇವಿಸಿದ ಒಂದೂವರೆ ತಿಂಗಳ ಬಳಿಕ ವ್ಯಸನಿಯ ತಲೆಗೂದಲಿನ ಬೇರಿಗೆ ಡ್ರಗ್ಸ್ ಅಂಶ ಸೇರುತ್ತದೆ. ಕೂದಲಿನ ಬೇರಿನಲ್ಲಿ ಡ್ರಗ್ಸ್ ಕಣಗಳು ಲೀನವಾಗಲಿವೆ. ಕೊಕೇನ್ ಅಥವಾ ಎಂಡಿಎಂಎ ಸೇವಿಸಿದರೆ ಅದೇ ಅಂಶವೇ ತಲೆಗೂದಲಿನಲ್ಲಿ ಪತ್ತೆಯಾಗಲಿದೆ. ಈ ಪರೀಕ್ಷೆಗೆ ಹೇರ್ ಪೊಲಿಕ್ ಪರೀಕ್ಷೆ ಎನ್ನಲಾಗುತ್ತದೆ.

    ಕರೆಗಳ ವಿವರ ಜಾಲಾಡಿದ ಸಿಸಿಬಿ

    ರಾಗಿಣಿ, ಸಂಜನಾ, ವಿರೇನ್ ಖನ್ನಾ, ರವಿಶಂಕರ್ ಸೇರಿ ಎಲ್ಲ ಆರೋಪಿಗಳ ಮೊಬೈಲ್ ನಂಬರ್​ಗಳ ಸಿಡಿಆರ್ (ಕರೆಗಳ ವಿವರ) ಪಡೆದಿರುವ ಸಿಸಿಬಿ ಅಧಿಕಾರಿಗಳು 10,500 ನಂಬರ್​ಗಳನ್ನು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಜತೆ ಹೆಚ್ಚು ಸಂಭಾಷಣೆ ನಡೆಸಿರುವ 150 ಮಂದಿಯ ಪಟ್ಟಿ ಸಿದ್ಧಪಡಿಸಿ ಅವರ ಹಿನ್ನೆಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ರಾಗಿಣಿ ಸಿಂಡಿಕೇಟ್​ನಲ್ಲಿ ಪೆಡ್ಲರ್​ಗಳು ಇರುವುದು ಸೇರಿರುವುದು ದೃಢವಾಗಿದೆ. ಉಳಿದವರು ಯಾವ ಉದ್ದೇಶಕ್ಕೆ ಸಂಪರ್ಕದಲ್ಲಿ ಇದ್ದರೂ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದು, ಕರೆ ವಿವರ ಸಿಸಿಬಿಗೆ ಪ್ರಮುಖ ಸಾಕ್ಷ್ಯ ಆಗಲಿವೆ.

    ವಾಟ್ಸ್​ಆಪ್ ಸಂದೇಶ ಸಂಗ್ರಹ

    ಆ.21ರಂದು ಎನ್​ಸಿಬಿ ಅಧಿಕಾರಿಗಳು ಪೆಡ್ಲರ್ ಡಿ.ಅನಿಕಾ ಗ್ಯಾಂಗ್ ಸೆರೆ ಸಿಗುತ್ತಿದಂತೆ ರಾಗಿಣಿ ಸಿಂಡಿಕೇಟ್ ಎಚ್ಚರವಹಿಸಿ ಸಂಪರ್ಕ ಕಡಿತ ಮಾಡಿಕೊಂಡಿತ್ತು. ವಾಟ್ಸ್​ಆಪ್ ಸಂದೇಶ ನಾಶ ಮಾಡಿತ್ತು. ಆದರೆ, ಸಿಸಿಬಿ ಪೊಲೀಸರು ಆರೋಪಿಗಳ ಮೊಬೈಲ್ ಜಪ್ತಿ ಮಾಡಿ ಸಿಐಡಿ ಸೈಬರ್ ಲ್ಯಾಬ್ ತಜ್ಞರ ಸಹಾಯದಿಂದ ಆರೇಳು ತಿಂಗಳ ಹಳೆಯ ವಾಟ್ಸ್​ಆಪ್ ಚಾಟಿಂಗ್ ಸಂದೇಶಗಳನ್ನು ಪತ್ತೆಹಚ್ಚಿದೆ. ಕೋಡ್ ವರ್ಡ್​ಗಳಲ್ಲಿ ಪೆಡ್ಲರ್​ಗಳ ಜತೆ ಚಾಟ್ ಮಾಡಿರುವುದು ಬೆಳಕಿಗೆ ಬಂದಿದೆ. ಟೆಸ್ಟ್​ನಲ್ಲಿ ಡ್ರಗ್ಸ್ ಸೇವನೆ ದೃಢವಾದರೆ ಚಾಟ್ ಮಾಡಿರುವುದಕ್ಕೆ ಲಿಂಕ್ ಆಗಲಿದ್ದು, ಡಿಜಿಟಲ್ ಸಾಕ್ಷ್ಯ ಬಲ ಗೊಳ್ಳಲಿದೆ.

    ಎಫ್​ಎಸ್​ಎಲ್ ವರದಿ

    ಆರೋಪಿಗಳ ಬಳಿ ಮತ್ತು ಮನೆಯಲ್ಲಿ ಜಪ್ತಿ ಮಾಡಿರುವ ಪೆನ್​ಡ್ರೖೆವ್, ಹಾರ್ಡ್​ಡಿಸ್ಕ್, ಲ್ಯಾಪ್​ಟಾಪ್ ಸೇರಿ ಕೆಲ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇದರಲ್ಲಿ ಡ್ರಗ್ಸ್ ಸಂಬಂಧ ಚರ್ಚೆ ನಡೆಸಿರುವುದು ಅಥವಾ ಮನೆಯಲ್ಲಿ ಜಪ್ತಿ ಮಾಡಿರುವ ದಿನಬಳಕೆ ವಸ್ತುಗಳಲ್ಲಿ ಮಾದಕ ದ್ರವ್ಯದ ಅಣು ಕಂಡುಬಂದರೂ ನಟಿಯರಿಗೆ ಸಂಕಷ್ಟ ತಪ್ಪಿದಲ್ಲ.

    ಡ್ರಗ್ಸ್​ಮುಕ್ತ ರಾಜ್ಯ ನಿರ್ಮಾಣ ಸಂಕಲ್ಪ

    ಬೆಂಗಳೂರು: ರಾಜ್ಯದ ಡ್ರಗ್ಸ್ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳು ಹಾಗೂ ಯಾವುದೇ ರಾಜಕೀಯ ನಾಯಕರ ಮಕ್ಕಳು ಭಾಗಿಯಾಗಿದ್ದರೂ, ಅವರ ವಿರುದ್ಧ ಕ್ರಮ ಜರುಗಿಸಿ ಡ್ರಗ್ಸ್​ಮುಕ್ತ ರಾಜ್ಯ ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.

    ಟೆಸ್ಟ್​ಗೆ ಸಂಜನಾ ಕಿರಿಕ್

    ಬೆಂಗಳೂರು: ಸ್ಯಾಂಡಲ್​ವುಡ್ ಮಾದಕ ದ್ರವ್ಯ ದಂಧೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ಸಂಜನಾ ಗಲ್ರಾನಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ (ಡೋಪಿಂಗ್ ಟೆಸ್ಟ್) ಒಳಗಾಗಲು ನಿರಾಕರಿಸಿ ರಂಪಾಟ ಮಾಡಿದ್ದಾಳೆ.

    ಗುರುವಾರ ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್ ತಂಡ ಸಂಜನಾ ಮತ್ತು ರಾಗಿಣಿ ಸೇರಿ 6 ಆರೋಪಿಗಳನ್ನು ಮಲ್ಲೇಶ್ವರದ ಕೆ. ಸಿ.ಜನರಲ್ ಆಸ್ಪತ್ರೆಗೆ ಕರೆತಂದು ಡೋಪಿಂಗ್ ಟೆಸ್ಟ್ ನಡೆಸಲು ಮುಂದಾಗಿತ್ತು. ಆಗ ಸಂಜನಾ, ‘ನನ್ನ ಬಕ್ರಾ ಮಾಡಿ ಪರೀಕ್ಷೆಗೆ ಕರೆದಿದ್ದೀರಾ’ ಎಂದು ಕಿರಿಕಿರಿ ಮಾಡಿದ್ದಾಳೆ. ‘ಪರೀಕ್ಷೆಗೆ ಒಳಗಾಗದೆ ಹೋದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸರು ಎಚ್ಚರಿಕೆ ನೀಡಿದಾಗ ಸುಮ್ಮನಾಗಿ ರಕ್ತ ಮಾದರಿ ನೀಡಿದ್ದಾಳೆ. ನಟಿ ರಾಗಿಣಿ ಸೇರಿ ಇತರ ಆರೋಪಿಗಳು ಯಾವುದೇ ಕಿರಿಕ್ ಇಲ್ಲದೆ ಪರೀಕ್ಷೆಗೊಳಗಾಗಿದ್ದಾರೆ.

    ಸಂಜನಾ, ‘ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ಯಾರಿಗೋ ಕಾಲ್ ಮಾಡಿದರೆ, ಅವರು ಮತ್ಯಾರಿಗೋ ಫೋನ್ ಮಾಡಿದರೆ ನನಗೂ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾಳೆ. ನಟಿಗೆ ಮೃದು ಮಾತಿನಲ್ಲೇ ಇನ್​ಸ್ಪೆಕ್ಟರ್ ಪುನೀತ್ ತಿಳಿ ಹೇಳಲು ಯತ್ನಿಸಿದ್ದಾರೆ. ಅವರ ಮಾತಿಗೆ ಜಗ್ಗದ ಸಂಜನಾ, ‘ಸಾಹೇಬ್ರೇ ನನ್ನ ಮಾತನ್ನು ಕೇಳಿಸಿಕೊಳ್ಳಿ. ನನ್ನನ್ನು ಬಕ್ರಾ ಮಾಡಿ ಪರೀಕ್ಷೆಗೆ ಕರೆತಂದಿದ್ದೀರಾ’ ಎಂದು ಕಿರಿಕ್ ತೆಗೆದಿದ್ದಾಳೆ. ‘ನಾವು ಡೋಪಿಂಗ್

    ಟೆಸ್ಟ್​ಗೆ ಕೋರ್ಟ್ ಅನುಮತಿ ಪಡೆದಿದ್ದೇವೆ’ ಎಂದು ಪೊಲೀಸರು ಹೇಳಿದರೂ ರಂಪಾಟ ನಿಲ್ಲಿಸಿಲ್ಲ. ‘ವೈದ್ಯಕೀಯ ಪರೀಕ್ಷೆಗೊಳಗಾಗುವುದು ಬಿಡುವುದು ನನ್ನ ಮೂಲಭೂತ ಹಕ್ಕು. ನನಗೆ ನನ್ನ ಲಾಯರ್ ಹೇಳಿದ್ದಾರೆ ಎಂದು ಮತ್ತೆ ಪ್ರಶ್ನಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಜನಾ ರಂಪಾಟ ಮಾಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.

    ಡ್ರಗ್ಸ್ ವಿಚಾರದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ, ಸಮಗ್ರ ತನಿಖೆ ನಡೆಸಲಾಗುತ್ತಿದೆ. ಹತ್ತಾರು ವರ್ಷದಿಂದ ಸಮಸ್ಯೆ ಇದ್ದರೂ ಕೈಕಟ್ಟಿ ಕೂರಲಾಗಿತ್ತು, ಈಗ ದೇಶದ ಇತಿಹಾಸದಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ.

    | ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts