More

  ದೊಡ್ಡ ಕೊಡುಗೆ ನಿರೀಕ್ಷೆಯಲ್ಲಿ ಧಾರವಾಡ

  ಬಸವರಾಜ ಇದ್ಲಿ ಹುಬ್ಬಳ್ಳಿ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿ ಮಂಡಿಸುತ್ತಿರುವ ರಾಜ್ಯ ಬಜೆಟ್ ಮೇಲೆ ಜಿಲ್ಲೆಯ ಜನರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತವರು ಜಿಲ್ಲೆಗೆ ದೊಡ್ಡ ಕೊಡುಗೆ ಏನಾದರೂ ಕೊಟ್ಟೇ ಕೊಡುತ್ತಾರೆ ಎಂಬ ಅಚಲ ವಿಶ್ವಾಸವೂ ಈ ಭಾಗದ ಜನರಲ್ಲಿದೆ.

  ಉತ್ತರ ಕರ್ನಾಟಕ ಭಾಗದ 9 ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹದಾಯಿ ಯೋಜನೆಗೆ ಹಿಂದಿನ ಬಜೆಟ್​ನಲ್ಲಿ ಅನುದಾನ ಮೀಸಲಿಡುವ ಮೂಲಕ ಬಿಜೆಪಿ ಸರ್ಕಾರ ಬದ್ಧತೆ ಪ್ರದರ್ಶಿಸಿದೆ. ಆದರೆ, ನಾನಾ ಕಾರಣಗಳಿಗೆ ಯೋಜನೆಯ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಯೋಜನೆಯ ಕೆಲಸ ಆರಂಭಿಸುವ ದಿಸೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಹತ್ವದ ಹೆಜ್ಜೆ ಇಡಬೇಕಾಗಿದೆ.

  ಮಳೆಗಾಲದಲ್ಲಿ ತುಂಬಿ ಹರಿದು ಧಾರವಾಡ ಜಿಲ್ಲೆಯ ಕೆಲವೆಡೆ ಜಮೀನುಗಳಿಗೆ ನುಗ್ಗಿ ಬೆಳೆ ಹಾಳು ಮಾಡುವ ಬೆಣ್ಣಿ ಹಳ್ಳ ಹಾಗೂ ತುಪ್ಪರಿ ಹಳ್ಳಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆ ರೂಪುಗೊಂಡಿದೆ. ಇದಕ್ಕೆ ಬಜೆಟ್​ನಲ್ಲಿ ಹಣಕಾಸು ಒದಗಿಸಬೇಕಿದೆ.

  ರಾಜ್ಯದ ದೊಡ್ಡ ಮಹಾನಗರ ಪಾಲಿಕೆಗಳ ಸಾಲಿಗೆ ಸೇರಿರುವ ಹುಬ್ಬಳ್ಳಿ- ಧಾರವಾಡಕ್ಕೆ ಒಂದಿಷ್ಟು ವಿಶೇಷ ಅನುದಾನ ನೀಡಬೇಕಾಗಿದೆ. 12 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

  ಕೈಗಾರಿಕಾ ಸ್ನೇಹಿ ಜಿಲ್ಲೆಯಾಗಿ ಮಾರ್ಪಡಿಸಲು ಸರ್ಕಾರ ವಿಶೇಷ ಒತ್ತು ನೀಡಬೇಕಾಗಿದೆ. ಈಗಾಗಲೇ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಯಶಸ್ವಿಯಾಗಿ ಏರ್ಪಡಿಸಿದ್ದರಿಂದ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಲು ಅನೇಕ ಕೈಗಾರಿಕೋದ್ಯಮಿಗಳು ಆಸಕ್ತರಾಗಿದ್ದಾರೆ. ಏಕಸ್ ಸೇರಿ ಹಲವು ಕೈಗಾರಿಕೆಗಳು ಈಗಾಗಲೇ ಭೂಮಿ ಖರೀದಿಸಿ ಘಟಕ ಆರಂಭಕ್ಕೆ ಮುಂದಡಿ ಇಟ್ಟಿವೆ. ಇನ್ನೂ ಹಲವು ಕೈಗಾರಿಕೆಗಳು ಬರುವ ದಾರಿಯಲ್ಲಿ ಇವೆ.

  ವಿಶೇಷವಾಗಿ ಎಫ್​ಎಂಸಿಜಿ ಕ್ಲಸ್ಟರ್ ಅನ್ನು ಧಾರವಾಡದಲ್ಲಿ ಸ್ಥಾಪಿಸಲು ಕೊನೇ ಹಂತದ ಪ್ರಯತ್ನಗಳು ನಡೆಯುತ್ತಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಇನ್ನಷ್ಟು ಉದ್ಯಮ ಸ್ನೇಹಿ ವಾತಾವರಣ ನಿರ್ವಿುಸುವ ಹೊಣೆ ಸರ್ಕಾರದ ಮೇಲಿದೆ.

  ಎನ್​ಜಿಇಎಫ್​ಗೆ ಕಾಯಕಲ್ಪ: ಉತ್ತರ ಕರ್ನಾಟಕದ ಏಕೈಕ ಸರ್ಕಾರಿ ಸ್ವಾಮ್ಯದ ಉದ್ಯಮ ಎನ್​ಜಿಇಎಫ್ ಕಳೆದ ನಾಲ್ಕು ವರ್ಷದಿಂದ ಲಾಭದ ಹಾದಿಗೆ ಬಂದಿದೆ. ಇದನ್ನು ಇನ್ನಷ್ಟು ಬೆಳೆಸುವುದು ಹಾಗೂ ಆ ಮೂಲಕ ಉತ್ಕೃಷ್ಟ ಗುಣಮಟ್ಟದ ಎಲೆಕ್ಟ್ರಿಕ್ ಮೋಟಾರ್ ಉತ್ಪಾದನೆ ಮತ್ತು ಟ್ರಾನ್ಸಫಾರ್ಮರ್ ಉತ್ಪಾದನೆಗೆ ಉತ್ತೇಜನ ನೀಡಬೇಕಾಗಿದೆ. ಎನ್​ಜಿಇಎಫ್ ಸರ್ಕಾರಕ್ಕೆ ತನ್ನ ಬೇಕು ಬೇಡಿಕೆಗಳನ್ನು ತಿಳಿಸಿದೆ. ಸುಮಾರು 30-40 ಕೋಟಿ ರೂ. ಬಂಡವಾಳ ಒದಗಿಸಿದರೆ ಈ ಭಾಗದ ಪ್ರಮುಖ ಕಂಪನಿಯಾಗುವುದರಲ್ಲಿ ಸಂದೇಹವಿಲ್ಲ.ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಸಹ ನೆರವಿಗಾಗಿ ಕಾಯುತ್ತಿದೆ. ಸುಮಾರು 1867 ಕೋಟಿ ರೂಪಾಯಿಗಳ ಬೇಡಿಕೆ ಇಟ್ಟಿದೆ. ಹೊಸ ಬಸ್ ಖರೀದಿ, ನಿವೃತ್ತರ ಗ್ರಾಚ್ಯುಟಿ, ಹಾಲಿ ನೌಕರರ ಪಿಎಫ್ ವಂತಿಗೆ ಬಾಕಿ ಪಾವತಿ ಮುಂತಾದ ಸೌಲಭ್ಯಗಳನ್ನು ನೀಡಲು ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts