More

    ವಸ್ತುಸಂಗ್ರಹಾಲಯದಿಂದ ಜ್ಞಾನ-ಪ್ರೇರಣೆ; ಶ್ರೀ ವೀರೇಂದ್ರ ಹೆಗ್ಗಡೆ ಅವರ ಧರ್ಮದರ್ಶನ

    ವಸ್ತುಸಂಗ್ರಹಾಲಯದಿಂದ ಜ್ಞಾನ-ಪ್ರೇರಣೆ; ಶ್ರೀ ವೀರೇಂದ್ರ ಹೆಗ್ಗಡೆ ಅವರ ಧರ್ಮದರ್ಶನ

    ಕಳೆದ ಅಂಕಣದಲ್ಲಿ ವಿದೇಶಗಳಲ್ಲಿನ ವಸ್ತುಸಂಗ್ರಹಾಲಯಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮ್ಯೂಸಿಯಂಗಳ ಸಂಖ್ಯೆ ತುಂಬಾ ಕಡಿಮೆ. ನಮ್ಮ ದೇಶದಲ್ಲಿ ಸಂಗ್ರಹಯೋಗ್ಯ ವಸ್ತುಗಳ ಪೈಕಿ ಶೇ.1ರಷ್ಟು ಮಾತ್ರ ಮ್ಯೂಸಿಯಂಗಳಲ್ಲಿದ್ದರೆ, ಇನ್ನುಳಿದ ಶೇ.99ರಷ್ಟು ವಸ್ತುಗಳು ಖಾಸಗಿ ವ್ಯಕ್ತಿಗಳ ಕೈಯಲ್ಲಿಯೇ ಇರಬಹುದು. ಸರ್ಕಾರಿ ವಸ್ತು ಸಂಗ್ರಹಾಲಯದವರು ನಮ್ಮ ಸಾಧನೆ, ವಿಶೇಷತೆಯನ್ನು ತೋರಿಸುವ ವಸ್ತುಗಳನ್ನೆಲ್ಲ ಸಂಗ್ರಹಿಸಿ, ಸಂರಕ್ಷಿಸಿ ಪ್ರದರ್ಶಿಸಿದರೆ ನಮ್ಮ ದೇಶದ ಪ್ರಗತಿಗೆ ಮತ್ತು ಹಿರಿಮೆಗೆ ಸಾಧನವಾಗಬಹುದು.

    ನಮ್ಮ ಧರ್ಮಸ್ಥಳದಲ್ಲಿ ‘ಮಂಜೂಷಾ’ ಹೆಸರಿನ ವಸ್ತುಸಂಗ್ರಹಾಲಯವಿದ್ದು, ಇದರ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತೇನೆ. ನನಗೆ 1968ನೇ ಇಸವಿಯಲ್ಲಿ ಧರ್ವಧಿಕಾರಿಯಾಗಿ ಪಟ್ಟವಾಯಿತು. ಒಂದು ದಿನ ನಮ್ಮ ದೇವಸ್ಥಾನದ ಮೇಲ್ಗಡೆಯಲ್ಲಿ ಇರುವ ಉಪ್ಪರಿಗೆಯಲ್ಲಿದ್ದ (‘ಬತ್ತೇರಿ’ ಎಂದು ಕರೆಯುತ್ತೇವೆ) ವಸ್ತುಗಳನ್ನು ನೋಡುವುದಕ್ಕೆ ನಮ್ಮ ಸಿಬ್ಬಂದಿ ಕರೆದುಕೊಂಡು ಹೋದರು. ಯಾವುದೇ ವಸ್ತುಗಳು ಹಳೆಯದಾಗಿ ನಿರುಪಯುಕ್ತವಾದರೂ ಅವುಗಳನ್ನು ಎಸೆಯಬಾರದು ಅಥವಾ ಈಗಿನ ಹಾಗೆ ಗುಜರಿಗೆ ಹಾಕಬಾರದು. ಮಾರಾಟ ಮಾಡಬಾರದು. ಅವನ್ನು ಎಲ್ಲಿಯಾದರೂ ಇಡಬೇಕು ಎಂಬುದು ನಮ್ಮ ಕ್ಷೇತ್ರದ ಸಂಪ್ರದಾಯ. ದೇವಸ್ಥಾನದಲ್ಲಿ ಬಳಕೆಯಾಗುತ್ತಿದ್ದ ಪಾತ್ರೆಗಳು, ಬಳಕೆಯಾದ ಇತರ ಸಾಮಾನುಗಳು, ಹಿಂದೆ ಇದ್ದ ಎಣ್ಣೆದೀಪಗಳಿಂದ ಆರಂಭಿಸಿ ಇಂದಿನ ಚಿಮಣಿ ದೀಪಗಳು, ಹರಕೆಗೆ ಬಂದ ಅನೇಕ ವಸ್ತುಗಳು ಅಲ್ಲಿದ್ದವು. ನನಗೆ ಕುತೂಹಲವಾಗಿ ಅವುಗಳನ್ನು ಹೇಗೆ ರಕ್ಷಿಸಬಹುದೆಂಬುದಾಗಿ ಆಲೋಚಿಸತೊಡಗಿದೆ. ಸುಂದರವಾದ ಯಕ್ಷಗಾನದ ವೇಷಭೂಷಣಗಳು, ಹಾರಗಳು, ಮಣಿಸಾಮಾನುಗಳು ಅಲ್ಲಿದ್ದವು. ಈಗ ಪ್ಲಾಸ್ಟಿಕ್​ನಿಂದ ತಯಾರಿಸಿದ ವಸ್ತುಗಳನ್ನು ಯಕ್ಷಗಾನದಲ್ಲಿ ಬಳಸುತ್ತೇವೆ. ಆದರೆ ಆಗ ಅಂದರೆ ಸುಮಾರು 1900ರಿಂದ ಗಾಜಿನಿಂದ ತಯಾರಿಸಿದ ಮಣಿ ಸಾಮಾನುಗಳನ್ನು ಬಳಸುತ್ತಿದ್ದರು. ಅಪರೂಪದ ಕಚ್ಚಾವಸ್ತುಗಳನ್ನು ಬಳಸಿ ಯಕ್ಷಗಾನದ ವೇಷಭೂಷಣಗಳನ್ನು ಮಾಡುತ್ತಿದ್ದರು. ‘ಇದನ್ನು ಏನು ಮಾಡುತ್ತೀರಿ?’ ಎಂದಾಗ ‘ನಮಗೆ ಗೊತ್ತಿಲ್ಲ’ ಎಂದು ಕೆಲಸಗಾರರು ಹೇಳಿದರು. ನಮ್ಮ ಮನೆ ಬೀಡಿನ ಉಪ್ಪರಿಗೆಯಲ್ಲಿ ಈ ವಸ್ತುಗಳನ್ನು ಸಂಗ್ರಹಿಸಿ ಸಂರಕ್ಷಿಸಲು ಪ್ರಾರಂಭಿಸಿದೆ. ಈ ರೀತಿಯಿಂದ ವಸ್ತುಸಂಗ್ರಹಾಲಯ ಮಾಡಬೇಕೆಂಬ ಆಸಕ್ತಿ ಉಂಟಾಯಿತು.

    ತದನಂತರ ಬೇರೆ ಬೇರೆ ಕಡೆಗಳಿಂದಲೂ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದೆವು. ನಾನು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ನಮ್ಮ ಮನೆಗೆ ‘ಲೈಫ್’ ಮ್ಯಾಗಝಿನ್, ‘ಸ್ಪಾನ್’ ಎಂಬ ಅಮೆರಿಕಾದ ಪ್ರಸಿದ್ಧ ಮ್ಯಾಗಝಿನ್ ಮತ್ತು ಭಾರತದ ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್ ಬರುತ್ತಿದ್ದವು. ಅವುಗಳಲ್ಲಿ ಪ್ರಕಟವಾಗುತ್ತಿದ್ದ ಮಾಹಿತಿ ಪ್ರಕಾರ, ನಮಗೆ ತ್ಯಾಜ್ಯವಾದ, ನಿರುಪಯುಕ್ತ ವಾದ ವಸ್ತುಗಳು, ನಮಗೆ ಅಗತ್ಯವಿಲ್ಲ ಎಂದು ಬಿಸಾಡುವ ವಸ್ತುಗಳು ಸಹ ಒಂದಲ್ಲ ಒಂದು ದಿನ ಮೌಲ್ಯವನ್ನು ಪಡೆದುಕೊಳ್ಳುತ್ತವೆ. ಇನ್ನೊಂದು, ಈ ವಸ್ತುಗಳು ನಮ್ಮ ಪ್ರಾಚೀನತೆ ಮತ್ತು ಭವಿಷ್ಯಕಾಲಕ್ಕೆ ಕೊಂಡಿಯಾಗಬಲ್ಲವು. ಚಕ್ರವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ರಾಮಾಯಣ, ಮಹಾಭಾರತ ಕಾಲದಲ್ಲಿ ರಥಕ್ಕೆ ಉಪಯೋಗಿಸುತ್ತಿದ್ದರು. ಅದೇ ಚಕ್ರದ ಬಳಕೆ ಬೇರೆ ಬೇರೆ ರೂಪ ಪಡೆದು ಬಾವಿಯಿಂದ ನೀರನ್ನು ಸೇದುವುದಕ್ಕೆ ಗಡಗಡೆ ಚಕ್ರವಾಯಿತು. ಬಟ್ಟೆ ನೇಯ್ಗೆ ಮಾಡಲು ಉಪಯೋಗಿಸುವಂತಹದ್ದು ಚಕ್ರಗಳು. ಯಾವ ವಸ್ತುವನ್ನೇ ಊಹಿಸಿಕೊಳ್ಳಿ, ಚಕ್ರ ಮತ್ತು ವರ್ತಲಾಕಾರದ ವಸ್ತುಗಳು ಇರಲೇಬೇಕು. ನನ್ನ ಅದೃಷ್ಟಕ್ಕೆ ಬಹಳಷ್ಟು ವಸ್ತುಗಳನ್ನು ಕ್ಷೇತ್ರದಲ್ಲಿ ಸಂಗ್ರಹಿಸಲು ಕಾಲ ಪಕ್ವವಾಗಿತ್ತು. ವಿದೇಶಕ್ಕೆ ಹೋಗಿ ಕೆಲವು ಮ್ಯೂಸಿಯಂಗಳನ್ನು ನೋಡಿದ ಮೇಲಂತೂ ನನಗೆ ಹಳೇ ವಸ್ತುಗಳ ಬಗ್ಗೆ ತುಂಬಾ ಆಸಕ್ತಿ ಉಂಟಾಯಿತು. ಮಂಗಳೂರಿನಲ್ಲಿ ವಿಲ್ಲಿಸ್ ಇಂಡಸ್ಟ್ರಿಯಲ್ ವರ್ಕ್ಸ್ ಎಂಬ ಗ್ಯಾರೇಜ್ ಇತ್ತು. ಅಲ್ಲಿಗೆ ನಮ್ಮ ದೇವಸ್ಥಾನದ ಲಾರಿ, ಕಾರುಗಳನ್ನು ರಿಪೇರಿಗೆ ಕಳಿಸುತ್ತಿದ್ದೆವು. ಅಲ್ಲಿ ಆಲ್ವಿನ್ ಕರ್ಕಡ ಎಂಬುವವ ಮೆಕ್ಯಾನಿಕ್ ಆಗಿದ್ದ. 1969ರ ಒಂದು ದಿನ ಆತ, ‘ನಮ್ಮ ಗ್ಯಾರೇಜಿನಲ್ಲಿ ಆಕ್ಸಿಡೆಂಟ್ ಆದಂತಹ ಡೈಮ್ಲರ್ ಬೆಂಜ್ ಎಂಬ ಒಂದು ಜರ್ಮನ್ ಕಾರಿದೆ. ಎಡಭಾಗ ಪೂರ್ತಿಯಾಗಿ ನಜ್ಜುಗುಜ್ಜಾಗಿದೆ. ಅದನ್ನು ರಿಪೇರಿ ಮಾಡಿಕೊಡುತ್ತೇನೆ. ಸಂಗ್ರಹಯೋಗ್ಯ ವಾಹನವದು. ಆಸಕ್ತಿ ಇದೆಯೆ?’ ಎಂದು ಕೇಳಿದ. ಆಗ ನನಗೂ ವಾಹನದ ಬಗ್ಗೆ ಅತಿಯಾದ ಆಸಕ್ತಿ ಇತ್ತು. ಹೂಂ ಅಂದೆ. ಅವನು ಅದನ್ನು ಸಿದ್ಧಗೊಳಿಸಿ 1500 ರೂಪಾಯಿಗೆ ಕೊಡಿಸಿದ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತಯಾರಾದ ವಿದೇಶಿ ವಾಹನವಾದ್ದರಿಂದ ಎಡಭಾಗದಲ್ಲಿ ಸ್ಟೇರಿಂಗ್ ಇತ್ತು. ಹೀಗೆ ಕಾರಿನ ಸಂಗ್ರಹಾಲಯವೂ ಆರಂಭವಾಯಿತು.

    ಕ್ರಮೇಣ ಸಂಗ್ರಹಾಲಯ ವಿಸ್ತಾರವಾಗುತ್ತಾ ಬಂತು. ಎಸ್. ಡಿ. ಶೆಟ್ಟಿ, ಪುಷ್ಪದಂತ ಮೊದಲಾದವರು ಹಳ್ಳಿಗಳಿಗೆ ಹೋಗಿ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ನಗರಗಳಿಂದ ವಸ್ತುಸಂಗ್ರಹಾಲಯದಲ್ಲಿ ಇಡಬಹುದಾದ ವಸ್ತುಗಳನ್ನು ಸಂಗ್ರಹಿಸುವುದಕ್ಕಾಗಿ ಬೆಂಗಳೂರಿನ ಗೋವಿಂದರಾಜ ಎಂಬ ಚಾಲಾಕಿ ವ್ಯಕ್ತಿ ಇದ್ದ. ಆತ ಶ್ರೀಮಂತರು ಹಾಗೂ ರಾಜ-ಮಹಾರಾಜರ ಅರಮನೆಗಳಿಗೆ ಹೋಗಿ ಅಲ್ಲಿರುವ ಅಮೂಲ್ಯವಾದ ವಸ್ತುಗಳನ್ನು ಗುರುತಿಸಿ ತರುವುದರಲ್ಲಿ ಸಿದ್ಧಹಸ್ತನಾಗಿದ್ದ. ಆತ ಎಂದೂ ಉತ್ತಮ ಬಟ್ಟೆ ಧರಿಸುತ್ತಿರಲಿಲ್ಲ. ಕಾಲಿಗೆ ಹರುಕುಮುರುಕು ಸ್ಲಿಪ್ಪರ್ ಹಾಕುತ್ತಿದ್ದ. ಏನಯ್ಯ ಹೀಗೆ ಎಂದು ಯಾರಾದರೂ ಕೇಳಿದರೆ, ‘ಸ್ವಾಮಿ ನಾವು ಒಳ್ಳೆಯ ಬಟ್ಟೆ ಹಾಕಿಕೊಂಡು ಹೋದರೆ ಮನೆ ಒಳಗಡೆ ಯಾರೂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ಅಲ್ಲದೆ ತಮ್ಮಲ್ಲಿ ಇರುವ ವಸ್ತುಗಳನ್ನು ಕೊಡುವುದಿಲ್ಲ. ಹತ್ತು ರೂಪಾಯಿ ವಸ್ತುವಿಗೆ ಸಾವಿರ ರೂಪಾಯಿ ಬೆಲೆ ಹೇಳುತ್ತಾರೆ’ ಎನ್ನುತ್ತಿದ್ದ. ಇಷ್ಟು ಸರಳತೆಯಲ್ಲಿ ಇದ್ದುಕೊಂಡೇ ಭಾರತದ ಎಲ್ಲಾ ಭಾಗಗಳಿಗೆ ಹೋಗಿ, ಅತ್ಯಂತ ಕಡಿಮೆ ದರದಲ್ಲಿ ಸಂಗ್ರಹಯೋಗ್ಯ ವಸ್ತುಗಳನ್ನು ತಂದು ಕೊಡುತ್ತಿದ್ದ. ಈಗ ನಮ್ಮ ವಸ್ತು ಸಂಗ್ರಹಾಲಯದಲ್ಲಿರುವ ಎಲ್ಲ ವಿದೇಶಿ ವಸ್ತುಗಳನ್ನು ಆತ ಭಾರತದಲ್ಲಿಯೇ ಸಂಗ್ರಹಿಸಿದ್ದು ಎಂಬುದು ವಿಶೇಷ.

    ವಸ್ತುಸಂಗ್ರಹಾಲಯದಿಂದ ಜ್ಞಾನ-ಪ್ರೇರಣೆ; ಶ್ರೀ ವೀರೇಂದ್ರ ಹೆಗ್ಗಡೆ ಅವರ ಧರ್ಮದರ್ಶನ
    ಮಂಜೂಷಾ ಮ್ಯೂಸಿಯಮ್​ನ ಒಂದು ನೋಟ.

    ಉದಾಹರಣೆಗೆ – ಮಂಜೂಷಾ ಸಂಗ್ರಹದಲ್ಲಿ ಸುಮಾರು ಏಳುನೂರು ಕ್ಯಾಮರಾಗಳಿವೆ. ಇವೆಲ್ಲ ವಿದೇಶದಲ್ಲಿ ತಯಾರಾಗಿದ್ದರೂ, ಸಂಗ್ರಹವಾದುದು ಭಾರತದಲ್ಲಿ. ಅದೂ-ಶ್ರೀಮಂತರ ಮನೆಯಲ್ಲಿ, ರಾಜಮಹಾರಾಜರಲ್ಲಿ ಇದ್ದವುಗಳು. ಕೆಲ ಕ್ಯಾಮರಾಗಳನ್ನು ಸ್ಟುಡಿಯೋಗಳಿಂದಲೂ ಸಂಗ್ರಹಿಸಲಾಗಿದೆ. ತದನಂತರ ಕೆಲವರು ಶ್ರೀಕ್ಷೇತ್ರಕ್ಕೆ ಉಡುಗೊರೆಯಾಗಿ ನೀಡಿದ ವಸ್ತುಗಳು ಕೂಡ ಸಂಗ್ರಹಾಲಯದಲ್ಲಿ ಸೇರಿಕೊಂಡಿವೆ.

    ಪಿ.ಆರ್.ತಿಪ್ಪೇಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದ ಜಾನಪದ ವಿದ್ವಾಂಸರಾಗಿದ್ದು ಅಲ್ಲಿಯ ವಸ್ತುಸಂಗ್ರಹಾಲಯದಲ್ಲಿ ಅನೇಕ ವರ್ಷ ಸೇವೆ ಸಲ್ಲಿಸಿದವರು. ಅವರ ಪರಿಚಯವಾದ ನಂತರ ‘ನಿಮ್ಮ ವಸ್ತುಸಂಗ್ರಹಾಲಯದಲ್ಲಿ ಒಳ್ಳೆಯ ವಸ್ತುಗಳಿವೆ. ನಾನು ಅಲ್ಲಿಗೆ ಬಂದು ಅವುಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕಾರ್ಯ ಕೈಗೊಳ್ಳುತ್ತೇನೆ’ ಎಂದರು. ಅವರು ಬಂದಾಗ ನಾನು ಸಂಕೋಚದಿಂದ ‘ನಮ್ಮಲ್ಲಿ ವಸ್ತುಗಳನ್ನು ಸಂಗ್ರಹಿಸಿದ್ದೇವೆ. ಆದರೆ ಪ್ರದರ್ಶನಕ್ಕೆ ಯೋಗ್ಯವಾದ ವಸ್ತುಗಳಿವೆಯೇ ಎಂಬ ಸಂಶಯ ನನಗಿದೆ’ ಎಂದು ಹೇಳಿದ್ದೆ. ಈ ಮಾತನ್ನು ಕೇಳಿ ಅವರಿಗೆ ಏಕಕಾಲದಲ್ಲಿ ಬೇಸರವೂ, ಕೋಪವೂ ಬಂತು. ‘ಏನು ಸ್ವಾಮಿ ಹೀಗೆ ಹೇಳುತ್ತಿದ್ದೀರಿ. ನಿಮ್ಮಲ್ಲಿ ಸಂಗ್ರಹವಾಗಿರುವ ವಸ್ತುಗಳ ಮೌಲ್ಯ ನಿಮಗೆ ಗೊತ್ತಿಲ್ಲ. ನಿಮ್ಮಲ್ಲಿ ಎಷ್ಟು ಅಮೂಲ್ಯವಾದ ಸಂಪತ್ತಿದೆ, ಎಷ್ಟು ವಸ್ತುಗಳಿವೆ, ಅವುಗಳನ್ನು ಹೇಗೆ ಸಂಗ್ರಹಿಸಿದ್ದೀರಿ ಎಂಬುದು ನಿಮಗೆ ಗೊತ್ತಿಲ್ಲ. ಇಷ್ಟು ವಸ್ತುಗಳಿದ್ದೂ ಏಕೆ ಹೀಗೆ ಮಾತನಾಡುತ್ತೀರಿ’ ಎಂದು ಅಸಮಾಧಾನ ಪ್ರದರ್ಶಿಸಿದರು. ‘ಹಾಗಾದರೆ ನೀವೇ ನಮಗೆ ಸಹಕಾರ ಕೊಡಿ’ ಎಂದು ಕೇಳಿಕೊಂಡೆ. ಅವರು ಒಳ್ಳೆಯ ಕಲಾವಿದರಾಗಿದ್ದರು. ಪುಸ್ತಕದಲ್ಲಿ ಮೂಲವಸ್ತುವಿನ ಕೈಚಿತ್ರಗಳನ್ನು ಬರೆದು, ಅದಕ್ಕೆ ನಂಬರ್​ಗಳನ್ನು ಹಾಕಿ ಪ್ರದರ್ಶಿಸಲು ಅನುಕೂಲ ಮಾಡಿಕೊಟ್ಟರು. ಹಾಗಾಗಿ ಮಂಜೂಷಾ ವಸ್ತುಸಂಗ್ರಹಾಲಯ ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾಗಿ ಮೂಡಿಬಂತು.

    ನಾನು ಯಾವುದೇ ದೇಶಕ್ಕೆ ಪ್ರವಾಸಕ್ಕೆ ಹೋದರೂ ಅಲ್ಲಿಂದ ಸ್ವಲ್ಪ ವಸ್ತುಗಳನ್ನು ತರುತ್ತೇನೆ. ವಿದೇಶಕ್ಕೆ ಹೋದಾಗ ನಮ್ಮ ಕೈಯಲ್ಲಿ ಹಣ ಹೆಚ್ಚಿಗೆ ಇರುವುದಿಲ್ಲ. ಹಾಗಾಗಿ ಮೂಲ ಸಂಗ್ರಹಕಾರರಿಂದ ವಸ್ತುಗಳನ್ನು ಸಂಗ್ರಹಿಸುವುದು ಕಷ್ಟಸಾಧ್ಯ. ಆಂಟಿಕ್ ಅಥವಾ ಪ್ರಾಚೀನ ವಸ್ತುಗಳು ದುಬಾರಿಯಾದ್ದರಿಂದ ಅಂಥವನ್ನೂ ತರುವುದಿಲ್ಲ.

    ಹೈದರಾಬಾದಿನ ಸಾಲಾರ್ಜಂಗ್, ಮುಂಬೈನ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಹಾಗೂ ವಿಕ್ಟೋರಿಯಾ ಮತ್ತು ಅಲ್ಬರ್ಟ್ (ಈಗ ಹೆಸರು ಬದಲಾಯಿಸಲಾಗಿದೆ) ಮ್ಯೂಸಿಯಂನಲ್ಲಿ ಸಮಕಾಲೀನ ವಸ್ತುಗಳನ್ನು ಸಂಗ್ರಹಿಸಿದ್ದಾರೆ. ಮ್ಯೂಸಿಯಂನಲ್ಲಿ ಹಳೆಯ ವಸ್ತುಗಳನ್ನು ಸಂಗ್ರಹಿಸಿ ಅವನ್ನು ಸುಂದರವಾದ ರೀತಿಯಲ್ಲಿ ಇಡುವುದು ಒಂದು ವಿಧವಾದರೆ, ನಮ್ಮ ಸಮಕಾಲೀನ ವಸ್ತುಗಳನ್ನು ಸಂಗ್ರಹಿಸಿ ಜೋಡಿಸಿದರೆ ಮುಂದಿನ ಐವತ್ತು ನೂರು ವರ್ಷಗಳು ಕಳೆದಾಗ ಅವೇ ಪ್ರಾಚೀನವಾಗುತ್ತವೆ. ಹಾಗಾಗಿ ಹೈದರಾಬಾದಿನ ಸಾಲಾರ್ಜಂಗ್ ಎನ್ನುವವರು ಸಮಕಾಲೀನ ವಸ್ತುಗಳನ್ನು ಅಪಾರ ಬೆಲೆ ತೆತ್ತು ಸಂಗ್ರಹಿಸಿದರು ಎಂದು ಅನಿಸಿತು. ಗಾಜಿನ ವಸ್ತುಗಳು, ಬೆಳ್ಳಿ, ಲೋಹದ ವಸ್ತುಗಳು, ಆಕರ್ಷಕವಾದ ಫ್ಯಾನ್ಸಿ ವಸ್ತುಗಳು ಅಪರೂಪದ ಸಮಕಾಲೀನ ವಸ್ತುಗಳು. ಜೈಪುರದ ಅರಮನೆ ಮ್ಯೂಸಿಯಂನಲ್ಲಿ ಕೂಡ ಇಂತಹ ಕ್ರಿಸ್ಟಲ್ ಗಾಜಿನ ವಸ್ತುಗಳನ್ನು ಇಟ್ಟಿದ್ದಾರೆ. ನಾನು ಕೂಡ ಕೆಲವು ಸಮಕಾಲೀನವಾದ ವಸ್ತುಗಳನ್ನು ಸಂಗ್ರಹಿಸಿದ್ದಿದೆ. ಹೀಗೆ ಅನೇಕ ವಿಧವಾದ ಆಸಕ್ತಿ ಮತ್ತು ಅದಕ್ಕನುಗುಣವಾದ ವಸ್ತುಗಳಿಂದಾಗಿ ಒಳ್ಳೆಯ ಸಂಗ್ರಹ ನಮ್ಮ ಮಂಜೂಷಾ ಮ್ಯೂಸಿಯಂನಲ್ಲಿ ಇದೆ ಎಂಬ ಹೆಗ್ಗಳಿಕೆ ಇದೆ. ಮ್ಯೂಸಿಯಂ ವಿಷಯದಲ್ಲಿ ತರಬೇತಿ ಪಡೆದ ಒಬ್ಬರನ್ನು ನೇಮಿಸಿ ವಸ್ತುಗಳನ್ನು ಪ್ರದರ್ಶನಯೋಗ್ಯವಾಗಿ, ಸುಂದರವಾಗಿ ಜೋಡಿಸುತ್ತಿದ್ದು, ಇನ್ನಷ್ಟು ಆಕರ್ಷಕವಾಗಿ ಬೆಳೆಸಬೇಕೆಂಬ ಹಂಬಲವಿದೆ. ಈಗ ಸುಮಾರು ಒಂದು ಲಕ್ಷ ಚದರಡಿ ಜಾಗದ ವಿಶಾಲವಾದ ಕಟ್ಟಡದಲ್ಲಿ ಮ್ಯೂಸಿಯಂ ಸ್ಥಾಪಿಸಿದ್ದೇವೆ. ಇಂತಹ ವಸ್ತುಸಂಗ್ರಹಾಲಯವನ್ನು ನೋಡಿ ನಮ್ಮ ಯುವಜನಾಂಗ ಸ್ಪೂರ್ತಿ ಪಡೆಯಬೇಕು, ನಮ್ಮ ದೇಶದ ಪ್ರಾಗೈತಿಹಾಸಿಕ ಮಹತ್ವ ಅರಿತುಕೊಂಡು ಹೆಮ್ಮೆ-ಗೌರವ ಪಡುವಂತಾಗಬೇಕು ಎಂಬುದು ನಮ್ಮ ಅಪೇಕ್ಷೆ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts