More

    ಆಗಸ್ಟ್‌ವರೆಗೂ ಧರ್ಮಾ ಜಲಾ‘ಆಶಯ’

    ಹಾನಗಲ್ಲ: ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಅರ್ಧ ಅವಧಿ ಕಳೆದು ಹೋಗಿದೆ. ಆದರೆ, ಇದುವರೆಗೂ ರಭಸದ ಮಳೆಯಾಗಿಲ್ಲ. ಇದರಿಂದಾಗಿ, ತಾಲೂಕಿನ ಪ್ರಮುಖ ನೀರಿನ ಮೂಲಗಳಲ್ಲಿ ಒಂದಾಧ ಧರ್ಮಾ ಜಲಾಶಯ ನೀರಿನ ಹರಿವಿನ ಕೊರತೆಯಿಂದ ಖಾಲಿಯಾಗಿದೆ. ಹೀಗಾಗಿ, ಭತ್ತ ನಾಟಿ ಮಾಡುವುದು ಹೇಗೆಂಬ ಚಿಂತೆ ರೈತ ಸಮುದಾಯವನ್ನು ಕಾಡುತ್ತಿದೆ.

    ಹಾನಗಲ್ಲ ತಾಲೂಕಿನ 18000 ಎಕರೆ ಭತ್ತ ಬೆಳೆಯುವ ಪ್ರದೇಶಕ್ಕೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿರುವ ಧರ್ಮಾ ಜಲಾಶಯವೇ ನೀರಿನ ಮೂಲ. ಆದರೆ, ಮುಂಗಾರು ಹಂಗಾಮ ಆರಂಭವಾಗಿ 2 ತಿಂಗಳು ಕಳೆಯುತ್ತಿದ್ದರೂ ಈ ಜಲಾಶಯಕ್ಕೆ ನೀರು ಹರಿದು ಬರುತ್ತಿಲ್ಲ.

    ಕಳೆದ ಹತ್ತಿಪ್ಪತ್ತು ವರ್ಷಗಳ ಇತಿಹಾಸದಲ್ಲೇ ಇಂಥ ಭೀಕರ ಪರಿಸ್ಥಿತಿಯನ್ನು ರೈತ ಸಮುದಾಯ ಕಂಡಿರಲಿಲ್ಲ. ಈ ವರ್ಷ ಜುಲೈ ತಿಂಗಳು ಕೊನೆಯ ಭಾಗದಲ್ಲಿದ್ದರೂ ಹೊಲ- ಗದ್ದೆಗಳಿಗೆ, ಜಲಾಶಯಕ್ಕೆ ನೀರು ಹರಿಯುವಂಥ ಮಳೆಯಾಗದಿರುವುದು ರೈತರು ಆಶಾಭಾವನೆ ಕಳೆದುಕೊಳ್ಳಲು ಕಾರಣವಾಗುತ್ತಿದೆ.

    653 ಹೆಕ್ಟೇರ್ ವಿಸ್ತಾರ: ಧರ್ಮಾ ಜಲಾಶಯ ಸುಮಾರು 653 ಹೆಕ್ಟೇರ್ ವಿಸ್ತಾರವಾದ ಪ್ರದೇಶ ಹೊಂದಿದೆ. ಇಸಳೂರು, ಮಳಗಿ ಸೇರಿ ಮುಂಡಗೋಡ ಸುತ್ತಲೂ ಮಳೆಯಾದರೆ ಈ ಜಲಾಶಯ ತುಂಬುತ್ತದೆ. ಸುತ್ತಲಿನ 97 ಚ.ಕಿ.ಮೀ. ವ್ಯಾಪ್ತಿಯ ನೀರು ಈ ಜಲಾಶಯಕ್ಕೆ ಹರಿದು ಬರುತ್ತದೆ. ಇದು ಗರಿಷ್ಠ 29 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

    ಒಮ್ಮೆ ಜಲಾಶಯ ತುಂಬಿದರೆ ಮಳೆಗಾಲ ಹಾಗೂ ಬೇಸಿಗೆಯಲ್ಲೂ ಹಾನಗಲ್ಲ ತಾಲೂಕಿನ ರೈತರು ನಿರಾತಂಕವಾಗಿ ಬೆಳೆ ಬೆಳೆಯಬಹುದಾಗಿದೆ. ಈ ಜಲಾಶಯದ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗೆ ನೀರೊದಗಿಸುವುದಲ್ಲದೆ, 98 ಕೆರೆಗಳನ್ನೂ ಜಲಾಶಯದ ನೀರಿನಿಂದಲೇ ತುಂಬಿಸಲಾಗುತ್ತದೆ. ಮುಂಡಗೋಡ ಹಾಗೂ ಹಾನಗಲ್ಲ ಪಟ್ಟಣದ ಸಾವಿರಾರು ಜನತೆ ಕುಡಿಯುವ ನೀರಿಗಾಗಿ ಈ ಜಲಾಶಯವನ್ನೇ ಅವಲಂಬಿಸಿದ್ದಾರೆ.

    ಭತ್ತಕ್ಕೆ ಕುತ್ತು: ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿನ ಸುಮಾರು 10 ಸಾವಿರ ಎಕರೆಯಲ್ಲಿ ಭತ್ತ ನಾಟಿಗಾಗಿ ಈ ನೀರನ್ನೆ ನಂಬಿದ್ದಾರೆ. ಜಲಾಶಯದ ಕೆಳಭಾಗದ ಈ ಕೃಷಿ ಭೂಮಿಯಲ್ಲಿ ಭತ್ತ ಹೊರತುಪಡಿಸಿ ಬೇರೆ ಬೆಳೆ ನಾಟಿ ಮಾಡಲು ಸಾಧ್ಯವಿಲ್ಲ. ಮುಂಗಾರು ಹಂಗಾಮ ಆರಂಭವಾದ ನಂತರ ಜಲಾಶಯದಿಂದ ನೀರು ಬಿಡುಗಡೆಗೊಳಿಸುವುದು ವಾಡಿಕೆ. ಇದೇ ನೀರಿನಲ್ಲಿ ಭತ್ತ ನಾಟಿ ಮಾಡುವುದು ತಾಲೂಕಿನ ರೈತರ ಸಂಪ್ರದಾಯ.

    ಪ್ರಸ್ತುತ ಕೃಷಿ ವರ್ಷದಲ್ಲಿ ಸಾಕಷ್ಟು ನೀರು ಹರಿದು ಬರುವಂಥ ಮಳೆ ಮುಂಡಗೋಡ ತಾಲೂಕಿನಲ್ಲಿ ಆಗದಿರುವುದರಿಂದ ಜಲಾಶಯದ ಒಡಲು ಇನ್ನೂ ಖಾಲಿಯಾಗಿಯೇ ಉಳಿದಿದೆ. ಹೀಗಾಗಿ ತಾಲೂಕಿನ ರೈತರು ಈ ಬಾರಿ ಭತ್ತ ನಾಟಿ ಮಾಡಬೇಕೋ ಅಥವಾ ಬೇಡವೋ ಎಂಬ ದ್ವಂದ್ವದಲ್ಲಿದ್ದಾರೆ.

    ಕೊಳವೆಬಾವಿಗಳೂ ಖಾಲಿ: ಮಾರ್ಚ್ ನಂತರದ ಕಡುಬೇಸಿಗೆಯಲ್ಲಿ ಕೊಳವೆಬಾವಿಗಳ ಅಂತರ್ಜಲ ತೀವ್ರ ಕುಸಿತವಾಗಿದೆ. ಅವುಗಳಲ್ಲಿ ನೀರು ಮರುಶೇಖರಣೆಯಾಗುವಷ್ಟು ಮಳೆ ಆಗದಿರುವುದರಿಂದ ಕೊಳವೆಬಾವಿಗಳನ್ನು ಆಶ್ರಯಿಸಿ ಭತ್ತ ನಾಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ.

    ಭತ್ತದ ಹೊಲಗಳನ್ನು ಸಿದ್ಧಪಡಿಸಿಕೊಳ್ಳಲು ನೀರು ನಿಲ್ಲಿಸಲು ಮಳೆ ಅಗತ್ಯ ಪ್ರಮಾಣದಲ್ಲಿ ಸುರಿದಿಲ್ಲ. ಹೀಗಾಗಿ ಭತ್ತದ ಭೂಮಿಯೂ ಸಿದ್ಧಗೊಂಡಿಲ್ಲ. ಆದರೂ ಆ. 15ರವರೆಗೂ ರೈತರು ಕಾದು ನೋಡಬೇಕಾದ ಅನಿವಾರ್ಯತೆಯಿದೆ. ಅದರ ನಂತರವೂ ಮಳೆಯಾಗದಿದ್ದರೆ ಈ ವರ್ಷ ಅಲ್ಪಸ್ವಲ್ಪ ಭತ್ತ ಬೆಳೆಯಲೂ ಸಾಧ್ಯವಾಗುವುದಿಲ್ಲ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ.

    9 ಅಡಿ ಸಂಗ್ರಹ: ತಾಲೂಕಿನ ಶೃಂಗೇರಿ, ಹೀರೂರು, ಗೆಜ್ಜಿಹಳ್ಳಿ, ಗಿರಿಸಿನಕೊಪ್ಪ, ಅಕ್ಕಿಆಲೂರು, ಬಾಳಂಬೀಡ, ಚನ್ನಾಪುರ, ಕಾಲ್ವೆಯಲ್ಲಾಪುರ, ಇನಾಂಯಲ್ಲಾಪುರ, ಡೊಳ್ಳೇಶ್ವರ, ಸುರಳೇಶ್ವರ, ಅಕ್ಕಿವಳ್ಳಿ, ಅರಳೇಶ್ವರ, ಹೋತನಹಳ್ಳಿ, ಕಲ್ಲಾಪುರ, ಯತ್ತಿನಹಳ್ಳಿ, ಮಲಗುಂದ, ಹಾವಣಗಿ, ಶ್ಯಾಡಗುಪ್ಪಿ, ಅರಿಷಣಗುಪ್ಪಿ ಸೇರಿ ಹಲವು ಗ್ರಾಮಗಳ ಭತ್ತ ಬೆಳೆಯುವ ನೂರಾರು ರೈತರು ಜಲಾಶಯಕ್ಕೆ ನೀರು ಹರಿದೀತೇ ಎಂದು ಕಾದು ನೋಡುತ್ತಿದ್ದಾರೆ. ಸದ್ಯ ಜಲಾಶಯದಲ್ಲಿ 9 ಅಡಿ ನೀರು ಸಂಗ್ರಹವಿದೆ. ಅದು ಭತ್ತ ನಾಟಿಗೆ ಸಾಲದಂತಾಗಿದೆ.

    ಹಿಂದಿನ ಎರಡು ದಶಕಗಳಲ್ಲಿ ನೀರಿನ ಕೊರತೆ ಪರಿಸ್ಥಿತಿ ಎದುರಾಗಿರಲಿಲ್ಲ. ಈ ಬಾರಿ ಮುಂಗಾರು ವಿಳಂಬ ಹಾಗೂ ಮಳೆಯ ಕೊರತೆಯಿಂದಾಗಿ ಜಲಾಶಯ ಕಳೆಗಟ್ಟಿಲ್ಲ. ರೈತರು ನೀರಿಗಾಗಿ ಕಾಯುತ್ತಿದ್ದಾರೆ. ಹಿಂದಿನ ವರ್ಷಗಳಲ್ಲಿ ಈ ಹೊತ್ತಿಗೆ ಜಲಾಶಯ ತುಂಬಿ ಬಾಗಿನ ನೀಡಲು ಜನಪ್ರತಿನಿಧಿಗಳು, ರೈತರು ಮುಂದಾಗಿದ್ದರು. ಈಗ ಆಗಸ್ಟ್‌ವರೆಗೂ ಕಾಯ್ದು ನೋಡಬೇಕಿದೆ.
    I ಪ್ರಲ್ಹಾದ ಶೆಟ್ಟಿ, ಎಇಇ ಬೃಹತ್ ನೀರಾವರಿ ಇಲಾಖೆ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts