More

    ಅಭಿವೃದ್ಧಿ ಕಾರ್ಯಕ್ಕೆ ವಿಳಂಬ ಬೇಡ

    ಹುಕ್ಕೇರಿ: ಜನಪರ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಅಧಿಕಾರಿಗಳು ಮುಂದಾದಲ್ಲಿ ಅವರನ್ನು ಬೆಂಬಲಿಸಿ ಗೌರವಿಸುತ್ತೇನೆ. ಸುಳ್ಳು ಹೇಳಿ ಕಾಲಹರಣ ಮಾಡುವಂತಹ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ನೀಡಲು ಸಹ ಹಿಂಜರಿಯುವುದಿಲ್ಲ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

    ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕಿನ ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಎಚ್ಚರಿಕೆ ನೀಡಿದರು.

    ಗ್ರಾಮಗಳ ಅಭಿವೃದ್ಧಿಯಿಂದ ನಾಡಿನ ಅಭಿವೃದ್ಧಿ ಸಾಧ್ಯ. ಇದೀಗ ಗ್ರಾಮ ಪಂಚಾಯಿತಿಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ನೋಡಲ್ ಅಧಿಕಾರಿಗಳು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಕಾಗಿರುವ ಸಮಸ್ಯೆ ಬಗೆಹರಿಸಬೇಕು. ಅಲ್ಲದೆ, ಗ್ರಾಮದ ಸರ್ವತೋಮುಖ ಬೆಳವಣಿಗೆಗೆ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು. ಪಂಚಾಯಿತಿಯಲ್ಲಿ ಬಾಕಿ ಇರುವ ತೆರಿಗೆ ವಸೂಲಿ, ಆವರ್ತ ನಿಧಿ ಸದ್ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದರು. ನರೇಗಾ ಯೋಜನೆಯಡಿ ತೋಟಪಟ್ಟಿ ನಿವಾಸಿಗಳಿಗೆ ಹಾಗೂ ಸ್ಮಶಾನಗಳಿಗೆ ತೆರಳಲು ಜನರಿಗೆ ಸಮರ್ಪಕ ರಸ್ತೆ ನಿರ್ಮಾಣ, ಹಳ್ಳ- ಕೊಳ್ಳ, ಕೆರೆ-ಕಟ್ಟೆ ಮತ್ತು ಸರ್ಕಾರಿ ನಿವೇಶನ, ಗಾಯರಾಣ ಮೊದಲಾದವುಗಳನ್ನು ಅತಿಕ್ರಮಿಸಿಕೊಂಡಿದ್ದರೆ ತಕ್ಷಣ ಸರ್ವೇ ಮಾಡಿ ತೆರವುಗೊಳಿಸಬೇಕು ಎಂದರು. ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕುಂಟು ನೆಪ ಹೇಳುತ್ತಿದ್ದರೆ, ಅಂತಹವರ ಹೆಸರು ತಿಳಿಸಿದಲ್ಲಿ ವರ್ಗಾವಣೆ ಮಾಡಿಸಿ ಕೆಲಸದಲ್ಲಿ ಆಸಕ್ತಿಯಿರುವ ಅಧಿಕಾರಿಗಳನ್ನು ಅವರ ಜಾಗಕ್ಕೆ ನೇಮಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಪ್ರತಿದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸ್ವಲ್ಪ ಸಮಯ ಮೀಸಲಿಡುವಂತೆ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

    ತಹಸೀಲ್ದಾರ್ ಅಶೋಕ ಗುರಾಣಿ, ತಾಪಂ ಇಒ ಬಿ.ಕೆ.ಲಾಳಿ, ಅಧಿಕಾರಿಗಳಾದ ಮೋಹನ ದಂಡಿನ, ಎ.ಬಿ. ಪಟ್ಟಣಶೆಟ್ಟಿ, ವೈದ್ಯ ಉದಯ ಕುಡಚಿ ಮತ್ತಿತರರಿದ್ದರು.

    ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ಧನ ಸಹಾಯ ನೀಡಲಾಗಿದೆ. ಆದರೂ, ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಾಗಿಲ್ಲ. ಈ ಬಗ್ಗೆ ಮೇಲ್ವಿಚಾರಣೆ ನಡೆಸಲು, ಗ್ರಾಮಗಳ ಅಭಿವೃದ್ಧಿ ವಿಷಯಗಳ ಚರ್ಚೆಗೆ ಕಡ್ಡಾಯವಾಗಿ ಪ್ರತಿ ಶುಕ್ರವಾರ ಸಭೆ ನಡೆಸಲಾಗುವುದು.
    | ಉಮೇಶ ಕತ್ತಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts