More

  ದೇವಗಿರಿಯಲ್ಲಿ ಗ್ರಾಪಂ ಸದಸ್ಯರ ಗೂಂಡಾಗಿರಿ

  ಹಾವೇರಿ: ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿಗೀಡಾದ ಮನೆಗಳಿಗೆ ಪರಿಹಾರ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಪ್ರಶ್ನಿಸಿದ ರೈತ ಸಂಘದ ಮುಖಂಡನ ಮೇಲೆ ಗ್ರಾಪಂ ಸದಸ್ಯರು ಹಲ್ಲೆ ನಡೆಸಿದ ಘಟನೆ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಗುರುವಾರ ನಡೆದಿದೆ.

  ರೈತ ಸಂಘದ ಮುಖಂಡ ರಾಜೇಸಾಬ ತರ್ಲಗಟ್ಟ ಹಲ್ಲೆಗೊಳಗಾದ ವ್ಯಕ್ತಿ. ಗ್ರಾಪಂ ವ್ಯಾಪ್ತಿಯಲ್ಲಿ ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಪರಿಹಾರ ಹಂಚಿಕೆಯಲ್ಲಿ ಅರ್ಹರನ್ನು ಕಡೆಗಣಿಸಲಾಗಿದೆ. ಬಹುತೇಕ ಗ್ರಾಪಂ ಸದಸ್ಯರೇ ಮನೆ ಹಾನಿ ಪರಿಹಾರ ಪಡೆದಿದ್ದಾರೆ. ಈ ಕುರಿತು ತನಿಖೆ ನಡೆಸಿ ಅರ್ಹರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ರಾಜೇಸಾಬ ತರ್ಲಗಟ್ಟ ನೇತೃತ್ವದಲ್ಲಿ ದೇವಗಿರಿ ಗ್ರಾಪಂ ಎದುರು ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಈ ಕುರಿತು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಇದರಿಂದ ತಹಸೀಲ್ದಾರ್ ನೇತೃತ್ವದಲ್ಲಿ ಬಿದ್ದ ಮನೆಗಳ ಮರುಸಮೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಿಡಿಒ ವಿರುದ್ಧವೂ ದೂರು ನೀಡಲಾಗಿತ್ತು.

  ಗ್ರಾಪಂ ಸದಸ್ಯರು ಮನೆ ಹಾನಿ ಪರಿಹಾರ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರೊಚ್ಚಿಗೆದ್ದ ಸದಸ್ಯರು ಹಾಗೂ ಅಧ್ಯಕ್ಷೆಯ ಪತಿ ರಾಜೇಸಾಬನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ದೂರು ಮರಳಿ ಪಡೆಯುವಂತೆಯೂ ಬೆದರಿಸಿದ್ದಾರೆ ಎಂದು ದೂರಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಗುರುವಾರ ಮಧ್ಯಾಹ್ನ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

  ದೇವಗಿರಿ ಗ್ರಾಪಂ ಸದಸ್ಯರಾದ ಶಿವಾನಂದ ಮಾಳಿ, ಮಾಲತೇಶ ಮನ್ನಂಗಿ, ಅಧ್ಯಕ್ಷೆಯ ಪತಿ ಮಲ್ಲಿಕಾರ್ಜುನ ಪುರದ ಹಲ್ಲೆ ನಡೆಸಿದ್ದಾರೆ. ಇವರನ್ನು ಕೂಡಲೆ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ, ‘ಈ ಕುರಿತು ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಹಲ್ಲೆಗೊಳಗಾದ ರಾಜೇಸಾಬ ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಅವ್ಯವಹಾರ ಮೇಲ್ನೋಟಕ್ಕೆ ಸಾಬೀತು? ದೇವಗಿರಿ ಗ್ರಾಮದಲ್ಲಿ ಅನರ್ಹ ಫಲಾನುಭವಿಗಳಿಗೆ ಪರಿಹಾರ ಹಂಚಿಕೆಯಾಗಿರುವುದು ಮೇಲ್ನೋಟಕ್ಕೆ ನಿಜ ಎಂಬುದನ್ನು ಈ ಹಲ್ಲೆ ಪ್ರಕರಣವು ಸೂಚಿಸುತ್ತಿದೆ. ಪ್ರತಿಭಟನಾಕಾರರು ಆರೋಪಿಸಿದಂತೆ ಗ್ರಾಪಂ ಸದಸ್ಯರು, ಪಿಡಿಒ ಅರ್ಹರನ್ನು ಕಡೆಗಣಿಸಿ ಒಂದು ಮನೆಗೆ 1 ಲಕ್ಷ ರೂ.ಗಳಂತೆ ಒಪ್ಪಂದ ಮಾಡಿಕೊಂಡು ಮನೆ ಹಂಚಿಕೆ ಮಾಡಿದ್ದಾರೆ. ಇದರ ತನಿಖೆ ನಡೆಸಿದರೆ ಅವ್ಯವಹಾರ ಬಯಲಾಗುತ್ತದೆ. ಅಲ್ಲದೆ, ಕೆಲವರು ಮಳೆ ಬಂದು ಹೋದ ಮೇಲೆ, ಬಿದ್ದ ಮನೆಗೆ 5 ಲಕ್ಷ ರೂ. ಪರಿಹಾರ ಸಿಗುವುದನ್ನು ಅರಿತು ವಾಸಿಸಲು ಯೋಗ್ಯವಿಲ್ಲದ ಹಳೆಯ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಇದೆಲ್ಲವನ್ನು ಅರಿತಿದ್ದ ಗ್ರಾಮಸ್ಥರು ಇಂತಹವರಿಗೆ ಹೇಗೆ ಮನೆ ಪರಿಹಾರ ಕೊಟ್ಟೀರಿ ಎಂದು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದರು. ಆಗ ತಹಸೀಲ್ದಾರ್ ಭೇಟಿ ನೀಡಿ ಮರು ಸಮೀಕ್ಷೆ ನಡೆಸುವ ಭರವಸೆ ನೀಡಿ ಸಮಾಧಾನಪಡಿಸಿದ್ದರು. ನಂತರ ಮರುಸಮೀಕ್ಷೆ ವೇಳೆಯಲ್ಲಿ, ಸ್ಥಳೀಯ ಅಧಿಕಾರಿಗಳನ್ನು ಹೊರಗಿಡಬೇಕು. ಈ ಅವ್ಯವಹಾರದಲ್ಲಿ ಅವರು ಪಾಲುದಾರರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

  ದೇವಗಿರಿ ಗ್ರಾಪಂನಲ್ಲಿ ಅನರ್ಹರಿಗೆ ಮನೆ ಪರಿಹಾರ ಕೊಟ್ಟಿರುವ ಕುರಿತು ಬಂದ ದೂರಿನಂತೆ ಮರುಸಮೀಕ್ಷೆಗೆ ಆದೇಶಿಸಲಾಗಿದೆ. ಮರುಸಮೀಕ್ಷೆಯೂ ಬುಧವಾರ ಆರಂಭಗೊಂಡಿದೆ. ಅನರ್ಹರಿಗೆ ಮನೆ ಪರಿಹಾರ ಹೋಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹಲ್ಲೆಯ ಘಟನೆಯ ಮಾಹಿತಿ ನನಗೆ ಬಂದಿಲ್ಲ.

  | ಶಂಕರ ಜಿ.ಎಸ್., ತಹಸೀಲ್ದಾರ್ ಹಾವೇರಿ

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts