More

    ತಳವಾರ-ಪರಿವಾರದವರು ಏನು ಅನ್ಯಾಯ ಮಾಡಿದ್ದಾರೆ?

    ದೇವರಹಿಪ್ಪರಗಿ: ವೀರಶೈವ ಲಿಂಗಾಯತ ಹಾಗೂ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಯೊಂದಿಗೆ ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಳವಾರ ಮತ್ತು ಪರಿವಾರ ಸಮುದಾಯ ಸಜ್ಜಾಗಿದೆ.

    ಆರು ತಿಂಗಳಿನಿಂದ ಎಸ್‌ಟಿ ಮೀಸಲಿಗಾಗಿ ಹೋರಾಟ ನಡೆಸುತ್ತಿದ್ದರೂ ಕ್ಯಾರೆ ಎನ್ನದ ರಾಜ್ಯ ಸರ್ಕಾರ ಬಲಾಢ್ಯ ಸಮುದಾಯಳಿಗೆ ಮಾತ್ರ ಮನ್ನಣೆ ನೀಡುತ್ತಿದ್ದು, ಶೋಷಿತ ಸಮುದಾಯವನ್ನು ಕಡೆಗಣಿಸುತ್ತಿದೆ ಎಂದು ತಳವಾರ-ಪರಿವಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶಿವಾಜಿ ಮೆಟಗಾರ ಆರೋಪಿಸಿದ್ದಾರೆ.

    ಉಪಚುನಾವಣೆ ಮುಂದಿಟ್ಟುಕೊಂಡು ರಾಜಕೀಯ ಭವಿಷ್ಯಕ್ಕಾಗಿ ತರಾತುರಿಯಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ, ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿದ ಯಡಿಯೂರಪ್ಪನವರಿಗೆ ಶೋಷಿತ ಹಿಂದುಳಿದ ತಳವಾರ-ಪರಿವಾರ ಸಮುದಾಯದ ಅಳಲು ಕೇಳಿಸುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

    ವಿಳಂಬ ನೀತಿಗೆ ಖಂಡನೆ
    ಬಸವಕಲ್ಯಾಣದ ಮಣ್ಣಿನಲ್ಲಿ ನಿಂತು ಮುಖ್ಯಮಂತ್ರಿಗಳ ಪುತ್ರ ಮರಾಠಾ ಅಭಿವೃದ್ಧಿ ನಿಗಮ ಘೋಷಿಸಿದರೋ ಅದೇ ಮಣ್ಣಿನಲ್ಲಿ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮ ಸಮುದಾಯಕ್ಕೆ ಕೊಟ್ಟ ಆಶ್ವಾಸನೆ ಮರೆತು ಹೋಯಿತೇ? ಅಧಿಕಾರಕ್ಕೆ ಬಂದರೆ ತಳವಾರ-ಪರಿವಾರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುತ್ತೇನೆಂಬ ತಮ್ಮ ಆಶ್ವಾಸನೆ ಎಲ್ಲಿ ಹೋಯಿತು? ತಮ್ಮದೇ ಕೇಂದ್ರ ಸರ್ಕಾರ ತಳವಾರ-ಪರಿವಾರ ಸಮುದಾಯಕ್ಕೆ ಎಸ್‌ಟಿ ಮಾನ್ಯತೆ ನೀಡಿದರೂ ತಾವೇಕೆ ವಿಳಂಬ ನೀತಿ ಅನುಸರಿಸುತ್ತಿದ್ದೀರಿ? ಬಲಾಢ್ಯ ಸಮುದಾಯಗಳ ಪರ ನಿಗಮ ಘೋಷಿಸಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ತಮಗೆ ನಮ್ಮದೂ ಮತಗಳಿವೆ ಎಂಬುದು ಮರೆತು ಹೋಗಿದೆಯಾ? ಬಸವಕಲ್ಯಾಣದಲ್ಲಿ ನಮ್ಮ ಸಮಾಜದ 46 ಸಾವಿರ ಮತಗಳಿವೆ ಎಂಬುದನ್ನು ಬಹುಶಃ ತಾವು ಮರೆತಂತಿದೆ ಎಂದವರು ಎಚ್ಚರಿಸಿದ್ದಾರೆ.

    ಬಸವ ಕಲ್ಯಾಣ ಚಲೋ
    ಬಸವಕಲ್ಯಾಣದಿಂದ ತಳವಾರ ಪರಿವಾರ ಸಮುದಾಯ ವಿನೂತನ ಹೋರಾಟಕ್ಕೆ ಮುನ್ನುಡಿ ಬರೆಯುತ್ತಿದೆ. ಶೀಘ್ರದಲ್ಲೇ ಬಸವಕಲ್ಯಾಣದಲ್ಲಿ ತಳವಾರ-ಪರಿವಾರ ಸಮಾಜದ ಹೋರಾಟದ ಕಹಳೆ ಮೊಳಗಲಿದೆ. ತಕ್ಷಣದಿಂದಲೇ ನಮ್ಮ ಸಮಾಜಕ್ಕೆ ಬಸವ ಕಲ್ಯಾಣ ಚಲೋ ಕರೆ ಕೊಡುತ್ತಿದ್ದೇವೆ ಎಂದು ಶಿವಾಜಿ ಮೆಟಗಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts