More

  ಅಮಾಯಕರಿಗೆ ಡಿಜಿ ಕೋಳ! ಸೈಬರ್ ಅಪರಾಧದ ಹೆಸರಿನಲ್ಲಿ ಆನ್​ಲೈನ್​ನಲ್ಲೇ ವಂಚಕರ ಗಾಳ

  | ಕೀರ್ತಿನಾರಾಯಣ ಸಿ. ಬೆಂಗಳೂರು

  ಸೈಬರ್ ಅಪರಾಧ ವಲಯದಲ್ಲಿ ‘ಡಿಜಿಟಲ್ ಅರೆಸ್ಟ್’ ಇದೀಗ ಭಾರೀ ಸದ್ದು ಮಾಡಲಾರಂಭಿಸಿದೆ. ವಿದ್ಯಾವಂತರು, ದೊಡ್ಡದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳೇ ಸೈಬರ್ ವಂಚಕರ ಗಾಳಕ್ಕೆ ಸಿಕ್ಕಿಬಿದ್ದು ಕೋಟ್ಯಂತರ ರೂಪಾಯಿ ಕಳೆದುಕೊಳ್ಳುತ್ತಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡಲಾರಂಭಿಸಿದೆ. ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಹೆದರಿಸಿದರೆ ವಿಶ್ವಾಸ ಕಳೆದುಕೊಳ್ಳದೆ, ನಾನೇ ಪೊಲೀಸರ ಸಹಾಯ ಪಡೆಯುತ್ತೇನೆಂದು ಧೈರ್ಯದಿಂದ ಹೇಳುವಂತೆ ಸಾರ್ವಜನಿಕರಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಕರೆ, ಕೆವೈಸಿ ಅಪ್​ಡೇಟ್, ಕೆಲಸ ಕೊಡಿಸುವುದು, ಕಡಿಮೆ ಸಮಯದಲ್ಲಿ ದುಪ್ಪಟ್ಟು ಹಣದ ಆಮಿಷ, ಕ್ಯೂ ಆರ್ ಕೋಡ್ ಕಳುಹಿಸಿ ಮೋಸ ಮಾಡುವಂತಹ ಹತ್ತಾರು ರೀತಿಯಲ್ಲಿ ವಂಚನೆ ಎಸಗುತ್ತಿದ್ದ ಸೈಬರ್ ಖದೀಮರು, ಇದೀಗ ಡಿಜಿಟಲ್ ಅರೆಸ್ಟ್ ವರಸೆ ಆರಂಭಿಸಿದ್ದಾರೆ.

  ವಿದೇಶಿ ಮುಖವಾಡ: ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ಕುಳಿತು ಸೈಬರ್ ಕ್ರೖೆಂ ಎಸಗುತ್ತಿದ್ದಾರೆ. ಒಂದಷ್ಟು ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದರೆ ಐಪಿ ವಿಳಾಸ ದುಬೈ, ಕಾಂಬೋಡಿಯಾ ತೋರಿಸುತ್ತಿವೆ. ಸಾರ್ವಜನಿಕರಿಂದ ಲಪಟಾಯಿಸಿದ ಹಣವನ್ನು ಕ್ರಿಪ್ಟೋ ಕರೆನ್ಸಿಯಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಅಲ್ಲದೆ, ಸೈಬರ್ ಅಪರಾಧದ ಒಂದು ಖಾತೆಯಲ್ಲಿದ್ದ 1 ಲಕ್ಷ ರೂ. ಸೀಜ್ ಮಾಡಿದರೆ ಆ ಹಣಕ್ಕಾಗಿ ಐದಾರು ರಾಜ್ಯಗಳಿಂದ ನೋಟಿಸ್ ಬಂದಿರುತ್ತದೆ ಎಂದು ತನಿಖಾಧಿಕಾರಿಗಳು ಹೇಳುತ್ತಾರೆ.

  ಹೇಗೆಲ್ಲ ವಂಚಿಸುತ್ತಾರೆ?

  * ವೈಯಕ್ತಿಕ ಮಾಹಿತಿ ಸಂಗ್ರಹಿಸಿ ರ್ಯಾಂಡಮ್ ಮೊಬೈಲ್ ನಂಬರ್​ಗಳಿಗೆ ಕರೆ ಮಾಡುತ್ತಾರೆ

  * ತನಿಖಾ ಅಧಿಕಾರಿಗಳ ಹೆಸರು ಹೇಳಿಕೊಂಡು ಕರೆ ಮಾಡಿ ಪರಿಚಯ ಮಾಡಿಕೊಳ್ಳುತ್ತಾರೆ

  * ಆಧಾರ್ ದಾಖಲೆ ಬಳಸಿ ಕೊರಿಯರ್ ಬುಕ್ ಅಗಿದೆ, ಡ್ರಗ್ಸ್ ಸಾಗಾಟ ಪತ್ತೆ ಎಂದು ಹೆದರಿಸುತ್ತಾರೆ

  * ನಿಮ್ಮ ವಿಚಾರಣೆ ನಡೆಸಬೇಕು ಎಂದು ಹೇಳಿ ಸ್ಕೈಪ್ ಅಪ್ಲಿಕೇಷನ್ ಡೌನ್​ಲೋಡ್ ಮಾಡಿಸುತ್ತಾರೆ

  * ಬಳಿಕ ಡೆಸ್ಕ್​ಟಾಪ್ ರಿಮೋಟ್ ಆಕ್ಸೆಸ್ ಪಡೆದು ಹಂತಹಂತದಲ್ಲಿ ವಿಚಾರಣೆ ನಡೆಸುತ್ತಾರೆ

  * ಮೊದಲಿಗೆ ಕಾನ್​ಸ್ಟೆಬಲ್, ಸಬ್ ಇನ್​ಸ್ಪೆಕ್ಟರ್, ಬಳಿಕ ಡಿಸಿಪಿ ಎಂದು ಹೇಳಿ ನಂಬಿಸುತ್ತಾರೆ

  * ವಂಚಕರು ಬಳಸುವ ಭಾಷೆ, ವಿಚಾರಣೆ ವೈಖರಿ ಬಗ್ಗೆ ಯಾವುದೇ ಅನುಮಾನ ಬರುವುದಿಲ್ಲ

  * ಪುನಃ ವಾಪಸ್ ಕೊಡುವುದಾಗಿ ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿ ನಾಪತ್ತೆ ಆಗುತ್ತಾರೆ

  ನನ್ನ ಸ್ನೇಹಿತನಿಗೇ ವಂಚನೆ ಯತ್ನ…
  ಚೆನ್ನೈನ ನನ್ನ ಶಾಲಾ ಸಹಪಾಠಿಗೆ ನಿನ್ನೆಯಷ್ಟೇ (ಶನಿವಾರ) ಕರೆ ಮಾಡಿದ್ದ ಸೈಬರ್ ವಂಚಕರು, ಡಿಜಿಟಲ್ ಅರೆಸ್ಟ್ ರೀತಿಯಲ್ಲೇ ಮೋಸ ಮಾಡಲು ಪ್ರಯತ್ನಿಸಿದ್ದಾರೆ. ಆಗ, ಆತ ನನ್ನ ಸ್ನೇಹಿತ ಪೊಲೀಸ್ ಅಧಿಕಾರಿ. ಆತನಿಗೆ ತಿಳಿಸುತ್ತೇನೆ ಎಂದು ಉತ್ತರಿಸುತ್ತಿದ್ದಂತೆ ಖದೀಮರು, ಕರೆ ಕಟ್ ಮಾಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಸಹ ಇದೇ ರೀತಿ ಆತ್ಮ ವಿಶ್ವಾಸದಿಂದ ಮಾತನಾಡಿದರೆ ವಂಚನೆಗೆ ಒಳಗಾಗುವುದಿಲ್ಲ ಎಂದು ಡಿಸಿಪಿ ಕುಲದೀಪ್ ಕುಮಾರ್ ಜೈನ್ ಸಲಹೆ ನೀಡಿದ್ದಾರೆ.

  ಡಿಜಿಟಲ್ ಅರೆಸ್ಟ್ ಎನ್ನುವ ಪ್ರಕ್ರಿಯೆಯೇ ಇಲ್ಲ. ಜನರನ್ನು ಭಯಪಡಿಸಲು ಸೈಬರ್ ಕಳ್ಳರು ಹುಟ್ಟುಹಾಕಿದ್ದಾರೆ. ಪ್ರತಿವಾರ 2-3 ಪ್ರಕರಣಗಳು ವರದಿಯಾಗುತ್ತಿವೆ. ಪೊಲೀಸರ ಹೆಸರಲ್ಲಿ ಕರೆ ಮಾಡಿದರೆ ಹೆದರದೆ 112 ಸಹಾಯವಾಣಿಗೆ ಕರೆ ಮಾಡಿ, ನಿಮ್ಮ ಕುಟುಂಬ ಸದಸ್ಯರಿಗೆ ತಿಳಿಸಿ.

  | ಕುಲ್​ದೀಪ್ ಕುಮಾರ್ ಜೈನ್ ಡಿಸಿಪಿ, ಎಸ್​ಐಟಿ

  ಏನಿದು ಡಿಜಿಟಲ್ ಅರೆಸ್ಟ್?
  ತನಿಖಾಧಿಕಾರಿಗಳ ಹೆಸರಿನಲ್ಲಿ ತಮಗಿಷ್ಟ ಬಂದ ಮೊಬೈಲ್ ನಂಬರ್​ಗಳಿಗೆ ಕರೆ ಮಾಡಿ ಅಪರಾಧದ ಆರೋಪ ಹೊರಿಸುತ್ತಾರೆ. ಬಳಿಕ ವಿಚಾರಣೆ ನೆಪ ಹೇಳಿ ಖಾತೆಗಳಿಗೆ ಹಣ ವರ್ಗ ಮಾಡಿಕೊಂಡು ನಾಪತ್ತೆ ಆಗುತ್ತಾರೆ.

  ಪೊಲೀಸರ ಸಲಹೆ ಏನು?
  1. ಡಿಜಿಟಲ್ ಅರೆಸ್ಟ್ ಬಗ್ಗೆ ಬೆದರಿಸಿದರೆ ಭಯಪಡಬೇಡಿ, ವಿಶ್ವಾಸದಿಂದ ಮಾತನಾಡಿ

  2. ದೇಶದ ಎಲ್ಲೇ ಇದ್ದರೂ ನೇರವಾಗಿ 112 ಸಹಾಯವಾಣಿಗೆ ಕರೆ ಮಾಡಿ ಸ್ಪಷ್ಟತೆ ಪಡೆಯಿರಿ

  3. ತಕ್ಷಣವೇ ಗೂಗಲ್ ಸರ್ಚ್ ಮಾಡಿದರೆ ಕೊರಿಯರ್ ಸ್ಕಾ್ಯಮ್ ಮಾಹಿತಿ ಸಿಗುತ್ತದೆ

  4. ಪೊಲೀಸರು ಎಂದು ಹೇಳಿದರೆ ನಾನೇ ಹತ್ತಿರದ ಪೊಲೀಸ್ ಸ್ಟೇಷನ್​ಗೆ ಹೋಗುತ್ತೇನೆಂದು ಹೇಳಿ

  5. ಡಿಜಿಟಲ್ ಅರೆಸ್ಟ್ ಬೆದರಿಕೆಯ ಬಗ್ಗೆ ಕೂಡಲೇ ನಿಮ್ಮ ಕುಟುಂಬ ಸದಸ್ಯರಿಗೆ ತಿಳಿಸಿ

  6. ಡಿಜಿಟಲ್ ಅರೆಸ್ಟ್ ವಂಚನೆ ಬಗ್ಗೆ ಅವರಿಗೆ ಮಾಹಿತಿ ಇದ್ದಲ್ಲಿ ನಿಮ್ಮನ್ನೂ ಎಚ್ಚರಿಸಬಹುದು

  ಗೋಲ್ಡನ್ ಮಿನಿಟ್
  ಸೈಬರ್ ಅಪರಾಧಕ್ಕೆ ಒಳಗಾದವರು ‘ಗೋಲ್ಡನ್ ಅವರ್’ನಲ್ಲಿ ನ್ಯಾಷನಲ್ ಸೈಬರ್ ಕ್ರೖೆಂ ರಿಪೋರ್ಟಿಂಗ್ ಪೋರ್ಟಲ್ (ಎನ್​ಸಿಆರ್​ಪಿ) 1930 ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ಹಣ ಫ್ರೀಜ್ ಮಾಡುವುದಾಗಿ ಹೇಳಲಾಗಿದೆ. ಆದರೆ, ಸೈಬರ್ ಕಳ್ಳರು ‘ಗೋಲ್ಡನ್ ಮಿನಿಟ್’ನಲ್ಲೇ ಹಣ ಬೇರೆಡೆಗೆ ವರ್ಗಾವಣೆ ಮಾಡಿಕೊಳ್ಳುತ್ತಿರು ವುದರಿಂದ ದೂರು ಕೊಟ್ಟರೂ ಹಣ ಸೀಜ್ ಮಾಡಲಾಗುತ್ತಿಲ್ಲ.

  ವಾರಕ್ಕೆ 2-3 ಕೇಸ್ ಫಿಕ್ಸ್
  ಬೆಂಗಳೂರಲ್ಲೇ ಪ್ರತಿವಾರ 2 ರಿಂದ 3 ಡಿಜಿಟಲ್ ಅರೆಸ್ಟ್ ಪ್ರಕರಣ ವರದಿಯಾಗುತ್ತಿವೆ. ಫೆಡೆಕ್ಸ್ ಸೇರಿ ಕೊರಿಯರ್ ಹೆಸರಲ್ಲಿ ವಂಚಿಸುತ್ತಿರುವ ಡಿಜಿಟಲ್ ಅರೆಸ್ಟ್ ಪಕರಣಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್​ಐಟಿ) ರಚನೆ ಮಾಡಿದ್ದು, ಬೆಂಗಳೂರು (ಪೂರ್ವ) ಸಂಚಾರ ವಿಭಾಗದ ಡಿಸಿಪಿಯಾಗಿರುವ ಕುಲ್​ದೀಪ್ ಕುಮಾರ್ ಆರ್.ಜೈನ್ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ದೆಹಲಿಯಲ್ಲೂ ತಿಂಗಳಿಗೆ ಅಂದಾಜು 200 ಪ್ರಕರಣ ವರದಿಯಾಗುತ್ತಿರುವ ಮಾಹಿತಿ ಇದೆ.

  ಮಹೇಶ್​ ಬಾಬು ಮುಂದೆಯೇ ವಿಜಯ್​ಗೆ ಅವಮಾನ ಮಾಡಿದ ಸಮಂತಾ? ಅಭಿಮಾನಿಗಳ ಆಕ್ರೋಶ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts