More

  ಬರ ಪರಿಹಾರ ಶೀಘ್ರ ಬಿಡುಗಡೆ ಮಾಡಿದ್ದರೆ ರಾಜ್ಯಾದ್ಯಂತ ಹೋರಾಟ : ರೈತ ಮುಖಂಡ ಕುರುಬೂರು ಶಾಂತಕುಮಾರ್ ಎಚ್ಚರಿಕೆ

  ಮೈಸೂರು: ರೈತರಿಗೆ 20 ದಿನಗಳ ಒಳಗೆ ಬರ ಪರಿಹಾರ ನ್ಯಾಯಯುತವಾಗಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗು ವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.

  ನಗರದ ಜಲದರ್ಶಿನಿ ಅತಿಥಿ ಗೃಹ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಬರ ಹಾಗೂ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಬೆಳೆ ನಷ್ಟ ಪರಿಹಾರ ನ್ಯಾಯಯುತವಾಗಿ ನೀಡಲು ಸರ್ಕಾರಕ್ಕೆ ಸಾಧ್ಯವಾಗ ದಿದ್ದರೆ ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿ ಮಾಡಿ ಈ ಮೂಲಕ ವಿಮಾ ಪರಿಹಾರ ಕೊಡಿಸಲಿ. ನಾಟಕೀಯವಾಗಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದು ಬೇಡ. ರಾಜ್ಯದ ಎಲ್ಲ ಕೆರೆಗಳ ಹೂಳು ತೆಗೆಸಿ ರೈತರ ಜಮೀನುಗಳಿಗೆ ಸರಬರಾಜು ಮಾಡಿ ಭೂಮಿ ಫಲವತ್ತತೆಗೆ ಒತ್ತು ನೀಡುವ ಕಾಮಗಾರಿಯನ್ನು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

  ಬರಗಾಲ ಹಿನ್ನೆಲೆಯಲ್ಲಿ ಕಾವೇರಿ ಅಚ್ಚುಕಟ್ಟು ಭಾಗದ ರೈತರ ಜಮೀನುಗಳಿಗೆ ಕಾಲುವೆ ಮೂಲಕ ನೀರು ಹರಿಸಲು ಸಾಧ್ಯವಿಲ್ಲ, ಹಾಗಾಗಿ ರೈತರು ಬೆಳೆ ಬೆಳೆಯಬಾರದು ಎಂದು ರಾಜ್ಯ ಸರ್ಕಾರವೇ ಆದೇಶ ಹೊರಡಿಸಿತ್ತು. ಹೀಗಾಗಿ ಸಾಕಷ್ಟು ರೈತರು ಬೆಳೆ ಬೆಳೆದಿಲ್ಲ. ಆದರೆ, ಇದಿಗ ಬೆಳೆ ಬೆಳೆಯದ ರೈತರಿಗೆ ಯಾವುದೇ ಪರಿಹಾರ ನೀಡದ ಸರ್ಕಾರ, ಬೆಳೆ ನಷ್ಟಕ್ಕೆ ಮಾತ್ರ ಪರಿಹಾರ ನೀಡಲಾಗುವುದು ಎಂದು ಹೇಳುತ್ತಿರುವುದು ಸರ್ಕಾರ ಇಬ್ಬಗೆ ನೀತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಜಿಲ್ಲೆಯಾದ್ಯಂತ ಮಳೆ ಹಾಗೂ ಬಿರುಗಾಳಿ ಹಾನಿಯಿಂದ ರೈತರ ದನ-ಕರು ಕೊಟ್ಟಿಗೆ, ಕೋಳಿ ಫಾರಂ, ಬಾಳೆ ಬೆಳೆ, ತರಕಾರಿ ಬೆಳೆಗಳು ನಾಶವಾಗಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಕೂಡಲೇ ನಷ್ಟ ಪರಿಹಾರ ಬಿಡುಗಡೆಗೊಳಿಸಬೇಕು. ಎನ್‌ಆರ್‌ಇಜಿಯಿಂದ ಕೆಲಸ ಮಾಡಿದ ಕಾರ್ಮಿಕರಿಗೆ ಮೂರು ತಿಂಗಳಾದರೂ ಹಣ ಬಿಡುಗಡೆಯಾಗಿಲ್ಲ. ಖಾಸಗಿ ಫೈನಾನ್ಸ್‌ಗಳು ಸಾಲ ವಸೂಲಾತಿಗಾಗಿ ಖಾಸಗಿ ಗೂಂಡಾಗಳ ಬಲ ಪ್ರಯೋಗ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

  ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಅತ್ತಹಳ್ಳಿ ದೇವರಾಜ್, ಕಿರಗಸೂರು ಶಂಕರ್, ಉಡಿಗಾಲ ರೇವಣ್ಣ, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಬಿ.ಪಿ. ಪರಶಿವಮೂರ್ತಿ, ಕುರುಬೂರ್ ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜೇಂದ್ರ, ರಾಜೇಶ, ಸುನೀಲ್, ಅಂಬಳೆ ಮಂಜುನಾಥ, ರೂಪಾ ಹಾಗೂ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts