More

    ಉಡುಪಿಯಲ್ಲಿ ಡಿಜಿಟಲ್ ಗ್ರಂಥಾಲಯ ಆರಂಭ

    ಉಡುಪಿ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಜನರಲ್ಲಿ ಓದುವ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಉಡುಪಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯ ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತನೆಯಾಗಿದ್ದು, 79 ಸಾವಿರ ಪುಸ್ತಕಗಳು ಡಿಜಿಟಲ್ ರೂಪದಲ್ಲಿ ಲಭ್ಯವಿದೆ.
    ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯ ಸುಮಾರು 17,800 ಪುಸ್ತಕಗಳು, 50 ಸಾವಿರಕ್ಕೂ ಅಧಿಕ ನಿಯತಕಾಲಿಕೆಗಳು ಕಂಪ್ಯೂಟರಿನಲ್ಲೇ ಓದಲು ಅವಕಾಶವಿದೆ. ಜತೆಗೆ 1ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಕನ್ನಡ, ಸಿಬಿಎಸ್‌ಇ ಪಠ್ಯಪುಸ್ತಕಗಳೂ ಲಭ್ಯವಿದೆ.

    ಓದುವ ಬಗೆ ಹೇಗೆ?: ಡಿಜಿಟಲ್ ಲೈಬ್ರೆರಿಗಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ 4 ಕಂಪ್ಯೂಟರ್, 8 ಟ್ಯಾಬ್ ಹಾಗೂ 4 ಇಂಟರ್‌ನೆಟ್ ರೌಟರ್‌ಗಳನ್ನು ನೀಡಿದೆ. ಓದುಗರು ಇಲ್ಲೇ ಬಂದು ಬಳಕೆ ಮಾಡಬೇಕು. ನೋಂದಣಿ ಪ್ರಕ್ರಿಯೆ ಬಳಿಕ ಲಾಗಿನ್ ಐಡಿ ಮತ್ತು ಪರ್ಸ್‌ವರ್ಡ್ ಬಳಸಿ ಉಚಿತವಾಗಿ ಪುಸ್ತಕಗಳನ್ನು ಓದಬಹುದು. ಇದಕ್ಕೆ ಡಿಆರ್‌ಎಂ ಸಾಫ್ಟ್‌ವೇರ್ ಅಳವಡಿಸಿದ್ದರಿಂದ ಈ ಪಿಡಿಎಫ್ ಪ್ರತಿಗಳನ್ನು ಸಂಗ್ರಹಿಸಿಡಲು, ಡೌನ್‌ಲೋಡ್ ಮಾಡಿಕೊಳ್ಳಲು ಅಥವಾ ಮುದ್ರಿಸಲು ಸಾಧ್ಯವಾಗುವುದಿಲ್ಲ. ನಗರಸಭೆ ಸಮೀಪದಲ್ಲಿರುವ ಉಡುಪಿ ನಗರ ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಗುರುವಾರ ಚಾಲನೆ ನೀಡಿದರು. ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ, ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಉಪಸ್ಥಿತರಿದ್ದರು.
    ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮತ್ತು ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಫೌಂಡೇಶನ್ ಕೋಲ್ಕತ್ತಾ ಸಂಯುಕ್ತ ಆಶ್ರಯದಲ್ಲಿ ಭಾರತ ಸಂವಿಧಾನ ದಿನಾಚರಣೆ ಹಾಗೂ ಉಡುಪಿ, ಮಂಗಳೂರು, ಕಾರವಾರ ಸೇರಿ ಮೂರು ಜಿಲ್ಲೆಯ ಗ್ರಂಥಾಲಯ ಇಲಾಖೆಯ ಸಿಬ್ಬಂದಿಗೆ 3 ದಿನಗಳ ತರಬೇತಿ ಕಾರ್ಯಕ್ರಮ ನಡೆಯಿತು.

    ದೃಷ್ಟಿ ಹೀನರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ನಗರ ಗ್ರಂಥಾಲಯದಲ್ಲಿ ಬೈಲ್ ಲಿಪಿಯ 1 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಬ್ರೈಲ್‌ಲಿಪಿ ವಿಭಾಗ ಪ್ರಾರಂಭಿಸಲಾಗುವುದು.
    – ಸತೀಶ್ ಕುಮಾರ್ ಎಸ್. ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts