More

    ನೀರಾವರಿ ಕಚೇರಿಗೆ ಅನ್ನದಾತರ ಮುತ್ತಿಗೆ

    ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಭೂಮಿ ನೀಡಿದ ಸಂತ್ರಸ್ತ ರೈತರಿಗೆ ಭೂ ಪರಿಹಾರ ನೀಡುವಂತೆ ಒತ್ತಾಯಿಸಿ ತಾಲೂಕಿನ ಚಿಕ್ಕಹೊನ್ನಕುಣಿ ಗ್ರಾಮದಲ್ಲಿರುವ ಕೃಷ್ಣಾ ಭಾಗ್ಯಜಲ ನಿಗಮ ಕಚೇರಿಗೆ ವಿವಿಧ ಗ್ರಾಮಗಳ ನೂರಾರು ರೈತರು ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

    ಎನ್‌ಆರ್‌ಬಿ ನಾಲೆಗೆ ತಾಲೂಕಿನ ರೈತರು ತಮ್ಮ ಜೀವನಕ್ಕೆ ಆಧಾರವಾಗಿದ್ದ ಭೂಮಿ ನೀಡಿದ್ದಾರೆ. ಆದರೆ, ನೀರಾವರಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದ ರೈತರಿಗೆ ಸಮರ್ಪಕವಾಗಿ ಭೂ ಪರಿಹಾರ ಸಿಕ್ಕಿಲ್ಲ. 2018ರಲ್ಲಿ ಬಿಡಿಗಾಸು ನೀಡಿ, ಉಳಿದ ಪರಿಹಾರ ಹಣ ನಂತರ ಕೊಡುವುದಾಗಿ ಹೇಳಿ ಕೈ ತೊಳೆದುಕೊಂಡಿದ್ದಾರೆ.

    ಅಧಿಕಾರಿಗಳ ಧೋರಣೆ ಖಂಡಿಸಿ ರೈತರು ಕೋರ್ಟ್ ಮೊರೆಹೋಗಿದ್ದು, ಸೂಕ್ತ ಭೂ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ಆದರೆ, ಅಧಿಕಾರಿಗಳು ಇಂದು, ನಾಳೆ ಎನ್ನುತ್ತ ರೈತರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇದ್ದ ಭೂಮಿ ಕಳೆದುಕೊಂಡ ರೈತರು ಜೀವನ ನಡೆಸಲು ಪರದಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

    ಬಲದಂಡೆ ನಾಲೆಗೆ ಅಡಕಲಗುಡ್ಡ, ಅನ್ವರಿ, ಜುಟಮರಡಿ, ಮೂಡಲಗುಂಡ, ಊಟಿ, ಮದರಕಲ್, ಸೋಮನಮರಡಿ, ಜಾಲಹಳ್ಳಿ, ಆಲ್ಕೋಡ್, ರಾಮದುರ್ಗ, ಮಂದಕಲ್, ಕರಡಿಗುಡ್ಡ, ಕಡ್ಡಿಗುಡ್ಡ, ಯಾಟಗಲ್ ಸೇರಿ 20ಕ್ಕೂ ಹೆಚ್ಚು ಹಳ್ಳಿಗಳ ನೂರಾರು ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಮಾತ್ರ ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆಂದು ದೂರಿದರು.
    ಕೂಡಲೇ ನಾಲೆಗೆ ಭೂಮಿ ಕಳೆದುಕೊಂಡ ರೈತರಿಗೆ ಕೋರ್ಟ್ ಆದೇಶದಂತೆ ಸಮರ್ಪಕವಾಗಿ ಪರಿಹಾರ ಧನ ನೀಡಬೇಕು. ತಾರತಮ್ಯ ಮಾಡದೆ ಎಲ್ಲ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು. ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

    ವಿವಿಧ ಗ್ರಾಮಗಳ ರೈತರಾದ ಮಲ್ಲಯ್ಯಗೌಡ ಅನ್ವರ್, ಹನುಮಂತ್ರಾಯ, ಬಸವರಾಜ, ಬಲದಂಡಪ್ಪ ಊಟಿ, ತಿಮ್ಮನಗೌಡ ಊಟಿ, ನಬಿಸಾಬ್ ಮದರಕಲ್, ರಂಗಣ್ಣ ಅಡಕಲಗುಡ್ಡ, ರಾಮಯ್ಯ ಊಟಿ, ರಂಗಪ್ಪ ಊಟಿ, ಯಂಕಪ್ಪ, ಆಂಜಿನೇಯ, ವಕೀಲೆ ಉಮಾಪಾಟೀಲ್ ಇತರರರಿದ್ದರು.

    ನಾರಾಯಣಪುರ ಬಲದಂಡೆ ನಾಲೆಗೆ ಭೂಮಿ ಕಳೆದುಕೊಂಡ ರೈತರಿಗೆ ನೀರಾವರಿ ಇಲಾಖೆ 2018ರಲ್ಲಿ ಬಿಡಿಗಾಸು ನೀಡಿದೆ. ಸ್ಥಳೀಯ ಕೋರ್ಟ್‌ನಲ್ಲಿ ರೈತರು ಪ್ರಶ್ನೆ ಮಾಡಿದ್ದು, ಸೂಕ್ತ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿದೆ. ರೈತರ ಜತೆ ಅಧಿಕಾರಿಗಳು ಮಾತುಕತೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ವರ್ಷಗಳು ಕಳೆದರೂ ಅಧಿಕಾರಿಗಳು ಕೊಟ್ಟ ಮಾತು ಈಡೇರಿಸಿಲ್ಲ.
    ಉಮಾಪಾಟೀಲ್
    ರೈತರ ಪರವಾದ ಮಾಡಿದ ವಕೀಲೆ

    ಕಾಲ್ಕಿತ್ತ ಅಧಿಕಾರಿಗಳು: ಭೂ ಪರಿಹಾರಕ್ಕಾಗಿ ಇಲ್ಲಿನ ಚಿಕ್ಕಹೊನ್ನಕುಣಿ ಗ್ರಾಮದ ಕೃಷ್ಣಾಭಾಗ್ಯ ಜಲನಿಗಮದ ಕಚೇರಿಗೆ ರೈತರು ಮುತ್ತಿಗೆ ಹಾಕಿದ್ದಾಗ, ಕಚೇರಿಯಲ್ಲಿ ಯಾವ ಅಧಿಕಾರಿಗಳೂ ಇರಲಿಲ್ಲ. ರೈತರು ಬರುವ ಸುದ್ದಿಕೇಳಿ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ವಿವಿಧ ಅಧಿಕಾರಿಗಳ ಕಚೇರಿಗೆ ಬೀಗ ಜಡಿದಿದ್ದರೆ, ವಿಚಾರಿಸಲು ಒಂದಿಬ್ಬರು ಸಿಬ್ಬಂದಿ ಇದ್ದರು. ಮೂರು ಗಂಟೆಗೂ ಹೆಚ್ಚುಕಾಲ ರೈತರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರೂ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯಲಿಲ್ಲ. ಕೊನೆಗೆ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ ಭೇಟಿ ನೀಡಿ ರೈತರ ಜತೆ ಮಾತುಕತೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts