More

    3 ತಿಂಗಳಲ್ಲೇ ಹದಗೆಟ್ಟ ಹಾದಿ

    ಹಳಿಯಾಳ: ಮೂರು ತಿಂಗಳ ಹಿಂದಷ್ಟೇ ನಿರ್ವಣಗೊಂಡ ರಸ್ತೆ ಇದೀಗ ಸಂಚರಿಸಲು ಅಯೋಗ್ಯವಾಗಿದೆ, ಹಾಕಿದ ಡಾಂಬರು ಕೈಯಿಂದ ಕಿತ್ತರೂ ಎದ್ದು ಬರುತ್ತದೆ. ಅಷ್ಟು ಕಳಪೆಯಾಗಿದೆ ರಿಪೇರಿ ಕೆಲಸ. ಹೀಗೆ ಇರುವುದು ಹಳಿಯಾಳ ತಾಲೂಕಿನ ಅರ್ಲವಾಡ -ದುಸಗಿಯ ಜನತಾ ಪ್ಲಾಟ್ ಸಂಪರ್ಕ ರಸ್ತೆ.
    ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ ಹಂತ 3ರ ತಾಲೂಕಿನ ರಾಜ್ಯ ಹೆದ್ದಾರಿ 93ರಿಂದ ಅರ್ಲವಾಡ ವಾಯಾ ದುಸಗಿ ಮತ್ತು ಜನತಾ ಪ್ಲಾಟ್​ವರೆಗಿನ 6.75 ಕಿಮೀ ರಸ್ತೆ ನಿರ್ವಣಕ್ಕೆ 4,82,55,000 ರೂಪಾಯಿ ಅನುದಾನ ಬಿಡುಗಡೆಯಾಗಿತ್ತು. ಇದರಲ್ಲಿ ರಸ್ತೆ ಮತ್ತು ಸಿಡಿ (ಕ್ರಾಸ್ ಗಟಾರ) ಒಳಗೊಂಡಿದೆ.
    ಕಾಮಗಾರಿ ನಡೆಸಿರುವ ಕುಮಟಾದ ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರಿಗೆ ರಸ್ತೆ ನಿರ್ಮಾಣ ಮತ್ತು ನಿರ್ವಹಣಾ ಅವಧಿಯನ್ನು 2022ರ ಮೇ 12ರಿಂದ 2027ರ ಮೇ 11ರವರೆಗೆ ನೀಡಲಾಗಿದೆ. ಇದೀಗ ಕಾಮಗಾರಿ ಆರಂಭಗೊಂಡು ಮೂರು ತಿಂಗಳೂ ಕಳೆದಿಲ್ಲ. ರಸ್ತೆ ಮೇಲಿನ ಡಾಂಬರು ಕಿತ್ತು ತಗ್ಗು-ಗುಂಡಿಗಳು ಬೀಳಲಾರಂಭಿಸಿವೆ. ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಕಲ್ಲುಗಳು ಕಿತ್ತು ಬೀಳುತ್ತಿವೆ. ವಾಹನ ಸವಾರರು ಹಾಗೂ ಪ್ರಯಾಣಿಕರು ಕಳಪೆ ಕಾಮಗಾರಿಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ.
    ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಕುರಿತು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರು, ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ. 5 ವರ್ಷಗಳ ಕಾಲ ನಿರ್ವಹಣೆ ಇದೆ. ತಗ್ಗು-ಗುಂಡಿ ಬಿದ್ದು ರಸ್ತೆ ಹಾಳಾಗಿರುವಲ್ಲಿ ದುರಸ್ತಿ ಮಾಡಲಾಗುವುದು ಎಂಬ ಹಾರಿಕೆಯ ಉತ್ತರ ನೀಡುತ್ತಾರೆ. ಇದನ್ನು ನೋಡಿದರೆ, ನಿರ್ವಹಣೆ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ನೀಡುವುದು ಯಾವ ಉದ್ದೇಶಕ್ಕೆ ಎಂಬ ಪ್ರಶ್ನೆ ಉದ್ಭವಿಸಿದೆ ಎನ್ನುತ್ತಾರೆ ಗ್ರಾಮಸ್ಥರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts