ಬಾಳೆಹೊನ್ನೂರು: ನಮ್ಮ ನಿತ್ಯ ದುಡಿಮೆಯ ಒಂದು ಭಾಗವನ್ನು ಭಗವಂತನಿಗೆ ಮೀಸಲಿಟ್ಟು ಆತನ ಸೇವೆ ಮಾಡಿದರೆ ಜೀವನದಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಸಮೀಪದ ಖಾಂಡ್ಯ ಮಾರ್ಕಾಂಡೇಶ್ವರ ದೇಗುಲಕ್ಕೆ ಒಳಪಟ್ಟ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ ಲೋಕಾರ್ಪಣೆ, ಮರುಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರತಿ ಊರಿನಲ್ಲಿ ಇರುವ ದೇವಾಲಯಗಳು ಸುಂದರ ಪ್ರಶಾಂತವಾಗಿ ಇರಬೇಕು. ಭಕ್ತಿ, ಶ್ರದ್ಧೆ ಮೂಡಿಸುವಂತಿರಬೇಕು. ಆಗ ನಮ್ಮ ಜೀವನ ಸುಂದರವಾಗಿರಲಿದೆ. ಇಂದು ಜೀವನದಲ್ಲಿ ಕೇವಲ ಬ್ರಹ್ಮ ಸತ್ಯ, ಜಗತ್ತು ಮಿಥ್ಯವಾಗಿದೆ. ನಮ್ಮ ಸುತ್ತಮುತ್ತಲಿನ ಎಲ್ಲವೂ ಒಂದಲ್ಲಾ ಒಂದುದಿನ ಅಳಿದು ಹೋಗಲಿದೆ. ಭಗವಂತ ಮಾತ್ರ ಶಾಶ್ವತವಾಗಿ ಇರಲಿದ್ದಾನೆ. ಇದನ್ನು ನಾವು ಅರಿಯಬೇಕು ಎಂದರು.
ಜೀವನದಲ್ಲಿ ದಾನ ನೀಡಿದರೆ ಅತ್ಯಂತ ಪುಣ್ಯ ಲಭಿಸುತ್ತದೆ. ದಾನಗಳನ್ನು ನೀಡಿದರೆ ನಮ್ಮ ಕೈಗೆ ಅದೇ ಶೋಭೆಯಾಗಲಿದೆ. ಈ ನಿಟ್ಟಿನಲ್ಲಿ ಖಾಂಡ್ಯ ಸುತ್ತಮುತ್ತಲಿನ ಭಕ್ತರು ತಮ್ಮ ಕೈಲಾದಷ್ಟು ಧನ ಸಹಾಯ ನೀಡುವ ಮೂಲಕ ಖಾಂಡ್ಯ ಕ್ಷೇತ್ರದ ಸಂಪೂರ್ಣ ಜೀರ್ಣೋದ್ಧಾರಕ್ಕೆ ಶ್ರಮವಹಿಸಿರುವುದು ಶ್ಲಾಘನೀಯ. ಖಾಂಡ್ಯ ಕ್ಷೇತ್ರ ಅತ್ಯಂತ ಪಾವಿತ್ರವಾದುದು. ಇಲ್ಲಿ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಿದರು.
ರೈತರು ಸಹ ಭಗವಂತನಿಗೆ ನೈವೇದ್ಯ ರೂಪದಲ್ಲಿ ಅನ್ನ ನೀಡುತ್ತಾರೆ. ಹಾಗಾಗಿ ರೈತನನ್ನು ಕಂಡರೆ ಭಗವಂತನಿಗೆ ಬಲು ಇಷ್ಟ. ರೈತರನ್ನು ಗೌರವಿಸಿದರೆ ಧರ್ಮವನ್ನು ರಕ್ಷಣೆ ಮಾಡಿದಂತಾಗುತ್ತದೆ. ಇದು ಶ್ರೇಷ್ಠದ ಕೆಲಸವೂ ಹೌದು ಎಂದರು.
ನೂತನ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ನೀಡಿದ ದಾನಿಗಳನ್ನು ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಸ್.ವಿ.ಮಂಜುನಾಥ್ ಅವರನ್ನು ಗೌರವಿಸಲಾಯಿತು. ಮರುಪ್ರತಿಷ್ಠೆ ಅಂಗವಾಗಿ ಮೂರು ದಿನಗಳ ಪರ್ಯಂತ ಬ್ರಹ್ಮ ಕುಂಬಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.
ರಾಜಕೀಯ ನುಸುಳದಿರಲಿ: ಧರ್ಮ ಉಳಿಯಲು ಹಾಗೂ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ರಾಜಕಾರಣಿಗಳ ಕೊಡುಗೆ ಅಗತ್ಯ. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಎಂದಿಗೂ ರಾಜಕಾರಣ ನುಸುಳಬಾರದು ಎಂದು ಕೆಆರ್‌ಇಡಿಎಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು. ಶೃಂಗೇರಿ ಕ್ಷೇತ್ರದಲ್ಲಿ ಧರ್ಮ ರಕ್ಷಣೆಗಾಗಿ ಶೃಂಗೇರಿ, ಹರಿಹರಪುರ, ಶಕಟಪುರ, ರಂಭಾಪುರಿ ಪೀಠ, ಬಸ್ತಿಮಠ ಸೇರಿ ವಿವಿಧ ಮಠ, ಮಂದಿರಗಳು ತಮ್ಮದೇ ಆದ ರೀತಿ ಕಾರ್ಯನಿರ್ವಹಿಸುತ್ತಿವೆ. ಅಧಿಕಾರ ದೊರೆತ ಬಳಿಕ ಕ್ಷೇತ್ರದ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ತಂದಿದ್ದೇನೆ ಎಂದು ಹೇಳಿದರು. ಅಭಿವೃದ್ಧಿಗೆ ಪೂರಕವಾಗಿ ಖಾಂಡ್ಯ ಕ್ಷೇತ್ರದ ದೇವಾಲಯ ಜೀರ್ಣೋದ್ಧಾರ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಖಾಂಡ್ಯವು ಇಂದು ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಖಾಂಡ್ಯ ಕ್ಷೇತ್ರಕ್ಕೆ ಅಗತ್ಯವಿರುವ ಅನುದಾನವನ್ನು ತಂದು ಅಭಿವೃದ್ಧಿ ಮಾಡಲು ನಾನು ಬದ್ಧ ಎಂದು ಭರವಸೆ ನೀಡಿದರು.
ದೇವಾಲಯದ ತಂತ್ರಿ ಕಮ್ಮರಡಿಯ ಲಕ್ಷ್ಮೀನಾರಾಯಣ ಸೋಮಯಾಜಿ, ದೇವಾಲಯದ ಟ್ರಸ್ಟಿ ರತ್ನಾಕರ ಬೆಳಸೆ, ಎಂ.ಜೆ.ಚಂದ್ರಶೇಖರ್, ನಾಗೇಶ್ ಬೆಳಸೆ, ಪುಷ್ಪಾ ರಾಜೇಗೌಡ, ಎಸ್.ಜೆ.ಜಯಶೀಲ್, ಗುರುಮೂರ್ತಿ ಬೆಳಸೆ, ಜಯರಾಮ್ ಇತರರಿದ್ದರು.