More

    ಗೆಜ್ಜೆಗಿರಿ ಆಡಳಿತ ಸಮಿತಿಗೆ ಭಕ್ತರ ಬೆಂಬಲ

    ಮಂಗಳೂರು: ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತ್‌ಲ್ ದೇಯಿ ಬೈದೆತಿ ಕೋಟಿ-ಚೆನ್ನಯ ಮೂಲಸ್ಥಾನದ ಜೀರ್ಣೋದ್ಧಾರ ನೆರವೇರಿಸಿದ ಆಡಳಿತ ಸಮಿತಿಯನ್ನೇ ಕ್ಷೇತ್ರಕ್ಕೆ ಬರದಂತೆ ತಡೆಯಲು ಮುಂದಾಗಿರುವುದಕ್ಕೆ ಭಕ್ತವರ್ಗ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
    ಕ್ಷೇತ್ರದ ಜಾಗ ನನ್ನ ಹೆಸರಿನಲ್ಲಿದ್ದು, ಆಡಳಿತ ಸಮಿತಿಯನ್ನು ಪ್ರತಿಬಂಧಿಸಬೇಕೆಂದು ಕೋರಿ ಕ್ಷೇತ್ರದ ಯಜಮಾನರೂ ಆಗಿರುವ ಶ್ರೀಧರ ಪೂಜಾರಿ ಪುತ್ತೂರು ನ್ಯಾಯಾಲಯದಲ್ಲಿ ದಾವೆ ಹೂಡಿರುವ ಹಿನ್ನೆಲೆಯಲ್ಲಿ ಭಕ್ತರು ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಕ್ಷೇತ್ರದಲ್ಲಿ ಬುಧವಾರ ಸಭೆ ನಡೆಸಿದರು.

    ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ(ರಿ) ಸಮಸ್ತ ಬಿಲ್ಲವರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಈ ಸಮಿತಿಯ ಮೂಲಕ ವಿಶ್ವದ ಎಲ್ಲ ಕಡೆಯ ಬಿಲ್ಲವರು ಹಾಗೂ ದಾನಿಗಳು ಸೇರಿ ಗೆಜ್ಜೆಗಿರಿ ಜೀರ್ಣೋದ್ಧಾರ ಕೈಂಕರ್ಯವನ್ನು ನಡೆಸಿದ್ದಾರೆ. ಇಂಥ ಕ್ಷೇತ್ರದ ಹುಂಡಿಯ ಹಣವನ್ನು ಶ್ರೀಧರ ಪೂಜಾರಿ ಸ್ವಾರ್ಥಕ್ಕೆ ಬಳಸಿರುವುದನ್ನು ಆಕ್ಷೇಪಿಸಿ ಆಡಳಿತಾತ್ಮಕ ಕ್ರಮ ಕೈಗೊಳ್ಳಲಾಗಿದೆಯೇ ಹೊರತು ದಬ್ಬಾಳಿಕೆ ನಡೆಸಿಲ್ಲ. ಕ್ಷೇತ್ರ ನಿರ್ಮಾಣಗೊಂಡಿರುವ ಜಾಗವನ್ನು ಬ್ರಹ್ಮಕಲಶೋತ್ಸವ ಬಳಿಕ ಹಸ್ತಾಂತರ ಮಾಡುವ ಕುರಿತು ಶ್ರೀಧರ ಪೂಜಾರಿ ಕರಾರು ಪತ್ರಕ್ಕೆ ಸಹಿ ಮಾಡಿದ್ದು, ಸಾರ್ವಜನಿಕವಾಗಿಯೂ ತಿಳಿಸಿದ್ದಾರೆ. ಆದರೆ ನಂತರ ಹಸ್ತಾಂತರಿಸದೆ ಗೊಂದಲ ಸೃಷ್ಟಿಸಿದ್ದಾರೆ. ಈಗ ಆಡಳಿತ ಸಮಿತಿಗೆ ನಿರ್ಬಂಧ ಕೋರಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಹೀಗಾಗಿ ಕ್ಷೇತ್ರದ ಪಾವಿತ್ರೃತೆ ಉಳಿಸಿ ಭಕ್ತರ ಭಾವನೆಗೆ ಆಡಳಿತ ಸಮಿತಿ ಸ್ಪಂದಿಸಬೇಕಿದ್ದು, ಸಮಾಜ ಒಗ್ಗಟ್ಟಿನಿಂದ ಬೆಂಬಲಿಸಲು ಸಭೆ ನಿರ್ಧರಿಸಿತು.

    ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್, ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಆಡಳಿತ ಮೊಕ್ತೇಸರ ದಿನೇಶ್ ಅಂಚನ್, ಬಿಲ್ಲವ ಸಂಘದ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಕಾರ್ಪೊರೇಟರ್‌ಗಳಾದ ಅನಿಲ್ ಪಂಜಿಮುಗೇರು ಮತ್ತು ಸಂದೀಪ್ ಗರೋಡಿ, ಪ್ರಮುಖರಾದ ಸುನೀಲ್ ಕುಮಾರ್ ಬಜಾಲ್, ಹರೀಶ್ ಕೆ.ಪೂಜಾರಿ, ರಾಜೇಂದ್ರ ಚಿಲಿಂಬಿ, ರವೀಂದ್ರ ಬಂಗೇರ, ಪ್ರಕಾಶ್ ಪೂಜಾರಿ ಕಟಪಾಡಿ ಮೊದಲಾದವರು ಉಪಸ್ಥಿತರಿದ್ದರು.

    ಭಕ್ತರ ಭಾವನೆಗೆ ಸ್ಪಂದನೆ: ಕ್ಷೇತ್ರದ ನಿರ್ಮಾಣ ಕಾರ್ಯದಲ್ಲಿ ಲಕ್ಷಾಂತರ ಮಂದಿ ಕೈಜೋಡಿಸಿದ್ದಾರೆ. ಸಮಸ್ತ ಬಿಲ್ಲವ ಸಮಾಜ ಮತ್ತು ಭಕ್ತರ ಬೆಂಬಲ ನಮಗಿದೆ. ಭಕ್ತರ ಭಾವನೆಗಳಿಗೆ ಧಕ್ಕೆಯಾದಾಗ ಸ್ಪಂದಿಸುವುದು ನಮ್ಮ ಕರ್ತವ್ಯ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಕಾನೂನು ಹೋರಾಟ ಮಾಡುತ್ತೇವೆ ಎಂದು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts