More

  ಸ್ವಧರ್ಮ ಪಾಲಿಸದಿದ್ದರೆ ಅಭಿವೃದ್ಧಿ ಅಸಾಧ್ಯ

  ಎನ್.ಆರ್.ಪುರ: ಅನಾದಿಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಧರ್ಮವೇ ಸನಾತನ ಧರ್ಮ. ಸಮಾಜ ಯಾವುದರ ಮೇಲೆ ಆಧಾರವಾಗಿದೆಯೋ, ಯಾವುದು ತನ್ನ ಮೇಲೆ ಧರಿಸಿದೆಯೋ ಅದೇ ಧರ್ಮವಾಗಿದೆ. ಸ್ವಧರ್ಮವನ್ನು ಪಾಲಿಸದೆ ಹೋದರೆ ಯಾವುದೇ ಶ್ರೇಯೋಭಿವೃದ್ಧಿ ಆಗುವುದಿಲ್ಲ ಎಂದು ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಹೇಳಿದರು.

  ಭಾನುವಾರ ಪಟ್ಟಣದ ಅಗ್ರಹಾರದ ಕೊಳದ ಬೀದಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ನಿರ್ಮಿಸಿದ ಗಾಯತ್ರಿ ದೇವಸ್ಥಾನದಲ್ಲಿ ಗಾಯತ್ರಿ ದೇವಿ ಪ್ರತಿಷ್ಠಾಪನೆ ಹಾಗೂ ಮಹಾಕುಂಭಾಭಿಷೇಕ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
  ಮನುಷ್ಯ ಹಾಗೂ ಭಗವಂತ ಇಬ್ಬರೂ ಕೆಲಸ ಮಾಡಬೇಕು. ಮನುಷ್ಯ ಪ್ರಯತ್ನ ಮಾಡುತ್ತಲೇ ಇರಬೇಕು. ಅವನ ಧರ್ಮ, ಕರ್ಮಗಳನ್ನು ನೋಡಿ ಭಗವಂತನೂ ಅನುಗ್ರಹಿಸುತ್ತಿರಬೇಕು. ನಾವು ಸುಖವಾಗಿರಲು ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪುಣ್ಯ ಮತ್ತು ಒಳ್ಳೆ ಕಾರ್ಯಗಳಿಂದಾಗಿ. ವೇದಗಳೇ ಧರ್ಮದ ಪ್ರಮಾಣಗಳಾಗಿವೆ. ಶಾಶ್ವತ, ಉತ್ಕೃಷ್ಟ, ವೇದಗಳಲ್ಲಿ ಪ್ರತಿಪಾದಿತವಾದ ಧರ್ಮವೇ ಸನಾತನ ಧರ್ಮ ಎಂದು ನುಡಿದರು.
  ಗಳಿಸಿದ ಸಂಪತ್ತನ್ನು ಧರ್ಮ ಕಾರ್ಯಗಳಿಗೆ, ಸಾಮಾಜಿಕ ಕಾರ್ಯಗಳಿಗೆ ವ್ಯಯಿಸಿದರೆ ಅದು ಪುಣ್ಯವಾಗುತ್ತದೆ. ನಾವು ಶರೀರವನ್ನು ಬಿಟ್ಟು ಹೋಗುವಾಗ ನಾವು ಸಂಪಾದಿಸಿದ ಸಂಪತ್ತನ್ನು ಪುಣ್ಯವಾಗಿ ಪರಿವರ್ತಿಸಿಕೊಂಡು ಹೋಗಬಹುದಾಗಿದೆ. ಇಲ್ಲವಾದಲ್ಲಿ ಏನನ್ನೂ ಕೊಂಡೊಯ್ಯಲು ಸಾಧ್ಯವೇ ಇಲ್ಲ ಎಂದರು.
  ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಸ್ವಾಮೀಜಿ ಅವರು ಶ್ರೀ ಗಾಯತ್ರಿ ದೇವಿಯನ್ನು ಪ್ರತಿಷ್ಠಾಪಿಸಿ, ಶಿಖರದ ಪ್ರತಿಷ್ಠಾ ಮಹಾಕುಂಭಾಭಿಷೇಕ ನೆರವೇರಿಸಿದರು. ಬೆಳಗ್ಗೆಯಿಂದಲೇ ಪ್ರತಿಷ್ಠಾಂಗ ಹೋಮಗಳು ನಡೆದವು.
  ಜಿಲ್ಲಾ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಅನಂತಪದ್ಮನಾಭ ಮಾತನಾಡಿ, ಜಗದ್ಗುರುಗಳ ಆಶೀರ್ವಾದಿಂದ ಎಂಟು ತಿಂಗಳುಗಳಲ್ಲಿ ಗಾಯತ್ರಿ ದೇವಸ್ಥಾನ ನಿರ್ಮಿಸಲಾಗಿದೆ. ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಎಂಎಲ್ಸಿ ಎಂ.ಶ್ರೀನಿವಾಸ್ ಅವರು ಶ್ರೀ ಭಾರತೀತೀರ್ಥ ಸಭಾ ಭವನಕ್ಕಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದರು.
  ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಎಂ.ಆರ್.ರವಿಶಂಕರ್, ಉಪಾಧ್ಯಕ್ಷ ಅನಂತಪದ್ಮನಾಭ, ಕೊನೋಡಿ ಗಣೇಶ್, ಎಸ್.ಎನ್.ಸುರೇಶ್, ಬಾಳೆಹಿತ್ಲು ನಾರಾಯಣಸ್ವಾಮಿ, ವಿ.ಎಸ್.ಕೃಷ್ಣ ಭಟ್, ಕೆ.ಆರ್.ನಾರಾಜ್ ಪುರಾಣಿಕ್, ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ಹಾಗೂ ಭಕ್ತರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts