More

    ಮಣ್ಣಿನ ಗುಣಮಟ್ಟ ಕುಸಿತ

    ಬೇಲೂರು: ಮನುಷ್ಯ ಸತ್ತರೆ ಮಣ್ಣಿಗೆ ಹೋಗುತ್ತಾನೆ, ಆದರೆ ಮಣ್ಣೆ ಸತ್ತರೆ ಎಲ್ಲಿಗೆ? ಎಂಬುದನ್ನು ಮಾನವರು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅರೇಹಳ್ಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಅಮೋಘ ಸಿದ್ರಾಮ ಹೇಳಿದರು.


    ತಾಲೂಕಿನ ಅರೇಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ನೀರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಹೇಗೆ ಅಸಾಧ್ಯವೋ, ಅದೇ ರೀತಿ ಮಣ್ಣು ಮುಖ್ಯವಾಗಿದೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ, ರೈತರು ಹೊಲಗಳಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳನ್ನು ಬಳಸುತ್ತಿರುವುದರಿಂದ ಮಣ್ಣಿನ ಗುಣಮಟ್ಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.


    ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ತಜ್ಞರ ಸಮೀಕ್ಷೆ ಪ್ರಕಾರ ಮುಂದಿನ 50 ವರ್ಷಗಳ ನಂತರ ಮಣ್ಣಿನ ಫಲವತ್ತತೆ ಶೇ.50ರಷ್ಟು ಕ್ಷೀಣಿಸುತ್ತದೆ. ಇದು ಆಹಾರ ಭದ್ರತೆ, ಸಸ್ಯಗಳ ಬೆಳವಣಿಗೆ, ಪ್ರಾಣಿ, ಕೀಟಗಳ ಮತ್ತು ಮಾನವ ಕುಲದ ಜೀವನ ಮತ್ತು ಆವಾಸ ಸ್ಥಾನಕ್ಕೆ ದೊಡ್ಡ ಬೆದರಿಕೆಯಾಗಿದೆ. ಆದ್ದರಿಂದ ಮಣ್ಣನ್ನು ಉಳಿಸುವತ್ತ ಗಮನ ಹರಿಸಬೇಕಿದೆ ಎಂದು ಹೇಳಿದರು.


    ಕೃಷಿ ಅಧಿಕಾರಿ ಯು.ಎಂ.ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂಮಿಯಲ್ಲಿ ವಿವಿಧ ಮಾಲಿನ್ಯದಿಂದ ಮಣ್ಣು ಕಲುಷಿತವಾಗಿ ಪೋಷಕಾಂಶದ ಮಟ್ಟ ಕ್ಷೀಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.


    ಇತ್ತೀಚಿನ ದಿನಗಳಲ್ಲಿ ಕೈಗಾರಿಕೆಗಳು ಸೇರಿದಂತೆ ಅನೇಕ ರೈತರು ವಿಷಪೂರಿತ ರಾಸಾಯನಿಕ ವಸ್ತುಗಳನ್ನು ಮಣ್ಣಿಗೆ ಬೆರೆಸುತ್ತಿದ್ದಾರೆ. ಇದರಿಂದ ಮಣ್ಣಿನ ಆರೋಗ್ಯ ಕೆಡುವುದಲ್ಲದೆ ಮನುಷ್ಯನ ಆರೋಗ್ಯವೂ ಕೆಡುತ್ತಿದೆ. ಮಣ್ಣು ಗುಣಮಟ್ಟ ಕಳೆದುಕೊಂಡರೆ ಉತ್ತಮವಾದ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಮಣ್ಣಿನಲ್ಲಿ ಎರೆಹುಳು ಸೇರಿದಂತೆ ಇನ್ನಿತರ ಜೀವಜಂತು ಹುಳುಗಳೆಲ್ಲವು ನಾಶವಾಗುತ್ತಿದೆ. ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರು ಪಣ ತೊಡಬೇಕಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚಾಗಿ ಬಳಸಬೇಕು. ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಗಟ್ಟಬೇಕು ಎಂದು ಸಲಹೆ ನೀಡಿದರು.


    ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಕಪ್ಪ, ಲೆಕ್ಕ ಸಹಾಯಕ ಸಿ.ಪಿ.ನವೀನ್, ತಾಂತ್ರಿಕ ಸಹಾಯಕ ಶಾಫಿಯ, ನೌಕರ ರಂಜಿತ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts