More

    ದಾಖಲಾಗದ ಪ್ರಕರಣ, ಬಗೆಹರಿಯದ ಅನುಮಾನ; ನಿಧಿಗಳ್ಳತನಕ್ಕೆ ಬಂದಿತ್ತಾ ಐವರ ತಂಡ ?

    ಮಾನಸಗಲ್ ಗ್ರಾಮದಲ್ಲಿ ಘಟನೆ

    ದೇವದುರ್ಗ: ಮಾನಸಗಲ್ ಐತಿಹಾಸಿಕ ಲಕ್ಷ್ಮಿ ರಂಗನಾಥ ದೇವಸ್ಥಾನಕ್ಕೆ ಲಾಕ್‌ಡೌನ್ ಸಮಯದಲ್ಲಿ ಅನುಮಾನಾಸ್ಪದವಾಗಿ ಭೇಟಿ ನೀಡಿದ್ದ ಐವರನ್ನು ಗ್ರಾಮಸ್ಥರೇ ಪೊಲೀಸರ ವಶಕ್ಕೆ ಒಪ್ಪಿಸಿದರೂ ಪ್ರಕರಣ ದಾಖಲಾಗದಿರುವುದು ಅನುಮಾನ ಮೂಡಿದೆ.

    ಕೊಳ್ಳೇಗಾಲ ಮೂಲದ ಪೂಜಾರಿ, ಗುತ್ತಿಗೆದಾರ ಹಾಗೂ ಹಿರಿಯ ಪೊಲೀಸ್ ಪೇದೆ ಒಳಗೊಂಡ ನಾಲ್ವರ ತಂಡ ಕಾರೊಂದರಲ್ಲಿ ತಾಲೂಕಿನ ಕೊತ್ತದೊಡ್ಡಿಯ ವ್ಯಕ್ತಿ ಜತೆಗೂಡಿ ಜೂ.2ರಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇವರ ಮಾತು, ನಡೆಗಳಿಂದ ಅನುಮಾನಗೊಂಡ ದೇವಸ್ಥಾನದ ಪೂಜಾರಿ, ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ನೂರಾರು ಸಂಖ್ಯೆ ಭಕ್ತರು ಈ ಐವರ ವಿಚಾರಣೆ ನಡೆಸಿದ್ದು, ಸಮರ್ಪಕ ಉತ್ತರ ದೊರಕದಿದ್ದಾಗ ನಿಧಿಗಳ್ಳತನಕ್ಕೆ ಬಂದಿದ್ದಾರೆಂದು ಆರೋಪಿಸಿ ಅವರನ್ನು ವಿಚಾರಿಸಿ, ಠಾಣೆಗೆ ವಿಷಯ ತಿಳಿಸಿದ್ದಾರೆ. ಪಿಐ ಹನುಮಂತ ಸಣ್ಣಮನಿ ನೇತೃತ್ವದ ತಂಡ ಈ ಐವರನ್ನು ವಶಕ್ಕೆ ಪಡೆದಿದೆ. ಜೂ.3 ಮತ್ತು 4 ರಂದು ವಿಚಾರಣೆ ನಡೆಸಿ, ಜೂ.4ರ ಸಂಜೆ ಬಿಟ್ಟುಕಳಿಸಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.

    ಪೊಲೀಸರು ಹೇಳೋದೇನು ?: ಈ ಐವರು ಮಂತ್ರಾಲಯ ದರ್ಶನಕ್ಕೆ ಬಂದಿದ್ದರು. ಅಲ್ಲಿಂದ ದೇವಸ್ಥಾನ ದರ್ಶನಕ್ಕೆ ಬಂದಿದ್ದ ವೇಳೆ ಗ್ರಾಮಸ್ಥರಿಗೆ ಇವರ ಮೇಲೆ ಅನುಮಾನ ಬಂದು ಥಳಿಸಿದ್ದಾರೆ. ನಿಧಿಗಳ್ಳತನಕ್ಕೆ ಬಂದಿರುವ ಆರೋಪಕ್ಕೆ ಪುರಾವೆಗಳಿಲ್ಲ. ಇವರ ವಿರುದ್ಧ ಗ್ರಾಮಸ್ಥರೂ ದೂರು ಕೊಟ್ಟಿಲ್ಲ ಎನ್ನುತ್ತಿದ್ದಾರೆ ಪೊಲೀಸರು.

    ಗ್ರಾಮಸ್ಥರ ಅನುಮಾನವೇನು ?: ಲಾಕ್‌ಡೌನ್ ಸಮಯದಲ್ಲಿ ಮಂತ್ರಾಲಯದಲ್ಲಿ ದರ್ಶನಕ್ಕೆ ಅವಕಾಶವಿಲ್ಲ. ಲಾಕ್‌ಡೌನ್ ಇದ್ದರೂ ಮಾನಸಗಲ್ ದೇವಸ್ಥಾನ ದರ್ಶನಕ್ಕೆ ಬಂದಿದ್ದು ಯಾಕೆ ? ದೇವಸ್ಥಾನದ ಸುತ್ತಲೂ ಓಡಾಡಿ, ಮಾಹಿತಿ ಪಡೆದಿದ್ದು ಯಾಕೆ ? ವಿಚಾರಣೆ ನೆಪದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ಯಾಕೆ ? ಕ್ರಮ ಕೈಗೊಳ್ಳದೆ ಬಿಟ್ಟಿರುವುದು ಯಾಕೆ ಎಂದು ಭಕ್ತರ ಪ್ರಶ್ನೆ.


    ನಿಧಿ ಕಳ್ಳತನಕ್ಕೆ ಬಂದಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಹೀಗಾಗಿ ಐವರನ್ನು ಬಿಟ್ಟಿದ್ದೇವೆ.
    | ಹನುಮಂತ ಸಣ್ಣಮನೆ, ಪಿಐ ದೇವದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts