More

    ಸ್ವಚ್ಛ ದೇಶ, ಸ್ವಚ್ಛ ದೇಹ: ರೋಗಕ್ಕೆ ಇಲ್ಲ ಜಾಗ..

    ಸ್ವಚ್ಛ ದೇಶ, ಸ್ವಚ್ಛ ದೇಹ: ರೋಗಕ್ಕೆ ಇಲ್ಲ ಜಾಗ..ಕನ್ಯಾಕುಮಾರಿಯಿಂದ ದೂರದ ದೆಹಲಿಗೆ ರೈಲಿನಲ್ಲಿ ಪಯಣಿಸುತ್ತಿರುವುದನ್ನು ಊಹಿಸಿಕೊಳ್ಳಿ. ಎರಡು ದಿನಗಳ ಅವಧಿಯಲ್ಲಿ ಪಕ್ಕದಲ್ಲಿ ಕುಳಿತ ವ್ಯಕ್ತಿ ನಿರಂತರವಾಗಿ ಕೆಮ್ಮುತ್ತಿರುತ್ತಾನೆ. ಆಗಾಗ ಎದ್ದುಹೋಗಿ ಕಫವನ್ನು ಹೊರಹಾಕಿ ಬರುತ್ತಿರುತ್ತಾನೆ. ಆ ಅಪರಿಚಿತ ವ್ಯಕ್ತಿಯ ಪಕ್ಕದಲ್ಲೇ ಊಟ-ತಿಂಡಿ, ರಾತ್ರಿ ನಿದ್ರೆ, ಹಗಲಿಡೀ ಕುಳಿತುಕೊಳ್ಳುವ ಪರಿಸ್ಥಿತಿ. ಜ್ವರವೂ ಜೋರಾಗಿ ವ್ಯಕ್ತಿ ನಡುಗಲು ಆರಂಭಿಸಿರುತ್ತಾನೆ. ಆ ವ್ಯಕ್ತಿ ನಿಜಕ್ಕೂ ಬಳಲುತ್ತಿರುವುದು ಕ್ಷಯರೋಗದಿಂದ! ಹಾಗೆಂದು ಆತನಿಗೂ ಅದು ತಿಳಿದಿಲ್ಲ! ಪಯಣದ ಬಳಿಕ ಕ್ಷಯರೋಗವಿರುವುದು ದೃಢವಾಗಿತ್ತು! ಈಗ ಹೇಳಿ, ಆ ರೋಗಿಯ ಜೊತೆಗೇ ಸಾಗಿದ ನಮ್ಮ ಅವಸ್ಥೆಯೇನು? ಕ್ಷಯರೋಗ ಚಿಕಿತ್ಸೆಗೆಂದೇ ಜನರಿಂದ ಪ್ರತ್ಯೇಕಿಸಲ್ಪಟ್ಟ ಟಿಬಿ ಸ್ಯಾನಿಟೋರಿಯಂ ಇರುತ್ತದೆ. ಆದರಿಲ್ಲಿ ನಡೆದದ್ದೇ ಬೇರೆ. ಹೀಗಿದ್ದೂ ನಿಮಗೆ ಕ್ಷಯರೋಗ ಬಂದುಬಿಡುವುದಿಲ್ಲ! ಕ್ಷಯರೋಗ ಆಸ್ಪತ್ರೆಯಲ್ಲಿ ಹಗಲೂರಾತ್ರಿ ಕೆಲಸ ಮಾಡುವ ಆಯಾಗಳಿರುತ್ತಾರೆ. ರೋಗಿಗಳ ಶುಶ್ರೂಷೆ ಮಾಡುವ ದಾದಿಯರೂ ಇರುತ್ತಾರೆ. ಆಸ್ಪತ್ರೆಗೆ ಸಾವಿರಾರು ಕ್ಷಯರೋಗಿಗಳು ಬಂದು ಹೋಗುತ್ತಾರೆ. ಹಾಗೆಂದು ಅಲ್ಲಿರುವ ಆಯಾ, ದಾದಿ, ವೈದ್ಯರುಗಳಿಗೆ ಕ್ಷಯರೋಗವೇನೂ ತಟ್ಟುವುದಿಲ್ಲ!

    ಮನೆಯಲ್ಲಿ ಒಬ್ಬರಿಗೆ ಕೆಂಗಣ್ಣು ಬಂದಾಗ ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಊರಿನಲ್ಲಿಡೀ ವ್ಯಾಪಿಸಿರುತ್ತದೆ. ಆದರೆ ದಿನವಿಡೀ ಕೆಂಗಣ್ಣಿನ ರೋಗಿಗಳನ್ನೇ ತುಂಬ ಹತ್ತಿರದಿಂದ ಪರೀಕ್ಷಿಸುವ ನೇತ್ರತಜ್ಞರಿಗೆ ಅದು ಹರಡುವುದೇ ಇಲ್ಲವಲ್ಲ! ಅಷ್ಟ್ಯಾಕೆ, ಮನೆಯಲ್ಲೇ ಇರುವ ಐವರಲ್ಲಿ ನಾಲ್ವರಿಗೆ ವೈರಾಣುಜ್ವರ ಬಂದಾಗ ಒಬ್ಬರು ಮಾತ್ರ ಆರೋಗ್ಯ ಹದಗೆಡದೆ ನೆಟ್ಟಗೆ ಓಡಾಡುತ್ತಿರುತ್ತಾರೆ! ಇತ್ತೀಚೆಗೆ ಪರದೇಶದಿಂದ ಬಂದಿಳಿದ ಕರೊನಾಪೀಡಿತ ಟೆಕ್ಕಿಯೊಬ್ಬ ಬಸ್, ಮಾಲ್, ಕಚೇರಿ, ಅಪಾರ್ಟ್​ವೆುಂಟ್​ಗಳಲ್ಲೆಲ್ಲ ಓಡಾಡಿ, ಮೂರುಸಾವಿರದಷ್ಟು ಜನರ ಸಂಪರ್ಕದಲ್ಲಿದ್ದರೂ ಅವರ್ಯಾರಿಗೂ ಕರೊನಾ ಬಂದಿಲ್ಲವಲ್ಲ! ಹೊರದೇಶದಿಂದ ಕರೊನಾದೊಂದಿಗೆ ಕಲಬುರಗಿಗೆ ಬಂದ ವ್ಯಕ್ತಿಯನ್ನು ನಿತ್ಯ ಪರೀಕ್ಷಿಸಿದ ವೈದ್ಯರೊಬ್ಬರಿಗೆ ಬಿಟ್ಟರೆ ಅವರ ಜೊತೆಯಲ್ಲೇ ಇದ್ದ ಇನ್ಯಾರಿಗೂ ಕರೊನಾ ಹರಡಲು ಸಾಧ್ಯವಾಗಿಲ್ಲವಲ್ಲ! ನಮ್ಮ ಶರೀರದ ರೋಗನಿರೋಧಕ ಶಕ್ತಿಯು ಪ್ರಬಲವಾಗಿದ್ದರೆ ರೋಗಕ್ಕೆ ಈಡಾಗದೆ ಇರಲು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತದೆ. ಇದಾಗಬೇಕಿದ್ದರೆ ಸ್ವಚ್ಛ ದೇಶದೊಂದಿಗೆ ಸ್ವಚ್ಛ ದೇಹವೂ ನಮ್ಮೆಲ್ಲರ ಮೂಲಮಂತ್ರವಾಗಬೇಕು. ದೇಹ, ಮನೆ, ಪರಿಸರ, ದೇಶಗಳು ಪರಿಶುದ್ಧವಾಗಿದ್ದರೆ ರೋಗವನ್ನು ಎದುರಿಸುವ ಬಲ ಬಹುಪಾಲು ಹೆಚ್ಚಿರುತ್ತದೆ. ಮನೆಯ ಫ್ಯಾನ್, ಏರ್​ಕಂಡೀಷನರ್ ಮೊದಲಾದ ಉಪಕರಣಗಳಲ್ಲಿ ಒಳಗೆ ಧೂಳು ತುಂಬಿದೆ ಎಂದಿಟ್ಟುಕೊಳ್ಳಿ. ಬಿಡುವು ಮಾಡಿಕೊಂಡು ಅದನ್ನು ನೀವೇ ಸ್ವತಃ ಸ್ವಚ್ಛಗೊಳಿಸಿದರೆ ಸಿಗುವ ಖುಷಿಯೇ ಬೇರೆ! ಹೊರಗಿನಿಂದ ನೋಡಿದರೆ ಸ್ವಚ್ಛಗೊಂಡದ್ದು ಏನೂ ಕಾಣಿಸುವುದಿಲ್ಲ. ಆದರೆ ಮನಸ್ಸು ಅರಳಿರುತ್ತದೆ, ಉಲ್ಲಸಿತವಾಗಿರುತ್ತದೆ. ಒಳಗೆ ಆಗಿರುವ ಸ್ವಚ್ಛತೆ ಬೇರೆಯವರ ಅರಿವಿಗೆ ಬಾರದಿದ್ದರೂ ನೀವು ಸ್ವತಃ ಅನುಭವಿಸುತ್ತೀರಿ. ಊಟ ಮಾಡುವಾಗ ಬಾಳೆಎಲೆಯಲ್ಲಿ ಲವಲೇಶವನ್ನೂ ಬಿಡದೆ ಅಚ್ಚುಕಟ್ಟಾಗಿ ಉಣ್ಣುವವರನ್ನು ನೋಡಿರುತ್ತೀರಿ. ನೋಡುವ ನಿಮಗಿಂತ ಹೆಚ್ಚು ಆನಂದದಲ್ಲಿ ಅವರಿರುತ್ತಾರೆ. ನಿತ್ಯವೂ ಪೂರ್ಣದೇಹಕ್ಕೆ ಸ್ನಾನ ಮಾಡಿದರೆ ಜೊತೆಯಲ್ಲಿರುವವರಿಗೆ ಹಿತಾನುಭವ ಉಂಟಾಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಸ್ನಾನ ಮಾಡಿದವರು ಲವಲವಿಕೆಯಲ್ಲಿ ಇರುತ್ತಾರೆ. ಸಾಂಕ್ರಾಮಿಕ ರೋಗ ತಡೆಯಲು ಸಾಮೂಹಿಕ ಅಂತರಂಗದಶಕ್ತಿ ಬೇಕು. ಆತಂಕ ಬೇಡ, ಆರೈಕೆ ಬೇಕು.

    ಪಂಚಸೂತ್ರಗಳು

    ಶುಂಠಿ: ಹೃದಯಕ್ಕೆ ಬಲದಾಯಕ.

    ಎಲಚಿಹಣ್ಣು: ರಕ್ತಸ್ರಾವ ನಿಲ್ಲಿಸುತ್ತದೆ.

    ಧಾತಕೀ ಹೂ: ದೀರ್ಘಕಾಲದ ಗಾಯ ಗುಣಕಾರಿ.

    ಅಲಸಂಡೆ: ಹೊಟ್ಟೆಯುಬ್ಬರ ಉಂಟುಮಾಡುತ್ತದೆ.

    ಕಾಡುಉದ್ದು: ಬಾಣಂತಿಯರ ಹಾಲು ಹೆಚ್ಚಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts