More

    ಮುಳಸಾವಳಗಿ ಮದ್ಯದ ಅಂಗಡಿ ಬಂದ್ ಮಾಡಿ

    ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದ ಎಂಎಸ್‌ಐಎಲ್ ಮದ್ಯದ ಅಂಗಡಿ ಪರವಾನಗಿ ರದ್ದುಪಡಿಸಿ, ಅದನ್ನು ಮುಚ್ಚುವಂತೆ ಆಗ್ರಹಿಸಿ ಮಹಿಳೆಯರು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಗ್ರಾಮದ ನೂರಾರು ಮಹಿಳೆಯರು ಪಟ್ಟಣಕ್ಕೆ ಆಗಮಿಸಿದ ಶಾಸಕರನ್ನು ಭೇಟಿಯಾಗಿ ಮದ್ಯದ ಅಂಗಡಿ ರದ್ದುಪಡಿಸಲು ಆಗ್ರಹಿಸಿದರು.

    ಯಮನವ್ವ ತಳವಾರ, ಸುಸಲವ್ವ ಬಿರಾದಾರ ಮಾತನಾಡಿ, ಗ್ರಾಮದಲ್ಲಿ ಪ್ರತಿ ಕುಟುಂಬದಲ್ಲಿ ಕುಡಿತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮಹಿಳೆಯರು ರಸ್ತೆಗಳಲ್ಲಿ ಸಂಚರಿಸುವುದೆ ಕಷ್ಟವಾಗುತ್ತಿದೆ. ಕುಡಿಯುವವರು ಓಪನ್ ಮಾಡುವುದೆ ತಡ ಮದ್ಯದ ಅಂಗಡಿಯವರು ಮನೆಗೆ ಮದ್ಯ ಪೂರೈಸುತ್ತಿದ್ದಾರೆ. ಇದು ಯುವಕರನ್ನು ಮದ್ಯದ ಕಡೆಗೆ ಸೆಳೆಯಲು ಕಾರಣವಾಗಿದೆ ಎಂದರು.

    ಹಬ್ಬದ ದಿನಗಳಲ್ಲಿ ಹೆಚ್ಚಿನ ಬೆಲೆಗೆ ಮದ್ಯ ಮಾರಾಟಕ್ಕೆ ಮುಂದಾಗುವ ಅಂಗಡಿಯಿಂದ ಬಡ ಕುಟುಂಬಗಳ ಗಂಡಸರು ತಾವು ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದು, ಮಕ್ಕಳು ಸೇರಿದಂತೆ ಕುಟುಂಬಸ್ಥರು ಕಷ್ಟದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಅಳಲು ತೋಡಿಕೊಂಡರು.

    ಕೃಷಿ ಚಟುವಟಿಕೆಗೆ ಬಳಕೆ ಮಾಡಲು ಇಟ್ಟ ಹಣವನ್ನು ಗಂಡಂದಿರು ಕುಡಿತಕ್ಕೆ ಖರ್ಚು ಮಾಡುತ್ತಿದ್ದಾರೆ. ನಾವು ಹೆಣ್ಣುಮಕ್ಕಳು ದುಡಿದದ್ದನ್ನು ಸಹ ಕಸಿದುಕೊಂಡು ಕುಡಿಯಲು ಖರ್ಚು ಮಾಡುತ್ತಿದ್ದು, ಕೂಡಲೇ ನಮ್ಮ ಕುಟುಂಬಗಳಿಗೆ ಕಂಟಕವಾದ ಸರ್ಕಾರಿ ಮದ್ಯದ ಅಂಗಡಿ ಪರವಾನಗಿ ರದ್ದುಪಡಿಸಿ ಗ್ರಾಮದಿಂದ ತೆರವುಗೊಳಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಒಂದು ವೇಳೆ ನಿಮಗೆ ಕ್ರಮ ಕೈಗೊಳ್ಳಲು ಆಗದಿದ್ದಲ್ಲಿ ನಮಗೆ ವಿಷವಾದರೂ ನೀಡಿ ಎಂದು ಗೋಗರೆದರು.

    ಶೋಭಿತಾ ನಾಯ್ಕೋಡಿ, ಪಾರ್ವತಿ ಹಿಟ್ನಳ್ಳಿ, ಸಾಬವ್ವ ಗೊಬ್ಬೂರ, ನೀಲಮ್ಮ ತಳವಾರ, ಶೋಭಾ ತಳವಾರ, ಶಾಂತಾಬಾಯಿ ಸಾಲೋಟಗಿ, ಸರೂಬಾಯಿ ದ್ಯಾಬೇರಿ, ಶಾರದಾ ಮಾದರ, ಬಾಳವ್ವ ನಾಗಠಾಣ, ದಾನಮ್ಮ ಗುಡ್ನಳ್ಳಿ, ಭೋರಮ್ಮ ರೂಗಿ, ತಿಪ್ಪವ್ವ ನಾಯ್ಕೋಡಿ, ಮಹಾದೇವಿ ತಳವಾರ, ಸತ್ಯಮ್ಮ ನಾಯ್ಕೋಡಿ, ಲಕ್ಷ್ಮ್ಮೀಬಾಯಿ ದ್ಯಾಬೇರಿ, ಮಲ್ಲಮ್ಮ ತಳವಾರ ಸೇರಿದಂತೆ ನೂರಕ್ಕೂ ಹೆಚ್ಚು ಮಹಿಳೆಯರು ಇದ್ದರು.

    ಮುಳಸಾವಳಗಿ ಗ್ರಾಮದ ಮಹಿಳೆಯರ ಸಂಕಷ್ಟಗಳ ಅರಿವು ನನಗಿದೆ. ಮದ್ಯದ ಅಂಗಡಿ ಮುಚ್ಚುವ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುವುದು.
    ಸೋಮನಗೌಡ ಪಾಟೀಲ ಸಾಸನೂರ, ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts