More

    ಹುಬ್ಬಳ್ಳಿಯಲ್ಲೇ ಶಬರಿಮಲೈ ಕಂಡ ಭಕ್ತರು

    ಹುಬ್ಬಳ್ಳಿ: 18 ಮೆಟ್ಟಿಲು ಏರಿ ಧನ್ಯತಾಭಾವ ಪಡೆದ ಮಾಲಾಧಾರಿಗಳು. ಮಂಡಲವ್ರತ ಪೂರ್ಣಗೊಳಿಸಿದ ಭಕ್ತರಿಂದ ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಕೆ. ಶಬರಿಮಲೈಯಲ್ಲಿ ಕಂಡ ಜ್ಯೋತಿಯ ದರ್ಶನವನ್ನು ಬೃಹತ್ ಪರದೆ ಮೇಲೆ ಕಂಡು ಪುನೀತರಾದ ಭಕ್ತರು. ಸಹಸ್ರಾರು ಜನರಿಂದ ಏಕ ಸ್ವರದಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಘೊಷಣೆ…

    ಈ ದೃಶ್ಯ ಕಂಡುಬಂದಿದ್ದು ಗುರುವಾರ ಮಕರ ಸಂಕ್ರಾಂತಿ ದಿನ ಇಲ್ಲಿಯ ವಿದ್ಯಾನಗರ ಶಿರೂರ ಪಾರ್ಕ್​ನ ಶ್ರೀ ಶಬರಿಮಲೈ ತದ್ರೂಪ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ.

    ಮಕರ ಸಂಕ್ರಾಂತಿಯಂದು ಅಸಂಖ್ಯ ಮಾಲಾಧಾರಿಗಳು ಶ್ರೀ ಕ್ಷೇತ್ರ ಶಬರಿಮಲೈಗೆ ತೆರಳಿ ಅಯ್ಯಪ್ಪಸ್ವಾಮಿಗೆ ಸೇವೆ ಸಲ್ಲಿಸುವುದು ವಾಡಿಕೆ. ಆದರೆ, ಈ ಸಲ ಕರೊನಾ ಕಾರಣಕ್ಕಾಗಿ ಅಲ್ಲಿ ಸೀಮಿತ ಭಕ್ತರಿಗೆ ಮಾತ್ರ ಷರತ್ತುಬದ್ಧ ಅವಕಾಶ ನೀಡಲಾಗಿದೆ. ಅಲ್ಲಿಗೆ ಹೋಗಲು ಸಾಧ್ಯವಾಗದ ಮಾಲಾಧಾರಿಗಳ ಅನುಕೂಲಕ್ಕಾಗಿ, ಅಲ್ಲಿ ನಡೆಯುವಂಥದ್ದೇ ಸೇವೆಗಳನ್ನು ಶಿರೂರ ಪಾರ್ಕ್​ನ ಶಬರಿಮಲೈ ತದ್ರೂಪ ಮಂದಿರದಲ್ಲಿ ಸಲ್ಲಿಸಲು ಶ್ರೀ ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ವ್ಯವಸ್ಥೆ ಮಾಡಿತ್ತು.

    ಅಂತೆಯೇ ಬೆಂಗಳೂರು, ಮಂಗಳೂರು, ಬೆಳಗಾವಿ, ರಾಯಚೂರು, ಕಲಬುರಗಿ, ವಿಜಯಪುರ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಮೈಸೂರು ಸೇರಿ ರಾಜ್ಯದ ವಿವಿಧೆಡೆ ಹಾಗೂ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯದ ಭಕ್ತರೂ ಮಂದಿರಕ್ಕೆ ಆಗಮಿಸಿದ್ದರು.

    ಬೆಳಗ್ಗೆಯಿಂದಲೇ…

    ಗುರುವಾರ ಬೆಳಗ್ಗೆ 5.30ರಿಂದಲೇ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಪ್ರಾರಂಭಿಸಿದರು. ದೇವಸ್ಥಾನದ ಆವರಣದಲ್ಲಿಯೇ ಇರುಮುಡಿ ಕಟ್ಟಿಕೊಂಡು 18 ಮೆಟ್ಟಿಲು ಏರಿದರು. ‘ಸ್ವಾಮಿಯೇ ಶರಣಂ ಅಯ್ಯಪ್ಪ…’ ಭಕ್ತಿಪೂರ್ವಕ ಘೊಷಣೆಗಳು ಸಹಸ್ರಾರು ಭಕ್ತರಿಂದ ದೇವಸ್ಥಾನದ ಆವರಣದಲ್ಲಿ ಕೇಳಿಬಂದವು.

    ದೇವಾಲಯ ಆವರಣದ ಶ್ರೀ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಮಾಳಿಗೆ ಪುರದಮ್ಮ ದೇವಿಗೆ ತೆಂಗಿನಕಾಯಿ ಉರುಳಿಸಿದರು.

    ಆನಂದ ಗುರುಸ್ವಾಮಿ ಅವರ ಮಾರ್ಗದರ್ಶನದಲ್ಲಿ ಧಾರ್ವಿುಕ ಕಾರ್ಯಕ್ರಮ ನೆರವೇರಿದವು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಉಪಾಹಾರ, ಭೋಜನದ ವ್ಯವಸ್ಥೆಯನ್ನು ಶ್ರೀ ಅಯ್ಯಪ್ಪ ಭಕ್ತವೃಂದ ಟ್ರಸ್ಟ್ ವತಿಯಿಂದ ಮಾಡಲಾಗಿತ್ತು.

    ಕೋವಿಡ್ ನಿಯಮ ಪಾಲನೆ: ಶಿರೂರ ಪಾರ್ಕ್​ನ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸುವ ಪ್ರತಿಯೊಬ್ಬ ಮಾಲಾಧಾರಿಗಳ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಲಾಯಿತು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಕೆಲವರಿಗೆ ದೇವಸ್ಥಾನದ ವತಿಯಿಂದಲೇ ಮಾಸ್ಕ್ ನೀಡಲಾಯಿತು. ಪೂಜೆ ಸಮಯದಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಮೇಲಿಂದ ಮೇಲೆ ಸೂಚಿಸಲಾಗುತ್ತಿತ್ತು.

    ಗಣ್ಯರ ಭೇಟಿ: ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರು ಶಿರೂರ ಪಾರ್ಕ್​ನ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದರು. ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ, ಉದ್ಯಮಿ ಪ್ರದೀಪ ಶೆಟ್ಟಿ , ಇತರರು ಕೂಡ ದೇವರ ದರ್ಶನ ಪಡೆದರು.

    ಆರ್​ಎಸ್​ಎಸ್ ಸ್ವಯಂಸೇವಕರ ಸೇವೆ

    ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಿರ್ವಹಿಸಿದ ಕಾರ್ಯ ಮೆಚ್ಚುಗೆಗೆ ಪಾತ್ರವಾಯಿತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘದ ಕಾರ್ಯಕರ್ತರು, ದೇವಸ್ಥಾನದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಶಿಸ್ತು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದರು. ವಿವಿಧೆಡೆಯಿಂದ ಆಗಮಿಸಿದ ಭಕ್ತರು ನಿಗದಿತ ಮಾರ್ಗದಲ್ಲಿ ತೆರಳಲು, ವಾಹನಗಳ ನಿಲುಗಡೆಗೆ, ಸ್ವಚ್ಛತೆ ಕಾಪಾಡಿಕೊಳ್ಳುವ ಬಗೆಗೆ ಸಂಘದ ಕಾರ್ಯಕರ್ತರು ವಿನಯದಿಂದ ಸೂಚಿಸುತ್ತಿದ್ದರು.

    ಪೊಲೀಸ್ ಬಂದೋಬಸ್ತ್

    ಶಿರೂರ ಪಾರ್ಕ್ ಮಂದಿರಕ್ಕೆ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ ಅವರು ಮುಂಚಿತವಾಗಿಯೇ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಬೆಳಗ್ಗೆಯಿಂದಲೇ ವಿದ್ಯಾನಗರ ಠಾಣೆ ಮತ್ತು ಸಂಚಾರ ಠಾಣೆ ಪೊಲೀಸರು ಸ್ಥಳದಲ್ಲಿದ್ದು ಕಾರ್ಯ ನಿರ್ವಹಿಸಿದರು.

    ಬೃಹತ್ ಪರದೆ ಮೇಲೆ ಜ್ಯೋತಿ ದರ್ಶನ

    ಮಕರ ಸಂಕ್ರಾಂತಿಯಂದು ಸಂಜೆ ಬಾನಂಗಳದಿಂದ ಸೂರ್ಯ ಮಾಯವಾಗುತ್ತಿದ್ದಂತೆ ಶಬರಿಮಲೈಯ ಬೆಟ್ಟದಲ್ಲಿ ಮಕರಜ್ಯೋತಿಯ ದರ್ಶನ. ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದ ದೊಡ್ಡ ಪರದೆಗಳ ಮೇಲೆ ಕಂಡ ಜ್ಯೋತಿಯನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಜಯಘೋಷ ಮೊಳಗಿಸಿದರು. ಸಂಜೆ 6.42ಕ್ಕೆ ಜ್ಯೋತಿ ದರ್ಶನವಾಯಿತು. ದೇವಸ್ಥಾನದಲ್ಲಿ ಸೇರಿದ್ದ ನೂರಾರು ಮಹಿಳೆಯರು ದೀಪ ಹಚ್ಚಿ ಅಯ್ಯಪ್ಪಸ್ವಾಮಿಗೆ ಆರತಿ ಬೆಳಗಿದರು. ಮಾಲಾಧಾರಿ ಭಕ್ತರು ಸಾಮೂಹಿಕವಾಗಿ ಭಜನೆ ಮಾಡುತ್ತ ವಿವಿಧ ಹಾಡುಗಳನ್ನು ಹಾಡಿ ಅನ್ನದಾನ ಪ್ರಭುವಿಗೆ ನಮಿಸಿದರು.

    ಮಹಾಪೂಜೆ: ಸಂಜೆ 4 ಗಂಟೆಗೆ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಆರಂಭವಾಯಿತು. 18 ಮೆಟ್ಟಿಲುಗಳನ್ನು ದೀಪ ಹಾಗೂ ಹೂಗಳಿಂದ ಶೃಂಗರಿಸಲಾಗಿತ್ತು. ಜ್ಯೋತಿ ವೀಕ್ಷಣೆ ನಂತರ ಅರ್ಚಕರು, ಮಾಲಾಧಾರಿಗಳು ಪಡಿಪೂಜೆ ಕೈಗೊಂಡರು. ಮಕರ ಸಂಕ್ರಾಂತಿ ದಿನದ 18 ಮೆಟ್ಟಿಲ ಪಡಿಪೂಜೆ ಹಾಗೂ ಮಹಾಪೂಜೆಗಳನ್ನು ಪ್ರಸಾದ ಶೆಟ್ಟಿ ಹಾಗೂ ಪ್ರಶಾಂತ ಶೆಟ್ಟಿ ಕುಟುಂಬದವರು ನೆರವೇರಿಸಿದರು. ಗಣಪತಿ, ಸುಬ್ರಹ್ಮಣ್ಯ ಪೂಜೆ, ಅಯ್ಯಪ್ಪ ಜನನ ಪೂಜೆ, ಪಂಚರತ್ನ, ಅಭಿಷೇಕ ಪೂಜೆಗಳು ಸಾಂಗವಾಗಿ ಜರುಗಿದವು. ಸಂಜೆ 7.15ಕ್ಕೆ ಆರಂಭವಾದ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

    ಕೋವಿಡ್​ನಿಂದಾಗಿ ಈ ಬಾರಿ ಶಬರಿಮಲೈಗೆ ತೆರಳಲು ಆಗಲಿಲ್ಲ. ಆದರೆ, ಹುಬ್ಬಳ್ಳಿಯ ಶಿರೂರ ಪಾರ್ಕ್​ನ ಅಯ್ಯಪ್ಪ ದೇವಸ್ಥಾನವು ಶಬರಿಮಲೈನ ತದ್ರೂಪದಂತಿದೆ. ಹಿಂದೆಯೂ ಈ ದೇವಸ್ಥಾನಕ್ಕೆ ಬಂದಿದ್ದೆ. ಈಗ ಮತ್ತೆ ಮಕರ ಜ್ಯೋತಿ ದರ್ಶನಕ್ಕಾಗಿ ಇಲ್ಲಿಗೆ ಬಂದಿದ್ದೇನೆ.
    | ಶಿವಾನಂದ ಖಂಡಿ, ಬೈಲಹೊಂಗಲದ ಅಯ್ಯಪ್ಪ ಭಕ್ತ

    ಶಬರಿಮಲೈನಲ್ಲಿ ನಡೆಸುವ ಎಲ್ಲ ಧಾರ್ವಿುಕ ಕಾರ್ಯಕ್ರಮಗಳನ್ನು ಹುಬ್ಬಳ್ಳಿ ಶಿರೂರ ಪಾರ್ಕ್​ನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿಯೂ ನಡೆಸಲಾಗುತ್ತಿದೆ. ಮೇಲಾಗಿ ಈ ದೇವಸ್ಥಾನ ಶಬರಿಮಲೈ ದೇವಸ್ಥಾನದ ತದ್ರೂಪವಾಗಿರುವುದರಿಂದ ರಾಜ್ಯ- ಹೊರ ರಾಜ್ಯಗಳ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
    | ವಿನಯ ಹುಲ್ಲೂರ, ಅಯ್ಯಪ್ಪ ಭಕ್ತ

    ಕೋವಿಡ್ ಹಿನ್ನೆಲೆಯಲ್ಲಿ ಶಬರಿಮಲೈ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಹೆಚ್ಚಿನ ಭಕ್ತರಿಗೆ ಅವಕಾಶ ಇರಲಿಲ್ಲ, ಹಾಗಾಗಿ ಹುಬ್ಬಳ್ಳಿಯ ತದ್ರೂಪ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ವಿವಿಧೆಡೆಯಿಂದ ಭಕ್ತರು ಬಂದಿದ್ದಾರೆ. ಇಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಲಾಗಿದೆ. ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಲಾಧಾರಿಗಳಲ್ಲದೆ, ಸಾವಿರಾರು ಭಕ್ತರು ಮಕರ ಸಂಕ್ರಮಣದಂದು ಶ್ರೀ ಅಯ್ಯಪ್ಪಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು.
    | ಡಾ. ವಿ.ಎಸ್.ವಿ. ಪ್ರಸಾದ, ಶ್ರೀ ಅಯ್ಯಪ್ಪ ಭಕ್ತ ವೃಂದ ಟ್ರಸ್ಟ್ ಉಪಾಧ್ಯಕ್ಷರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts