More

  ಅತಂತ್ರ ಸ್ಥಿತಿಯಲ್ಲಿ ದೇವರಗುಡ್ಡರ ಬದುಕು

  ಹುಣಸೂರು: ಶತಮಾನಗಳಿಂದ ಈ ನೆಲದ ಮೂಲನಿವಾಸಿಗಳಾಗಿ ಸಂಸ್ಕೃತಿ ಮತ್ತು ಪರಂಪರೆಯನ್ನು ಪಾಲನೆ ಮಾಡುತ್ತಿರುವ ಆದಿವಾಸಿಗಳು ತಮ್ಮ ಆಧ್ಯಾತ್ಮಿಕ ಶ್ರದ್ಧಾಕೇಂದ್ರಗಳನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ದೇವರನ್ನು ಪೂಜಿಸಲು ಅರ್ಹರಾದ ಆದಿವಾಸಿಗಳ ದೇವರಗುಡ್ಡರ ಬದುಕು ಕೂಡ ಅತಂತ್ರ ಸ್ಥಿತಿಯಲ್ಲಿದ್ದು. ದೇವರ ಬಳಿ ನಿಲ್ಲುವ ಪೂಜಾರಿ ಇನ್ನೊಬ್ಬರ ಮನೆಯ ಕೂಲಿಯಾಳಾಗಿ ಜೀವನದ ಬಂಡಿ ಎಳೆಯುವ ಪರಿಸ್ಥಿತಿ ಬಂದೊದಗಿದೆ.

  ಸರ್ಕಾರಗಳು ಜಾತ್ಯತೀತ ತತ್ವಗಳನ್ನು ಅನುಸರಿಸುವುದಾಗಿ ಘೋಷಿಸಿ ಧಾರ್ಮಿಕ ಅಸಮಾನತೆಯನ್ನು ಪ್ರೇರೇಪಿಸುವತ್ತ ಮುನ್ನುಗ್ಗುತ್ತಿವೆ. ಇತ್ತೀಚೆಗೆ ದೇವಾಲಯಗಳ ಹುಂಡಿಗೆ ಕೈಹಾಕಲಾಗಿದ್ದು, ಅರ್ಚಕರಿಗೆ ನೀಡುತ್ತಿದ್ದ ವೇತನವನ್ನೂ ವಾಪಸ್ ಪಡೆಯುವತ್ತ ರಾಜ್ಯ ಸರ್ಕಾರ ಮುಂದಡಿಯಿಟ್ಟಿತ್ತು. ಈ ನಡುವೆ 40 ವರ್ಷಗಳಿಂದ ಹಾಡಿಗಳಲ್ಲಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಉಳಿಸುವಂತೆ, ಧಾರ್ಮಿಕ ಕೈಕಂರ್ಯ ನಡೆಸುವ ದೇವರಗುಡ್ಡರಿಗೆ (ಅರ್ಚಕರು) ಆರ್ಥಿಕ ಬೆಂಬಲ ನೀಡಬೇಕೆಂಬ ಆದಿವಾಸಿಗಳ ಕೂಗು ಅರಣ್ಯರೋದನವಾಗಿಯೇ ಉಳಿದಿದೆ.

  359 ಹಾಡಿಗಳು, 70 ಸಾವಿರಕ್ಕೂ ಅಧಿಕ ಜನಸಂಖ್ಯೆ: ಮೈಸೂರು ಮತ್ತು ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 359 ಹಾಡಿಗಳಿವೆ(ಮೈಸೂರು 219, ಕೊಡಗು 140). ಸುಮಾರು 70 ಸಾವಿರಕ್ಕೂ ಅಧಿಕ ಆದಿವಾಸಿಗಳಿದ್ದಾರೆ. ಪ್ರತಿ ಹಾಡಿಯಲ್ಲೂ ತಮ್ಮದೇ ಆರಾಧ್ಯದೇವರನ್ನು ಪೂಜಿಸುವ, ನಂಬುವ ಪರಂಪರೆ ಇಂದಿಗೂ ಇದೆ. ಆದಿವಾಸಿಗಳ ಬಹುತೇಕ ಶ್ರದ್ಧಾಕೆಂದ್ರಗಳು ಬೃಹತ್ ಅರಳಿಮರದ ಬುಡದಲ್ಲೇ ಸ್ಥಾಪಿಸಲ್ಪಟ್ಟಿರುತ್ತವೆ. ಕಾಡಿನಿಂದ ಹೊರಬಂದ ನಂತರ ಹಾಡಿಗಳಲ್ಲಿ ಗುಡಿಗೋಪುರಗಳನ್ನು ನಿರ್ಮಿಸಿ ಪೂಜಿಸುತ್ತಿದಾರೆ. 400ಕ್ಕೂ ಹೆಚ್ಚು ದೇವರಗುಡ್ಡರು ವಿವಿಧ ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ.

  ಯಜಮಾನ, ದೇವರಗುಡ್ಡರೇ ಮುಖ್ಯಸ್ಥರು: ಪ್ರತಿ ಹಾಡಿಯಲ್ಲೂ ಹಾಡಿಯ ಯಜಮಾನ ಮತ್ತು ದೇವರನ್ನು ಪೂಜಿಸುವ ಅರ್ಹತೆ ಪಡೆದ ದೇವರಗುಡ್ಡರೇ ಗ್ರಾಮದ ಮುಖ್ಯಸ್ಥ. ಹಾಡಿಯ ಪ್ರತಿ ವಿಷಯವೂ ಇವರ ಸಮ್ಮುಖದಲ್ಲೇ ಇತ್ಯರ್ಥವಾಗುತ್ತದೆ. ಆದಿವಾಸಿಗಳು ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ನಂಬಿಕೆ ಉಳ್ಳವರು. ದೇವರಗುಡ್ಡರಾದವರು ಇಡೀ ಊರಿನ ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವವನಾಗಿರುತ್ತಾನೆ. ಭಕ್ತನೊಂದಿಗೆ ಸಂವಾದವನ್ನೂ ನಡೆಸುತ್ತಾನೆ.

  ಸೋಮವಾರ-ಶುಕ್ರವಾರದ ಪ್ರಾಮುಖ್ಯ: ಆದಿವಾಸಿಗಳು ಹೆಚ್ಚಾಗಿ ಸೋಮವಾರ ಮತ್ತು ಶುಕ್ರವಾರ ಶ್ರದ್ಧಾಕೇಂದ್ರಗಳಿಗೆ ತೆರಳುತ್ತಾರೆ. ಕಾಡಿನಲ್ಲಿರುವ ದೇವರಿಗೂ ಅಂದೇ ಪೂಜೆ ಸಲ್ಲಿಸುತ್ತಾರೆ. ಆದಿವಾಸಿಗಳು ಉತ್ಸವ ಮಾಡುವುದಿಲ್ಲ. ದೇವರಿಗೆ ವೀಳ್ಯದೆಲೆ, ಅಡಕೆ, ಹೂವು ಮತ್ತು ಕಾಣಿಕೆಯೇ ಪ್ರದಾನವಾಗಿರುತ್ತದೆ. ಆದರೆ ಮೈಸೂರು ಭಾಗದ ಎಚ್.ಡಿ.ಕೋಟೆಯ ಭೀಮನಕೊಲ್ಲಿ ಜಾತ್ರೆ ಮತ್ತು ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳು ಪಾಲ್ಗೊಳ್ಳುವುದು ವಿಶೇಷ.

  ಆರಾಧನೆಯ ವೈಶಿಷ್ಟ್ಯತೆ: ಜೇನುಕುರುಬರ ದೇವರಗುಡ್ಡ ಭಕ್ತರ ಸಮಸ್ಯೆ ಪರಿಹರಿಸುವ ವೇಳೆ ನಾಲ್ಕೈದು ವಿಧದ ಧಾನ್ಯಗಳನ್ನು ಬಟ್ಟೆಯಲ್ಲಿ ಸುತ್ತಿಟ್ಟುಕೊಳ್ಳುವುದು ವಾಡಿಕೆ. ವ್ಯಕ್ತಿಯ ತಲೆ ಸುತ್ತ ಸುತ್ತಿಸುವ ಬುರುಡೆ ತಿರುವುವ ಪದ್ಧತಿಯನ್ನು ಅನುಸರಿಸಿ ಸಮಸ್ಯೆಯ ಆಳವನ್ನು ಅರಿತು ಪರಿಹಾರ ನೀಡುತ್ತಾನೆ. ಇನ್ನು ಬೆಟ್ಟಕುರುಬರು ಡೋಲು ಬಡಿಯುವ ಮೂಲಕ, ಇರುಳಿಗರು ತಮಟೆ ಬಾರಿಸುವ ಮೂಲಕ ಸಮಸ್ಯೆಗಳನ್ನು ಅರಿತು ಪರಿಹಾರೋಪಾಯ ತಿಳಿಸುತ್ತಾರೆ.

  ಗಾಡಿಗರ ಅಜ್ಜಯ್ಯ, ಚಾರುಳಿ ಒಡೆಯ: ಆದಿವಾಸಿಗಳು ತಮ್ಮ ಆರಾಧ್ಯದೈವದ ಹೆಸರನ್ನು ಅಷ್ಟೇ ವಿಶಿಷ್ಟವಾಗಿ ಇಟ್ಟುಕೊಂಡಿರುತ್ತಾರೆ. ಬಿಲ್ಲೇನಹೊಸಳ್ಳಿ ಹಾಡಿಯ ಚೌಡಮ್ಮ, ಅಯ್ಯನಕೆರೆ ಹಾಡಿಯ ಗಾಡಿಗರ ಅಜ್ಜಯ್ಯ, ಕೊಳವಿಗೆ ಹಾಡಿಯ ಚಾರುಳಿ ಒಡೆಯ, ವೀರನಹೊಸಹಳ್ಳಿ ಹಾಡಿಯ ಮಂಟಳ್ಳಿ ಬಸವ, ವಿಜಯಗಿರಿ ಹಾಡಿಯ ಕಾಡುಬಸವ, ಕಲ್ಲೂರಪ್ಪ, ಭೀಮನಹಳ್ಳೀ ಹಾಡಿಯ ಚೌಡಮ್ಮ ಹೀಗೆ ವಿವಿಧ ಹೆಸರಿನೊಂದಿಗೆ ದೇವರ ಪೂಜೆ, ನಂಬಿಕೆ ಅನುಸರಿಸುತ್ತಾರೆ. ದೇವರಗುಡ್ಡರು ಆದಿವಾಸಿಗಳ ಪಾರಂಪರಿಕ ಆರೋಗ್ಯ ರಕ್ಷಕರು ಎಂದೇ ಭಾವಿಸಲಾಗುತ್ತದೆ. ತಮ್ಮ ನಂಬಿಕೆಯನ್ನು ಮೂಢನಂಬಿಕೆ ಎಂದು ಕರೆಯುವುದನ್ನು ಸಹಿಸುವುದಿಲ್ಲ.

  ಗೌರವಧನ ದೊರಕಲಿ: ಹಾಡಿಯ ಒಳಿತಿಗಾಗಿ ದಿನದ ಬಹುಸಮಯವನ್ನು ಕಳೆಯುವ ದೇವರಗುಡ್ಡರಿಗೆ ನಯಾಪೈಸೆ ಆದಾಯ ಇರುವುದಿಲ್ಲ. ದೇವರಿಗೆ ನೀಡಿದ ಕಾಣಿಕೆ ದೇವಾಲಯಕ್ಕೆ ಸರಿಹೋಗುತ್ತದೆ. ಆದರೆ ದೇವರಗುಡ್ಡರ ಹೊಟ್ಟೆಹೊರೆಯಲು ಇತರರ ಬಳಿ ಕೂಲಿನಾಲಿ ಮಾಡಿ ಬದುಕಬೇಕಿದೆ. ನಾಲ್ಕೈದು ದಶಕಗಳಿಂದ ಆದಿವಾಸಿ ದೇವರಗುಡ್ಡರನ್ನು ಗುರುತಿಸಿ ಗೌರವಧನ ನೀಡಬೇಕೆಂದು ಡೀಡ್ ಸಂಸ್ಥೆ ಮತ್ತು ಆದಿವಾಸಿ ಬುಡಕಟ್ಟು ಕೃಷಿಕರ ಸಂಘ ಸತತ ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಬೇಸರ ವ್ಯಕ್ತಪಡಿಸುತ್ತಾರೆ.

  ಈ ನೆಲದ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಡೆಸುತ್ತಿದ್ದೇವೆ. ಹಾಡಿಯ ಅಭಿವೃದ್ಧಿಯೇ ನಮ್ಮ ಗುರಿ. ಇದಕ್ಕಾಗಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ನಾವು ನಮ್ಮ ಬದುಕು ಕಟ್ಟಿಕೊಳ್ಳಲು ಸರ್ಕಾರದ ಸಹಾಯ ಅಗತ್ಯವಿದೆ. ಪುನರ್ವಸತಿಯಂತೂ ಗಗನಕುಸುಮ. ಕನಿಷ್ಠ ಪಕ್ಷ ನಮ್ಮನ್ನು ಸರ್ಕಾರ ಗುರುತಿಸಿ ಆರ್ಥಿಕ ಸಹಾಯ ನೀಡಿದಲ್ಲಿ ನಮ್ಮ ಕುಟುಂಬಗಳು ಬದುಕಲು ಸಾಧ್ಯ.
  ರಮೇಶ್ ಹಂದಿಗೆರೆ ಚೌಡಮ್ಮ ದೇವಾಲಯ, ಬಿಲ್ಲೇನಹೊಸಳ್ಳಿ ಹಾಡಿ, ಹುಣಸೂರು

  2020ರ ಆದಿವಾಸಿ ಪಾರ್ಲಿಮೆಂಟ್‌ನಲ್ಲಿ ಕೈಗೊಂಡ ನಿರ್ಣಯಗಳ ಪೈಕಿ ಆದಿವಾಸಿ ದೇವರಗುಡ್ಡರಿಗೂ ಗೌರವಧನ ನೀಡಬೇಕೆನ್ನುವ ಒಂದು. ಈ ಕುರಿತು ಆದಿವಾಸಿಗಳು ಸತತ ಹೋರಾಟ ನಡೆಸಿದ್ದಾರೆ. ಪಾರ್ಲಿಮೆಂಟ್ ನಿರ್ಣಯಗಳನ್ನು ರಾಷ್ಟ್ರಪತಿಯಿಂದ ಆರಂಭಗೊಂಡು ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೂ ಮತ್ತು ಮೌಖಿಕವಾಗಿಯೂ ತಿಳಿಸಲಾಗಿದೆ. ಆದಿವಾಸಿಗಳ ಕುರಿತು ಇರುವ ಅಸಡ್ಡೆ ದೂರವಾಗಬೇಕು. ಆದಿವಾಸಿಗಳ ಪರಂಪರೆಯನ್ನು ಉಳಿಸುವ ಕಾರ್ಕ್ಕೆ ಬೆಂಬಲ ನೀಡಬೇಕು.
  ಡಾ.ಎಸ್.ಶ್ರೀಕಾಂತ್, ನಿರ್ದೇಶಕ, ಡೀಡ್ ಸಂಸ್ಥೆ, ಹುಣಸೂರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts