More

    ನಮ್ಮದು ಹಗಲು, ಅವರದು ರಾತ್ರಿ ಓಡಾಟ, ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ವ್ಯಂಗ್ಯ

    ದೇವದುರ್ಗ: ಸ್ಥಳೀಯರಾದ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಪುರ ಹಗಲಲ್ಲಿ ಓಡಾಡಿ ಮತ ಕೇಳಿದರೆ, ಪರಸ್ಥಳದ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ರಾತ್ರಿ ಓಡಾಡಿ ಮತಕೇಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಹನುಮಂತಪ್ಪ ಆಲ್ಕೋಡ್ ವ್ಯಂಗ್ಯವಾಡಿದರು.

    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಸ್ಥಳೀಯ ಜನರ ಭಾವನೆ ಅರ್ಥ ಮಾಡಿಕೊಳ್ಳುವ ಸ್ಥಳೀಯ ವ್ಯಕ್ತಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಎಲ್ಲೋ ದೂರದ ಜಿಲ್ಲೆಯ ವ್ಯಕ್ತಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಮತದಾರರಿಗೆ ಮುಖ ತೋರಿಸುವ ನೈತಿಕತೆ ಇಲ್ಲದ ಕಾರಣ ಅವರು ಹಗಲಿನಲ್ಲಿ ಮತಕೇಳುವ ಧೈರ್ಯ ತೋರುತ್ತಿಲ್ಲ. ಹೀಗಾಗಿ ರಾತ್ರಿಯಲ್ಲಿ ಕೌದಿ, ಕಂಬಳಿ, ಬಟ್ಟೆ ಹೊದ್ದುಕೊಂಡು ಮತ ಕೇಳುತ್ತಿದ್ದಾರೆ. ಹಣದ ಆಮಿಷ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ವಿಧಾನಪರಿಷತ್ ಪ್ರಜ್ಞಾವಂತ ಹಾಗೂ ಜ್ಞಾನಿಗಳ ಮನೆ. ಇಲ್ಲಿಗೆ ಆಯ್ಕೆಯಾಗುವ ಅಭ್ಯರ್ಥಿಗೆ ಸ್ಥಳೀಯ ನಾಡಿಮಿಡಿತ ಅರ್ಥವಾಗಿರಬೇಕು. ಯಾವುದೇ ವಿಷಯದ ಮೇಲೆ ಚರ್ಚಿಸುವ ಸಾಮರ್ಥ್ಯವಿರಬೇಕು. ಅಂಥ ಜ್ಞಾನಹೊಂದಿದ ಶರಣಗೌಡ ಬಯ್ಯಪುರಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಕಾಂಗ್ರೆಸ್ ಬೆಂಬಲಿತ ಮತದಾರರು ಹೆಚ್ಚಿದ್ದಾರೆ. ಅವರೇ ನಮಗೆ ಮತನೀಡಿದರೆ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿ ಹಣ ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಈ ಬಗ್ಗೆ ಮತದಾರರು ಎಚ್ಚರಿಕೆಯಿಂದ ಇರಬೇಕು. ಜಾತಿ, ದುಡ್ಡಿನ ಮೇಲೆ ಮೇಲ್ಮನೆ ಚುನಾವಣೆಗೆ ಆಯ್ಕೆಮಾಡುವುದು ಸರಿಯಲ್ಲ. ಜ್ಞಾನಿಗಳು, ಕಾನೂನು ಅರಿತವರು ಆಯ್ಕೆಯಾದರೆ ನಮ್ಮ ಸಮಸ್ಯೆಗಳ ಚರ್ಚೆ ನಡೆಸುತ್ತಾರೆ. ಬಿಜೆಪಿ ಮುಖಂಡರು ತಮ್ಮ ಅಭ್ಯರ್ಥಿಯನ್ನು ಸ್ಥಳೀಯರು ಎಂದು ಬಿಂಬಿಸಲು ಸುಳ್ಳಿನ ಮಳೆಯೇ ಸುರಿಸುತ್ತಿದ್ದಾರೆ. ಬೇರೆಯವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ, ಸ್ಥಳೀಯರ ಹಕ್ಕನ್ನು ಕಸಿದುಕೊಂಡಿದೆ. ನಮ್ಮ ಜಿಲ್ಲೆಗೆ ಸಿಗಬೇಕಾದ ಅವಕಾಶ ಬೇರೆ ಜಿಲ್ಲೆಯವರಿಗೆ ಸಿಕ್ಕಿದೆ ಎಂದರು.

    ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಅಜೀಜ್, ಆದನಗೌಡ ಬುಂಕಲದೊಡ್ಡಿ, ಶಿವಕುಮಾರ, ಲಕ್ಷ್ಮಣ, ಕೆರೆಲಿಂಗಪ್ಪ ನಾಡಗೌಡ, ಪುರಸಭೆ ಸದಸ್ಯ ಶರಣಗೌಡ ಗೌರಂಪೇಟೆ, ಮಹಾದೇವಪ್ಪಗೌಡ ಚಿಕ್ಕಬೂದೂರು, ಸತೀಶ ಬಂಡೇಗುಡ್ಡ ಇತರರು ಇದ್ದರು.

    ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ತಡೆದಿದ್ದಾರೆ ಎಂದು ಬಿಜೆಪಿ ಹೆೇಳಿಕೊಂಡು ಓಡಾಡುತ್ತಿದೆ. ಆದರೆ, ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಇದು ಭ್ರಷ್ಟಾಚಾರ ಅಲ್ಲವೆ?. ರಾಜ್ಯದಲ್ಲಿ 40 ಪರ್ಸೆಂಟ್ ಸರ್ಕಾರವಿದ್ದು, ಭ್ರಷ್ಟಾಚಾರ ಎಲ್ಲಿ ತಡೆದಿದ್ದಾರೆ?
    | ಹನುಮಂತಪ್ಪ ಆಲ್ಕೋಡ್, ಕೆಪಿಸಿಸಿ ವಕ್ತಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts