More

    ಅಭಿವೃದ್ಧಿ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ

    ಚಳ್ಳಕೆರೆ: ವಿಸ್ತಾರವಾಗಿ ಬೆಳೆಯುತ್ತಿರುವ ನಗರದಲ್ಲಿ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದೆ ಎಂದು ಪೌರಾಯುಕ್ತ ಸಿ.ಚಂದ್ರಪ್ಪ ಹೇಳಿದರು.

    ನಗರಸಭೆಯಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಪ್ರತಿಭಾಗದಲ್ಲೂ ಅಗತ್ಯ ಇರುವ ಸೌಕರ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಸಂಪೂರ್ಣ ಮಾಹಿತಿ ಇರುತ್ತದೆ. ಸಭೆಯಲ್ಲಿ ಪ್ರಸ್ತಾಪ ಸಲ್ಲಿಸುವ ಸೌಕರ್ಯಗಳ ಬಗ್ಗೆ ಹಣಕಾಸಿನ ಇತಿಮಿತಿಯೊಳಗೆ ಸೌಲಭ್ಯ ಕಲ್ಪಿಸಲು ಸಂಪೂರ್ಣ ಪ್ರಯತ್ನ ಮಾಡಲಾಗುವುದು ಎಂದರು.

    ಸಾರ್ವಜನಿಕರ ಬೇಡಿಕೆಯಂತೆ ಎರಡು ಶೌಚಗೃಹ ನಿರ್ಮಿಸಲಾಗುವುದು. ನಗರೋತ್ಥಾನ 4 ನೇ ಅನುದಾನ ಮತ್ತು 15 ನೇ ಹಣಕಾಸು ಯೋಜನೆಯಡಿ ಅಗತ್ಯ ಇರುವ ವಾರ್ಡ್‌ಗಳಲ್ಲಿ ರಸ್ತೆ, ಚರಂಡಿ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು. ಸಿಎಂ, ಡಿಸಿಎಂ ಸೂಚನೆಯಂತೆ ಶುದ್ಧ ಕುಡಿವ ನೀರಿನ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

    ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಹಿರಿಯ ಮುಖಂಡ ಟಿ. ಪ್ರಭುದೇವ್ ಮಾತನಾಡಿ, ರಸ್ತೆ ಮತ್ತು ರಾಜಕಾಲುವೆಗಳ ಅಕ್ರಮ ತೆರವು ಕಾರ್ಯ ಮಾಡಬೇಕು. ಬೆಂಗಳೂರು ರಸ್ತೆಯಲ್ಲಿನ ಕುಡಿವ ನೀರಿನ ಪೈಪ್‌ಗಳು ಹಾಳಾಗಿರುವುದನ್ನು ಸರಿಪಡಿಸಬೇಕು. ಚರಂಡಿ, ರಸ್ತೆ, ಪಾರ್ಕ್ ಅಭಿವೃದ್ಧಿ ಮತ್ತು ನಗರದಲ್ಲಿ ಉತ್ತಮ ಆರೋಗ್ಯಕ್ಕಾಗಿ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿದರು.

    ಸಾಮಾಜಿಕ ಹೋರಾಟಗಾರ ಎಚ್.ಎಸ್.ಸೈಯದ್ ಮಾತನಾಡಿ, ನಗರದಲ್ಲಿ ವಾಹನಗಳ ದಟ್ಟಣೆಯಿಂದ ರಸ್ತೆಗಳಲ್ಲಿ ಪಾದಚಾರಿಗಳ ಓಡಾಟಕ್ಕೂ ಅಪಾಯವಿದೆ. ಸಂಚಾರ ರಕ್ಷಣೆ ಕಾಪಾಡಿಕೊಳ್ಳಬೇಕು. ಕೋರ್ಟ್‌ನಲ್ಲಿರುವ ಕೇಸ್ ಇತ್ಯರ್ಥ ಪಡಿಸಿಕೊಂಡು ಬಳ್ಳಾರಿ-ಬೆಂಗಳೂರು ರಸ್ತೆ ಮಾರ್ಗ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು ಎಂದರು.

    ಖಾಸಗಿ ಬಸ್ ನಿಲ್ದಾಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ನಗರದಲ್ಲಿನ ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು.

    ಪುರಸಭಾ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಗೊಂದಲದಿಂದಾಗಿ ಕಳೆದ 8 ತಿಂಗಳಿಂದ ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲ. ಅಭಿವೃದ್ಧಿ ಕಾರ್ಯ ಮತ್ತು ಸಾರ್ವಜನಿಕರ ಸಮಸ್ಯೆಗಳ ದೃಷ್ಟಿಯಿಂದ ಜಿಲ್ಲಾಧಿಕಾರಿಗಳಾದರೂ ಸಭೆ ನಡೆಸಬೇಕಿತ್ತು. ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳಿಂದಲೂ ಸಾರ್ವಜನಿಕರಿಗೆ ನ್ಯಾಯ ದೊರೆಯುತ್ತಿಲ್ಲ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದರು.

    ಸಭೆಯಲ್ಲಿ ನಗರಸಭಾ ಸದಸ್ಯೆ ಆರ್.ಮಂಜುಳಾ, ಟಿ.ಮಲ್ಲಿಕಾರ್ಜುನ, ಶಿವಕುಮಾರ್, ನಾಗಮಣಿ, ತಿಪ್ಪಮ್ಮ, ವಕೀಲ ಪಾಪಣ್ಣ, ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts