More

    ಧವನ್ ಬದಲಿಗೆ ಪೃಥ್ವಿ ಷಾ, ಸ್ಯಾಮ್ಸನ್

    ಬೆಂಗಳೂರು: ನ್ಯೂಜಿಲೆಂಡ್ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಪ್ರಕಟಿಸಿದ್ದು, ಗಾಯಾಳು ಶಿಖರ್ ಧವನ್ ತಂಡದಿಂದ ಹೊರಬಿದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ಭುಜಕ್ಕೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ಈಗಾಗಲೇ ನ್ಯೂಜಿಲೆಂಡ್ ಪ್ರವಾಸದ ಐದು ಪಂದ್ಯಗಳ ಟಿ20 ಸರಣಿಯಿಂದ ಹೊರಬಿದ್ದಿದ್ದರು. ಆದರೆ, ಅವರ ಪುನಶ್ಚೇತನಕ್ಕೆ ಹೆಚ್ಚಿನ ಸಮಯ ಬೇಕಿರುವ ಕಾರಣ, ಪ್ರವಾಸದ ಮೂರು ಪಂದ್ಯಗಳ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದಾರೆ.

    ಶಿಖರ್ ಧವನ್​ರ ಬದಲಿಗೆ ಟಿ20 ತಂಡಕ್ಕೆ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ ಹಾಗೂ ಏಕದಿನ ತಂಡಕ್ಕೆ ಮುಂಬೈನ ಯುವ ಆರಂಭಿಕ ಪೃಥ್ವಿ ಷಾರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಫೆ. 5ರಿಂದ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಪೃಥ್ವಿ ಷಾ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

    ಹಾರ್ದಿಕ್ ಪಾಂಡ್ಯ ಇಲ್ಲ: ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ಪ್ರವಾಸದ ವೇಳೆ ತಂಡಕ್ಕೆ ವಾಪಸಾಗುತ್ತಾರೆ ಎಂದು ನಿರೀಕ್ಷೆ ಇಡಲಾಗಿತ್ತು. ಆದರೆ, ಫಿಟ್ನೆಸ್ ಟೆಸ್ಟ್​ನಲ್ಲಿ ಫೇಲ್ ಆಗಿರುವ ಹಿನ್ನೆಲೆಯಲ್ಲಿ ಅವರ ಪುನಶ್ಚೇತನಕ್ಕೆ ಹೆಚ್ಚಿನ ಸಮಯ ನೀಡಲಾಗಿದ್ದು, ಸಂಪೂರ್ಣ ನ್ಯೂಜಿಲೆಂಡ್ ಪ್ರವಾಸಕ್ಕೆ ಅವರನ್ನು ಆಯ್ಕೆಗೆ ಪರಿಗಣಿಸದಿರುವ ಸಾಧ್ಯತೆ ಇದೆ. ಈಗಾಗಲೇ ಟಿ20 ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿರುವ ಪಾಂಡ್ಯ, ಇನ್ನೂ ಆಯ್ಕೆಯಾಗದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವುದೂ ಅನುಮಾನ. ಬಹುತೇಕವಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್ ನಲ್ಲಿ ತವರಿನಲ್ಲಿ ನಡೆಯಲಿರುವ ಸರಣಿಗೆ ಅವರು ವಾಪಸಾಗುವ ನಿರೀಕ್ಷೆ ಇದೆ.

    ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪನಾಯಕ), ಪೃಥ್ವಿ ಷಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್ (ವಿ.ಕೀ), ಶಿವಂ ದುಬೆ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಜಸ್​ಪ್ರೀತ್ ಬುಮ್ರಾ, ಮೊಹಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್, ಕೇದಾರ್ ಜಾಧವ್.

    ಶಿಖರ್ ಧವನ್​ಗೆ ಹೆಚ್ಚಿನ ವಿಶ್ರಾಂತಿ

    ಶಿಖರ್ ಧವನ್​ರ ಭುಜದ ಗಾಯದ ಎಂಆರ್​ಐ ಸ್ಕಾ್ಯನ್ ಮಾಡಲಾಗಿದ್ದು, ಎರಡನೇ ಶ್ರೇಣಿಯ ಗಂಭೀರ ಗಾಯಕ್ಕೆ ಅವರು ತುತ್ತಾಗಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ತೋಳುಪಟ್ಟಿ ಅವರು ಧರಿಸಲಿದ್ದು, ಫೆಬ್ರವರಿ ಮೊದಲ ವಾರದಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು ಏಕದಿನ ಪಂದ್ಯದ ವೇಳೆ ಚೆಂಡನ್ನು ತಡೆಯುವ ಯತ್ನದಲ್ಲಿ ಧವನ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಬಳಿಕ ಅವರು ಬ್ಯಾಟಿಂಗ್​ಗೂ ಇಳಿದಿರಲಿಲ್ಲ. 2ನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿಗೆ ಪೆಟ್ಟು ಮಾಡಿಕೊಂಡಿದ್ದರು. ಗಾಯದ ಕಾರಣದಿಂದಾಗಿಯೇ ವೆಸ್ಟ್ ಇಂಡೀಸ್ ವಿರುದ್ಧ ಕಳೆದ ತಿಂಗಳು ನಡೆದ ಸಂಪೂರ್ಣ ಸೀಮಿತ ಓವರ್​ಗಳ ಸರಣಿಗೆ ಅವರು ಲಭ್ಯರಿರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts