More

    ಪ್ರವಾಸಿ, ಧಾರ್ಮಿಕ ಕೇಂದ್ರವಾಗಿ ಮೈಸೂರು ಅಭಿವೃದ್ಧಿ: ಯಧುವೀರ್

    ಮೈಸೂರು: ಮುಂದಿನ ನೂರು ವರ್ಷಗಳ ದೂರದೃಷ್ಟಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸಬೇಕಿದ್ದು, ಮೈಸೂರನ್ನು ಪ್ರವಾಸಿ ಮತ್ತು ಧಾರ್ಮಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಕೆಲಸ ಮಾಡಲಾಗುವುದು ಎಂದು ಬಿಜೆಪಿ ಘೋಷಿತ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
    ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್ ಪ್ರಮುಖರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಸುಧಾರಣೆಗಳಾಗಿವೆ. ಮೈಸೂರು ಮಹಾಸಂಸ್ಥಾನದ ಆಡಳಿತ ಇದ್ದಾಗ ಹಲವು ಯೋಜನೆಗಳನ್ನು ನೀಡಲಾಗಿದೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 100 ವರ್ಷಗಳ ದೂರದೃಷ್ಟಿ ಯೋಜನೆ ರೂಪಿಸಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಕೋರಿದರು.
    ಸ್ವಚ್ಛ ಭಾರತ ಜತೆಗೆ ಶ್ರೇಷ್ಠ ಭಾರತವಾಗಬೇಕು. ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಬದಲಾವಣೆ ಆಗಬೇಕು. ಈ ನಿಟ್ಟಿನಲ್ಲಿ ಮೈಸೂರಿನ ಅಭಿವೃದ್ಧಿಗೆ ಗಮನ ನೀಡಲಾಗುವುದು. ಬಿಜೆಪಿ ಹೈಕಮಾಂಡ್ ಜನಸೇವೆ ಮಾಡಲು ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಜೆಡಿಎಸ್ ನಾಯಕರು ತಮ್ಮೊಂದಿಗೆ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
    ಬಿಜೆಪಿ ಬೆಂಬಲಿಸಿ ಮತಚಲಾವಣೆ
    ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮೈತ್ರಿ ಅಭ್ಯರ್ಥಿ ಆಗಿರುವ ಕಾರಣ ನಾವು ನಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಕಳೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಬೆನ್ನಿಗೆ ಚೂರಿ ಹಾಕಿದ್ದರಿಂದ ಬಿಜೆಪಿಗೆ ಮತ ನೀಡಿದರು. ಮಂಡ್ಯದಲ್ಲಿ ಮಾಡಿದ ಕೆಲಸ ಮೈಸೂರು ಕ್ಷೇತ್ರದಲ್ಲಿ ನಡೆಯಲಿದೆ ಎನ್ನುವ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ದರೂ ಪರಿಗಣಿಸದ ಕಾರಣ ಮತದಾನದ ದಿನದಂದು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿ ಮತಚಲಾವಣೆ ಮಾಡಿದರು ಎಂದು ಹೇಳಿದರು.
    ನರೇಂದ್ರ ಮೋದಿ, ಎಚ್.ಡಿ.ದೇವೇಗೌಡ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರು ರಾಜ್ಯಕ್ಕೆ ಕೊಡುಗೆ ಕೊಟ್ಟವರಿಗೆ ಕೊಡುಗೆ ನೀಡಬೇಕೆಂಬ ಕಾರಣಕ್ಕಾಗಿ ಯದುವೀರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಯದುವೀರ್ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹಾಕುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಅಭ್ಯರ್ಥಿ ಹಾಕುತ್ತಿದ್ದಾರೆ. ನಾವು ಯದುವೀರ್ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಒಂದು ಲಕ್ಷ ಕೋಟಿ ರೂ. ಸಾಲ ಮಾಡಿ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ 1ಲಕ್ಷ ರೂ. ಸಾಲದ ಹೊರೆ ಬರುವಂತೆ ಮಾಡಿದ್ದಾರೆ. ಆದರೆ ತಮ್ಮ ಮನೆಯ ಬಂಗಾರ ಮಾರಾಟ ಮಾಡಿ ಡ್ಯಾಂ ಕಟ್ಟಿಸಿದವರು ರಾಜಮನೆತನದವರು. ಮತದಾರರು ಈ ವ್ಯತ್ಯಾಸ ಅರಿಯಬೇಕು ಎಂದರು.
    ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಮೈಸೂರಿಗೆ ರಾಜಮನೆತನದ ಕೊಡುಗೆ ಅಪಾರ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯದುವೀರ್ ಅವರನ್ನು ಗೆಲ್ಲಿಸಬೇಕಿದೆ. ಹೊಸ ತಲೆಮಾರಿನವರು ರಾಜಕಾರಣಕ್ಕೆ ಬಂದಿದ್ದಾರೆ. ನಾವು ರಾಜಮನೆತನದ ಅಭ್ಯರ್ಥಿ ಎನ್ನುವುದನ್ನು ನೋಡುವ ಜತೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ನರೇಂದ್ರ ಮೋದಿ ಅವರನ್ನು ಮತ್ತೊಂದು ಅವಧಿಗೆ ಪ್ರಧಾನಿ ಮಾಡಬೇಕಿದೆ ಎಂದರು.ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಮಾಜಿ ಅಧ್ಯಕ್ಷ ಕೆ.ವಿವೇಕಾನಂದ, ನಗರಪಾಲಿಕೆ ಮಾಜಿ ಸದಸ್ಯೆ ಅಶ್ವಿನಿ ಅನಂತು, ಜಿಪಂ ಮಾಜಿ ಸದಸ್ಯ ಸಿ.ಜೆ.ದ್ವಾರಕೀಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts