More

    ಬಂಧಿತರ ಬಿಡುಗಡೆಗೊಳಿಸದಿದ್ದರೆ ತೀವ್ರ ಹೋರಾಟ, ಅಂಗನವಾಡಿ ನೌಕರರ ಎಚ್ಚರಿಕೆ

    ಕುಷ್ಟಗಿ: ಸಿಐಟಿಯುನ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿಹಾಗೂ ಬಿಸಿಯೂಟ ನೌಕರರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಹಾಗೂ ಬಂಧಿತರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಅಂಗನವಾಡಿ ನೌಕರರು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಚಿತ್ತರಂಜನ್‌ಗೆ ಮಂಗಳವಾರ ಸಲ್ಲಿಸಿದರು.

    ಬಳಿಕ ಮಾತನಾಡಿದ ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಕಲಾವತಿ ಮೇಣೆಧಾಳ, ಬಿಸಿಯೂಟ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟದ ನೇತೃತ್ವ ವಹಿಸಿರುವ ಸಿಐಟಿಯುವ ರಾಜ್ಯಾಧ್ಯಕ್ಷೆ ನೌಕರರ ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಆದರೆ, ಪೊಲೀಸರು ಅವರನ್ನು ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕುವ ಕಾರ್ಯ ಮಾಡಿದ್ದಾರೆ. ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಅಂಗನವಾಡಿ ನೌಕರರ ಸಂಘದಿಂದ ಪ್ರತಿ ತಾಲೂಕಿನಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮಹಿಳಾ ಸಂಘದ ಕಾರ್ಯಕರ್ತೆ ಶಾರದಾ ಕಟ್ಟಿಮನಿ, ಪ್ರಮುಖರಾದ ತಾಜುದ್ದೀನ್ ದಳಪತಿ, ನೌಕರರಾದ ಮಲ್ಲಮ್ಮ ಗೌಡರ್, ರೇಣುಕಾ ಮನ್ನೇರಾಳ, ವಿಜಯಲಕ್ಷ್ಮಿಕುಷ್ಟಗಿ, ಶಾರದಾ ಹುಲಸಗೇರಿ, ಶಿವಮ್ಮ ಗದ್ದಿ ಇತರರಿದ್ದರು.

    ಪರಸ್ಪರ ವಾಗ್ವಾದ
    ಮನವಿ ಸಲ್ಲಿಸುವುದಕ್ಕೂ ಮುನ್ನ ಪೊಲೀಸರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ಕಲಾವತಿ ಮೇಣೆಧಾಳ, ಭಾರತ್ ಬಂದ್ ವೇಳೆ ಎಲ್ಲ ಕಡೆ ಮೆರವಣಿಗೆಗೆ ಅವಕಾಶ ನೀಡಿದರೂ ಇಲ್ಲಿ ಮಾತ್ರ ಅವಕಾಶ ನೀಡಲಿಲ್ಲ. ಮೆರವಣಿಗೆ ಹೊರಟ ವೇಳೆ ಮಹಿಳೆಯರೂ ಎಂಬುದನ್ನೂ ಲೆಕ್ಕಿಸದೆ ಅವಮಾನಿಸುವ ರೀತಿಯಲ್ಲಿ ಬಂಧಿಸುವ ಯತ್ನ ಮಾಡಲಾಯಿತು. ವೇತನ ವಿಳಂಬ ಇತರ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುವ ನೌಕರರನ್ನು ಗೂಂಡಾಗಳಂತೆ ಕಂಡು ಅನುಚಿತ ವರ್ತಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಎಸ್‌ಐ ಚಿತ್ತರಂಜನ್, ಬಂದ್ ವೇಳೆ ಆ ರೀತಿ ವರ್ತಿಸಬಾರದಿತ್ತು. ಅದಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದೂ ಆಗಿದೆ. ಪುನಃ ಅದೇ ವಿಚಾರವನ್ನು ಪ್ರಸ್ತಾಪಿಸುವುದು ಸರಿ ಅಲ್ಲ ಎಂದರು. ಘಟನೆ ನಂತರ ಈ ರೀತಿ ಹೇಳುವುದು ಸರಿಯಲ್ಲ. ತಪ್ಪು ಮಾಡಿ ಕ್ಷಮೆ ಕೇಳುವ ಬದಲು ಪರಾಮರ್ಶಿಸಬೇಕು ಎಂದು ನೌಕರರೆಲ್ಲ ಧ್ವನಿಗೂಡಿಸಿದರು. ಈ ವೇಳೆ ಪಿಎಸ್‌ಐ ಹಾಗೂ ನೌಕರರ ಮಧ್ಯೆ ವಾಗ್ವಾದ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts