More

    ಕರೊನಾ ನಡುವೆಯೂ ಸಂಕ್ರಾಂತಿ ಸಡಗರ

    ಶಿರಸಿ: ಸೂರ್ಯನ ಚಲನೆ ಮತ್ತು ಪ್ರಕೃತಿಯಲ್ಲಿ ಬದಲಾವಣೆಯ ಪರ್ವ ಕಾಲವಾದ ಮಕರ ಸಂಕ್ರಾಂತಿ ದಿನದ ಆಚರಣೆಯು ಕರೊನಾ ನಡುವೆಯೂ ಶ್ರದ್ಧೆ-ಭಕ್ತಿಯ ನಡುವೆ ಶುಕ್ರವಾರ ಎಲ್ಲೆಡೆ ನಡೆಯಿತು. ಮಕ್ಕಳು ಸೇರಿದಂತೆ ಅನೇಕರು ಎಳ್ಳು- ಬೆಲ್ಲ ಮತ್ತು ಸಂಕ್ರಾಂತಿ ಕಾಳು ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

    ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಲವರು ತಾಲೂಕಿನ ವಿವಿಧ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಸೇವೆ ಸಲ್ಲಿಸಿದರು. ಮಾರಿಕಾಂಬಾ ದೇವಸ್ಥಾನ, ಶಿಗೇಹಳ್ಳಿ ಚನ್ನಕೇಶವ ದೇವಾಲಯ, ಬೋರ್ನಗುಡ್ಡ ಸೇರಿದಂತೆ ನಾನಾ ಕಡೆಗಳ ದೇವಸ್ಥಾನಗಳಲ್ಲಿ ಭಕ್ತಿ ಸಡಗರದ ವಾತಾವರಣ ನಿರ್ವಣವಾಗಿತ್ತು.

    ಪುಣ್ಯಸ್ನಾನ ಮಾಡಿದ ಭಕ್ತರು: ಇದೇ ಸಂದರ್ಭದಲ್ಲಿ ಅನೇಕರು ನಾನಾ ಕಡೆಗಳ ಪ್ರವಾಸಿ ತಾಣಗಳಿಗೆ ತೆರಳಿ ಖುಷಿ ಅನುಭವಿಸಿದರು. ಯಾಣ, ಶಿವಗಂಗಾ ಜಲಪಾತ, ಮುರೇಗಾರ ಜಲಪಾತ, ಪಾಂಡವರಹೊಳೆ, ಬನವಾಸಿ ದೇವಾಲಯ, ಗುಡ್ನಾಪುರ ಕೆರೆ ಸೇರಿದಂತೆ ವಿವಿಧೆಡೆ ಪ್ರವಾಸಿಗರು ಸೇರಿದ್ದರು. ಕೆಲವೆಡೆ ಕೆಲವರು ನೀರಿಗೆ ಇಳಿದು ಸ್ನಾನ ಮಾಡಿದರು. ಈ ಭಾಗದಲ್ಲಿ ಅಪರೂಪದ್ದಾದ ಶ್ರೀ ಸೂರ್ಯನಾರಾಯಣ ದೇವಸ್ಥಾನವು ಶಿರಸಿ- ಹುಬ್ಬಳ್ಳಿ ಮಾರ್ಗದ ಪಕ್ಕದ ಬಿಸಲಕೊಪ್ಪ ಗ್ರಾಮದಲ್ಲಿ ಇದೆ. ಅಲ್ಲಿ ಮಕರ ಸಂಕ್ರಮಣ ಪ್ರಯುಕ್ತ ವಿಶೇಷ ಧಾರ್ವಿುಕ ಕಾರ್ಯ ನಡೆಯಿತು. ಸೂರ್ಯನಿಗೆ ಪ್ರಿಯವಾದ ಮಕರ ಸಂಕ್ರಮಣದ ಸಂದರ್ಭದಲ್ಲಿ ಸೂರ್ಯ ದೇವರ ಜಪ ಹಮ್ಮಿಕೊಳ್ಳಲಾಗಿತ್ತು.

    ಸಹಸ್ರಲಿಂಗಕ್ಕೆ ನಿರ್ಬಂಧ: ಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯ ಕ್ಷೇತ್ರ ಸಹಸ್ರಲಿಂಗಕ್ಕೆ ಮಕರ ಸಂಕ್ರಾಂತಿಗೆ ಸ್ಥಳೀಯ ಗ್ರಾಪಂ ಭಕ್ತಾದಿಗಳು, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದ ಕಾರಣ ಸಹಸ್ರಲಿಂಗ ಬಿಕೋ ಎನ್ನುತ್ತಿತ್ತು. ಕ್ಷೇತ್ರಕ್ಕೆ ತೆರಳುವ ರಸ್ತೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts