More

    30.8 ಕೋಟಿ ಅನುದಾನ ಕ್ರೋಢೀಕರಣ ಗುರಿ


    ದೇವದುರ್ಗ ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆಯಿಂದ ಬಜೆಟ್ ಮಂಡನೆ

    ದೇವದುರ್ಗ: ಪಟ್ಟಣದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಪುರಸಭೆ ಅಧ್ಯಕ್ಷ ಶರಣಗೌಡ ಗೌರಂಪೇಟೆ ಬುಧವಾರ 2022-23ನೇ ಸಾಲಿನ ಬಜೆಟ್ ಮಂಡಿಸಿದರು.

    ಆರಂಭಿಕ ನಗದು ಮತ್ತು ಬ್ಯಾಂಕಿಂಗ್ ಶುಲ್ಕ 11,66,46,889ರೂ. ಆದಾಯ, ರಾಜಸ್ವ ಸಂಗ್ರಹದಿಂದ 11,64,75000 ರೂ., ಬಂಡವಾಳ ಸ್ವೀಕೃತಿಯಿಂದ 40 ಲಕ್ಷ ರೂ., ಅಸಾಧಾರಣ ಸ್ವೀಕೃತಿಯಿಂದ 3,49,11,000 ರೂ. ಹಾಗೂ ಇತರ ಮೂಲಗಳಿಂದ ಒಟ್ಟು 30,80,32,889 ರೂ. ಅನುದಾನ ಸಂಗ್ರಹಿಸುವ ಗುರಿ ಹೊಂದಲಾಗಿದೆ.

    ಇದರಲ್ಲಿ ರಾಜಸ್ವ ಪಾವತಿಗೆ 11,53,25,000 ರೂ, ಬಂಡವಾಳ ಪಾವತಿಗೆ 13,45,00,000 ರೂ. ಅಸಾಧಾರಣ ಪಾವತಿಗೆ 53,01,000 ಸೇರಿದಂತೆ 30,28,36,000 ರೂ. ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. 51,96,889 ರೂ. ಉಳಿತಾಯ ಬಜೆಟ್ ಆಗಿದೆ ಎಂದು ಹೇಳಿದರು.

    ನಾಮನಿರ್ದೇಶಿತ ಸದಸ್ಯ ರವಿಕುಮಾರ್ ಪಾಟೀಲ್ ಅಳ್ಳುಂಡಿ ಮಾತನಾಡಿ, ಇ-ಸ್ವತ್ತು ಖಾತಾಗಾಗಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ವಿಶೇಷ ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮಾನಪ್ಪ ಮೇಸ್ತ್ರಿ ಮಾತನಾಡಿ, ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಬೀದಿದೀಪಗಳ ಕೊರತೆಯಿದೆ. ಜಹೀರುದ್ದಿನ್ ಪಾಷಾ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಹಲವೆಡೆ ಬೀದಿದೀಪಗಳಿಲ್ಲ. ರಾತ್ರಿ ವೇಳೆ ಎಲ್ಲೆಂದರಲ್ಲಿ ಬಿಡಾಡಿ ದನಗಳು ಮಲಗುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ. ಬೀದಿದೀಪಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

    ಅಧ್ಯಕ್ಷ ಶರಣಗೌಡ ಗೌರಂಪೇಟೆ ಮಾತನಾಡಿ, ಜಲಜೀವನ ಯೋಜನೆಯಡಿ ಮನೆಮನೆಗೆ ನೀರು ಕೊಡುವ ಕಾಮಗಾರಿ ಶೀಘ್ರ ಆರಂಭವಾಗಲಿದ್ದು, ರಸ್ತೆ ಅಗೆಯಲಾಗುತ್ತಿದೆ. ಇದರಿಂದಾಗಿ ಈಗ ಬೀದಿದೀಪಗಳ ಕಂಬಗಳನ್ನು ಹಾಕಲು ಬರಲ್ಲ. ಕಾಮಗಾರಿ ನಂತರ ಡಿವೈಡರ್ ಅಳವಡಿಸಿ ವಿದ್ಯುದ್ದೀಪ ಅಳವಡಿಸಲಾಗುವುದು ಎಂದರು. ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಕರ್, ಉಪಾಧ್ಯಕ್ಷೆ ಸಾಬಮ್ಮ ಗುಂಡಪ್ಪ, ಸದಸ್ಯರಾದ ಚಂದ್ರಶೇಖರ ಕುಂಬಾರ, ವೆಂಕಟೇಶ, ಮಕ್ತಾಲ್, ಚಂದ್ರಶೇಖರ್ ಛಲವಾದಿ, ಹನುಮೇಶ್ ನಾಯಕ, ಪಂಪಣ್ಣ, ತಬಸುಮ್ ಉದ್ದಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts