More

    ಧರ್ಮಸ್ಥಳ ಪೊಲೀಸ್ ಠಾಣೆ ನೂತನ ಕಟ್ಟಡಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿಲಾನ್ಯಾಸ

    ಬೆಳ್ತಂಗಡಿ: ಕರಾವಳಿ ಮೂಲಕ ವಿದೇಶೀಯರ ಅಕ್ರಮ ಪ್ರವೇಶ ತಡೆಗೆ ಕರಾವಳಿ ಕಾವಲು ಪಡೆಯ ಬಿಗಿ ಬಂದೋಬಸ್ತ್ ಕೈಗೊಳ್ಳಲಿದೆ. ಇದಕ್ಕಾಗಿ 30 ಬೋಟ್‌ಗಳನ್ನು ಖರೀದಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

    ಧರ್ಮಸ್ಥಳದಲ್ಲಿ ಮಂಗಳವಾರ 2.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಪೊಲೀಸ್ ಠಾಣೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
    ಸ್ಯಾಟಲೈಟ್ ಫೋನ್ ಬಳಕೆ ಹಾಗೂ ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿ ಅಪರಾಧ ಪತ್ತೆ ಘಟಕ ಪ್ರಾರಂಭಿಸಲಾಗುವುದು. ಸಂಚಾರಿ ಎಫ್‌ಎಸ್‌ಎಲ್ ಪ್ರಯೋಗಾಲಯ, ಸಂಚಾರಿ ವಾಹನ ಹಾಗೂ ಗಸ್ತು ಪಡೆ ನಿಯೋಜನೆಯೊಂದಿಗೆ ಅಪರಾಧ ಪ್ರಕರಣಗಳನ್ನು ತಡೆಯಲಾಗುವುದು ಎಂದರು.
    ಉಪನಿರೀಕ್ಷಕರ ಹುದ್ದೆಗಾಗಿ 950 ಮಂದಿಗೆ ಸಂದರ್ಶನ ನಡೆಸಿದ್ದು ಸದ್ಯದಲ್ಲೇ ನೇಮಕಾತಿ ಆದೇಶ ನೀಡಲಾಗುವುದು. ಎರಡು ವರ್ಷದೊಳಗೆ ಪೊಲೀಸರಿಗೆ 11,000 ಮನೆ ನಿರ್ಮಾಣವಾಗಲಿದೆ. 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಪೊಲೀಸರ ಮಕ್ಕಳ ಶಿಕ್ಷಣಕ್ಕೂ ವಿಶೇಷ ಸೌಲಭ್ಯ ನೀಡಲಾಗುವುದು ಎಂದರು.
    ಶಾಸಕ ಹರೀಶ್ ಪೂಂಜ ಮಾತನಾಡಿದರು. ಮುಖ್ಯ ಅಭಿಯಂತ ಎನ್.ಜಿ.ಗೌಡಯ್ಯ ಮತ್ತು ಧರ್ಮಸ್ಥಳ ಗ್ರಾಪಂ ಅಧ್ಯಕ್ಷೆ ಜಯಾ ಮೋನಪ್ಪ ಗೌಡ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೊನಾವಣೆ ಸ್ವಾಗತಿಸಿ, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್ ವಂದಿಸಿದರು.

    ಧರ್ಮಸ್ಥಳದಲ್ಲಿ ಧರ್ಮ, ನ್ಯಾಯ, ನೀತಿ ಜಾಗೃತ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಅನ್ಯಾಯ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಿ ಶಾಂತಿ ಹಾಗೂ ಸಾಮಾಜಿಕ ಸಾಮರಸ್ಯ ಕಾಪಾಡಲು ಪೊಲೀಸರು ಉತ್ತಮ ಸೇವೆ ನೀಡುತ್ತಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬ ತತ್ವದ ನೆಲೆಯಲ್ಲಿ ಧರ್ಮ ರಕ್ಷಣೆಯೊಂದಿಗೆ ಶಾಂತಿ, ಸುಭಿಕ್ಷೆ ಕಾಪಾಡಲು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಅನುಗ್ರಹದಿಂದ ಹಾಗೂ ಭೂತನಾಥನಾದ ಅಣ್ಣಪ್ಪ ಸ್ವಾಮಿಯ ಭಯದಿಂದ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ಜಾಗೃತವಾಗಿದೆ. ಆದಷ್ಟು ಬೇಗ ನೂತನ ಪೊಲೀಸ್ ಠಾಣಾ ಕಟ್ಟಡ ಪೂರ್ಣಗೊಳ್ಳಲಿ ಎಂದರು.

    ಗೋ ಅಕ್ರಮ ಸಾಗಾಟ ತಡೆಗೆ ಕ್ರಮ: ಗೋವುಗಳ ಅಕ್ರಮ ಸಾಗಾಟ ಹಾಗೂ ಅಕ್ರಮ ಕಸಾಯಿಖಾನೆ ತಡೆಗೆ ಬಿಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮರಳು ಅಕ್ರಮ ಸಾಗಾಟ ತಡೆಗೆ ಹೊಸ ಕಾನೂನು ನೀತಿ ಜಾರಿಗೊಳಿಸಿ, ಗ್ರಾಪಂಗೆ ಅಧಿಕಾರ ನೀಡಲಾಗಿದೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ನೈತಿಕ ಪೊಲೀಸ್‌ಗಿರಿ ತಡೆಯುತ್ತೇವೆ. ಮೂಢನಂಬಿಕೆ, ಬಡತನದ ನೆಪದಿಂದ ಆಮಿಷ ಒಡ್ಡುವುದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts