More

    ಆಯುಷ್ಮಾನ್‌ನಲ್ಲೇ ಡಯಗ್ನಾಸ್ ವೆಚ್ಚ, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ

    ಮಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೂ ಮೊದಲು ನಡೆಯುವ ಡಯಗ್ನಾಸ್ (ಪರೀಕ್ಷೆ) ವೆಚ್ಚವನ್ನು ಕೂಡ ಯೋಜನೆಯಿಂದಲೇ ಭರಿಸುವಂತೆ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಯಿತು.

    ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ದಾಖಲಿಸಿಕೊಂಡು ವಿವಿಧ ಪರೀಕ್ಷೆಗಳ ಹೆಸರಿನಲ್ಲಿ ದೊಡ್ಡ ಮೊತ್ತದ ಹಣ ವಸೂಲಿ ಮಾಡಲಾಗುತ್ತದೆ. ಬಳಿಕ ಅದೇ ರೋಗಿಯನ್ನು ಸರ್ಕಾರಿ ಆಸ್ಪತ್ರೆಯ ಶಿಫಾರಸು ಪಡೆದು ಖಾಸಗಿ ಆಸ್ಪತ್ರೆಗಳು ಮರು ಸೇರ್ಪಡೆಗೊಳಿಸುತ್ತಿವೆ. ಸರ್ಕಾರದ ಯೋಜನೆಯ ಭರವಸೆಯಲ್ಲಿ ಒಂದು ಸಾವಿರ ರೂ. ಕೂಡ ಇಲ್ಲದೆ ಖಾಸಗಿ ಆಸ್ಪತ್ರೆಗೆ ಬಂದವರು ಇಷ್ಟು ಹೊತ್ತಿಗೆ ಸಾಕಷ್ಟು ತೊಂದರೆ ಅನುಭವಿಸಿರುತ್ತಾರೆ ಎಂದು ಸದಸ್ಯರು ವಿವರಿಸಿದರು. ರೋಗಿಯ ಕಡೆಯವರಿಂದ ಬೇಕಾಬಿಟ್ಟಿ ಹಣ ವಸೂಲಿ ನಡೆಸುವ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವಂತೆ ಸದಸ್ಯರು ಒತ್ತಾಯಿಸಿದರು.

    ಶಿಫಾರಸು ಪತ್ರ ಅವಶ್ಯ: ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಧ್ಯವಿಲ್ಲದಾಗ ಖಾಸಗಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆ ನೀಡುವ ಶಿಫಾರಸು ಪತ್ರವಿದ್ದರೆ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಗರ್ಭಕೋಶ ಕ್ಯಾನ್ಸರ್, ಲಿವರ್ ಶಸ್ತ್ರಚಿಕಿತ್ಸೆಗೆ ಆಯುಷ್ಮಾನ್‌ನಲ್ಲಿ ಅವಕಾಶವಿಲ್ಲ ಎಂದರು.

    ಕಳೆದ ಏಪ್ರಿಲ್‌ನಿಂದ ಕೋವಿಡ್ ಸೋಂಕಿತರಲ್ಲದವರಿಗೆ 35.76 ಕೋಟಿ ರೂ. ಮೊತ್ತದ ಚಿಕಿತ್ಸೆಯನ್ನು ಜಿಲ್ಲೆಯ ಆಸ್ಪತ್ರೆಗಳು ನೀಡಿವೆ. ಕೋವಿಡ್ ಸೋಂಕಿತ 4,461 ಮಂದಿಯ ಚಿಕಿತ್ಸೆಗೆ 24.88 ಕೋಟಿ ರೂ. ವೆಚ್ಚವಾಗಿದೆ ಎಂದು ವಿವರಿಸಿದರು.
    ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಧನಲಕ್ಷ್ಮಿ ಗಟ್ಟಿ, ಮಮತಾ ಶೆಟ್ಟಿ ಮತ್ತು ರವೀಂದ್ರ ಕಂಬಳಿ ಉಪಸ್ಥಿತರಿದ್ದರು.

    92 ಶಾಲೆ ಮಾನ್ಯತೆ ನವೀಕರಣ ಬಾಕಿ: ಜಿಲ್ಲೆಯಲ್ಲಿ ಪ್ರಸಕ್ತ 92 ಶಾಲೆಗಳ ಮಾನ್ಯತೆ ನವೀಕರಣಕ್ಕೆ ಬಾಕಿ ಇವೆ. ಶಾಲಾ ಮಕ್ಕಳ ಸುರಕ್ಷತೆ ಸಲುವಾಗಿ ಸುಪ್ರೀಂಕೋರ್ಟ್ ಮಾರ್ಗದರ್ಶನದಂತೆ ಸುರಕ್ಷತಾ ಪತ್ರ ಹೊಂದುವುದು ಕಡ್ಡಾಯ. ಸುರಕ್ಷತಾ ಪತ್ರ ಇದ್ದರೆ ಮಾತ್ರ ಶಾಲೆಗಳ ಮಾನ್ಯತೆ ನವೀಕರಿಸಲಾಗುತ್ತದೆ. ಮಾನ್ಯತಾ ನವೀಕರಣ ಇಲ್ಲದಿದ್ದರೆ ಅಂಥ ಶಾಲೆಗಳಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲು ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ವಿದ್ಯಾಂಗ ಇಲಾಖೆ ಉಪನಿರ್ದೇಶಕ ಮಲ್ಲೇಸ್ವಾಮಿ ಹೇಳಿದರು. ಕಟ್ಟಡ ಸುರಕ್ಷತೆ, ಆರೋಗ್ಯ ಶುಚಿತ್ವ, ಎಸ್‌ಡಿಎಂಸಿ ಬಗ್ಗೆ ಪೊಲೀಸ್ ಪರಿಶೀಲನೆ ಕಡ್ಡಾಯ. ಇದರ ಆಧಾರದಲ್ಲಿ ಮಾನ್ಯತೆ ನವೀಕರಿಸಲಾಗುತ್ತದೆ. ಅಗ್ನಿಶಾಮಕ ದಳದ ಶಿಫಾರಸು ಕೂಡ ಅಗತ್ಯವಾಗಿದ್ದು, ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಿಫಾರಸು ಪತ್ರ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.

    ಜಿಪಂ, ತಾಪಂ ಒಂದೇ ದಿನ ಸಭೆ: ಜಿಪಂ ಸಭೆಯ ದಿನವೇ ತಾಪಂ ಸಭೆ ನಿಗದಿಪಡಿಸಿದ ಮಂಗಳೂರು ತಾಪಂ ಅಧ್ಯಕ್ಷ ಹಾಗೂ ಇಒ ಧೋರಣೆ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಪಂ ಸಭೆಯ 10 ದಿನ ಮೊದಲು ತಾಪಂ ಸಭೆ ನಡೆಸಬೇಕು. ಈ ವಿಚಾರ ಅವರ ಗಮನಕ್ಕೆ ತಂದರೂ ಮಾತಿಗೆ ಬೆಲೆ ನೀಡಿಲ್ಲ. ಈ ಬಗ್ಗೆ ಅವರನ್ನು ಕರೆದು ವಿಚಾರಿಸುವುದಾಗಿ ಜಿಪಂ ಸಿಇಒ ಡಾ.ಸೆಲ್ವಮಣಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts