More

    ಗಲಗ ಗ್ರಾಮದಲ್ಲಿ ಜಲ ಜೀವನ ಗಲಿಬಿಲಿ!

    ದೇವದುರ್ಗ: ತಾಲೂಕಿನ ಗಲಗ ಗ್ರಾಮದಲ್ಲಿ ಪ್ರಧಾನಮಂತ್ರಿ ಜಲಜೀವನ ಯೋಜನೆಯಡಿ ನಿರ್ಮಿಸಿದ ಕಾಮಗಾರಿ ಹಾಳಾಗಿದ್ದು, ಉದ್ಘಾಟನೆಗೆ ಮುನ್ನವೇ ಎಲ್ಲೆಂದರಲ್ಲಿ ಒಡೆದಿದೆ. ಮಹತ್ವದ ಯೋಜನೆ ಗ್ರಹಣ ಹಿಡಿದು ಗ್ರಾಮಸ್ಥರು ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

    ಗ್ರಾಪಂ ಸಹಯೋಗದಲ್ಲಿ ಯೋಜನೆ ಜಾರಿಗೊಳಿಸಿದ್ದು, ಗುತ್ತಿಗೆದಾರರು ಅರ್ಧಕ್ಕೆ ಬಿಟ್ಟಿದ್ದಾರೆ. ಉಳಿದ ಕಾಮಗಾರಿ ಮಾಡುವವರು ಯಾರು ಎನ್ನುವ ಪ್ರಶ್ನೆಎದ್ದಿದೆ. ಮೂರು ಹಂತದಲ್ಲಿ ಕಾಮಗಾರಿ ಆರಂಭಿಸಿದ್ದು, ಮೊದಲ ಹಂತದ ಯೋಜನೆಗೆ ಪ್ರಾಯೋಗಿಕವಾಗಿ ನೀರಿನ ಸಂಪರ್ಕ ಕೊಡಲಾಗಿದೆ. ಮುದಗಲ್ ಮಸೀದಿ ಹತ್ತಿರ ಮುಖ್ಯಪೈಪ್ ಒಡೆದು ನೀರು ಕಾರಂಜಿಯಂತೆ ಚಿಮ್ಮುತ್ತಿದೆ.

    ವಿವಿಧ ಬಡಾವಣೆಯಲ್ಲೂ ಎಲ್ಲೆಂದರಲ್ಲಿ ಲೀಕೇಜ್ ಇದ್ದು, ನೀರು ಸೋರಿಕೆಯಾಗುತ್ತಿದೆ. ಇದರಿಂದ ಮನೆಮನೆಗೆ ಬರುವ ನೀರು ಮಲೀನವಾಗಿದ್ದು, ಶುದ್ಧ ಕುಡಿವ ನೀರು ಮರೀಚಿಕೆಯಾಗಿದೆ. ಮುಖ್ಯಪೈಪ್‌ಲೈನ್ ಒಡೆದಿದ್ದರಿಂದ ಅರ್ಧ ಊರಿಗೆ ನೀರಿನ ಸಮಸ್ಯೆಯಾಗಿದೆ.

    ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಯೋಜನೆ ಜಾರಿಗೊಳಿಸಿದ್ದು, ಸುಮಾರು 1,546 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವುದು ಯೋಜನೆ ಗುರಿ. ಗುತ್ತಿಗೆದಾರರು ಮೊದಲ ಹಂತದಲ್ಲಿ 900ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದಾರೆ. ಎರಡು ಹಾಗೂ ಮೂರನೇ ಹಂತದ ಕಾಮಗಾರಿ ಮಾಡದೆ ಕೈತೊಳೆದುಕೊಂಡಿದ್ದಾರೆ.

    ಎರಡು ಹಂತದಲ್ಲಿ ಉಳಿದ 600ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಬೇಕಿದೆ. ಕಾಮಗಾರಿ ಉಪಗುತ್ತಿಗೆ ಬೇರೆಯವರಿಗೆ ನೀಡಲಾಗಿದೆ. ಗ್ರಾಮಸ್ಥರು ಯಾರಿಗೆ ಸಮಸ್ಯೆ ಹೇಳಬೇಕು ಎನ್ನುವುದು ತಿಳಿಯುತ್ತಿಲ್ಲ. ಗ್ರಾಪಂಗೆ ಕೇಳಿದರೆ ಯೋಜನೆ ಹ್ಯಾಂಡ್‌ಒವರ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲೆಂದರಲ್ಲಿ ಪೈಪ್‌ಒಡೆದು ನೀರು ಪೋಲಾಗುತ್ತಿದ್ದು, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಜಲಜೀವನ ಬಗ್ಗೆ ಹಲವು ದೂರು: ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಜಲಜೀವನ ಯೋಜನೆ ಪ್ರತಿಹಳ್ಳಿಯ ಪ್ರತಿಮನೆಗೆ ಕುಡಿವ ನೀರು ಕಲ್ಪಿಸುವ ಉದ್ದೇಶ ಹೊಂದಿದೆ. ಆದರೆ, ಉಪಗುತ್ತಿಗೆ, ತುಂಡು ಗುತ್ತಿಗೆಯಿಂದ ಕಾಮಗಾರಿ ಸಂಪೂರ್ಣ ಹಳ್ಳಹಿಡಿದಿದೆ. ತಾಲೂಕಾದ್ಯಂತ ಯೋಜನೆ ಜಾರಿಗೊಳಿಸಿದ್ದು, ಹಲವು ಕಾಮಗಾರಿಗಳು ಕಳಪೆಯಾಗಿವೆ. ಈ ಹಿಂದೆ ಹಲವು ಕಡೆ ಯೋಜನೆಯಡಿ ಪೈಪ್‌ಲೈನ್ ಹಾಕಲು ಸಿಸಿ ರಸ್ತೆಯನ್ನು ಒಡೆಯಲಾಗಿದೆ. ಗಬ್ಬೂರು, ಜಾಲಹಳ್ಳಿ, ಆಲ್ಕೋಡ, ಪಲಕನಮರಡಿ ಸೇರಿ ವಿವಿಧ ಗ್ರಾಪಂಯಲ್ಲಿ ಯೋಜನೆಗಾಗಿ ರಸ್ತೆ ಅಗೆಯಲಾಗಿದೆ. ಅರೆಬರೆ ಕೆಲಸ ಮಾಡಿ ಪೈಪ್ ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಗಲಗನಲ್ಲಿ ಪೈಪ್ ಒಡೆದಿರುವುದೇ ಇದಕ್ಕೆ ಸಾಕ್ಷಿ.

    ಜಲಜೀವನ ಯೋಜನೆಯಡಿ 1,546ಮನೆಗಳಲ್ಲಿ ಮೊದಲ ಹಂತದಲ್ಲಿ 900ಸಂಪರ್ಕ ಕಲ್ಪಿಸಲಾಗಿದೆ. ಎರಡು ಹಾಗೂ ಮೂರನೇ ಹಂತದಲ್ಲಿ 600ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಬಾಕಿಯಿದೆ. ಕಾಮಗಾರಿ ನಮಗೆ ಹ್ಯಾಂಡ್‌ಒವರ್ ಮಾಡಿಲ್ಲ. ಒಡೆದ ಪೈಪ್‌ಲೈನ್ ರಿಪೇರಿ ಕಾರ್ಯ ನಡೆಯುತ್ತಿದ್ದು, ಸರಿಪಡಿಸುತ್ತೇವೆ.
    | ರಘುನಂದನ್ ಪೂಜಾರಿ, ಗಲಗ ಗ್ರಾಪಂ ಪಿಡಿಒ

    ಗಲಗ ಗ್ರಾಮದಲ್ಲಿ ಜಲಜೀವನ ಯೋಜನೆ ಸಂಪೂರ್ಣ ಕಳಪೆಯಾಗಿದ್ದು, ಎಲ್ಲೆಂದರಲ್ಲಿ ಪೈಪ್‌ಲೈನ್ ಒಡೆದು ಹೋಗುತ್ತಿವೆ. ಮನೆಗೆ ಸರಿಯಾಗಿ ನೀರು ಬರುತ್ತಿಲ್ಲ. ಕೆಲವು ಕಡೆ ಗಲೀಜು ನೀರು ಬಿಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಕ್ರಮಜರುಗಿಸಬೇಕು.
    | ಅಕ್ಬರ್, ಗ್ರಾಮದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts