More

    ಇಂದಿರಾ ಕ್ಯಾಂಟೀನ್ ಉದ್ಘಾಟನೆಗೂ ಮುನ್ನವೇ ಪಾಳು

    ರಾಣೆಬೆನ್ನೂರ: ಇಂದಿರಾ ಕ್ಯಾಂಟೀನ್ ಯೋಜನೆಯ ಊಟ, ಉಪಾಹಾರ ಮೂರು ವರ್ಷವಾದರೂ ವಾಣಿಜ್ಯ ನಗರಿಯ ಬಡವರಿಗೆ ದಕ್ಕಿಲ್ಲ. ಅಲ್ಲದೆ, ಕಟ್ಟಡ ಉದ್ಘಾಟನೆಯಾಗದೆ ಪಾಳು ಬಿದ್ದಿದೆ.

    2017ರಲ್ಲಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೊಳಿಸಿದ್ದರು. ಇತರೆಡೆ ಕೋವಿಡ್​ಗೂ ಮುನ್ನ ಇಂದಿರಾ ಕ್ಯಾಟೀನ್ ಆರಂಭಗೊಂಡಿದ್ದವು. ಆದರೆ, ರಾಣೆಬೆನ್ನೂರನಲ್ಲಿ ಕಟ್ಟಡ ಸಿದ್ಧವಾಗಿದ್ದರೂ ಕ್ಯಾಂಟೀನ್ ಆರಂಭವಾಗಿರುವುದು ಬಡಜನರ ಆಕ್ರೋಶಕ್ಕೆ ಕಾರಣವಾಗಿದೆ.

    ನಗರಕ್ಕೆ ಎರಡು ಕ್ಯಾಂಟೀನ್​ಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿತ್ತು. ನಿತ್ಯವೂ ಸಾವಿರಾರು ಜನರು ಓಡಾಡುವ ಇಲ್ಲಿನ ತರಕಾರಿ ಮಾರುಕಟ್ಟೆ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಪಕ್ಕದ ಪಿ.ಬಿ. ರಸ್ತೆ ಸಮೀಪದಲ್ಲಿ ಕ್ಯಾಂಟೀನ್ ನಿರ್ವಿುಸಲು ಸ್ಥಳ ಗುರುತಿಸಲಾಗಿತ್ತು. ತರಕಾರಿ ಮಾರುಕಟ್ಟೆಯಲ್ಲಿ ಕಟ್ಟಡ ನಿರ್ವಣಕ್ಕೆ ತಳಪಾಯ ಹಾಕಿ ವರ್ಷಗಳೇ ಉರುಳಿವೆ. ಆದರೆ, ಕಟ್ಟಡ ಮಾತ್ರ ತಲೆ ಎತ್ತಿಲ್ಲ. ಗ್ರಾಮೀಣ ಪೊಲೀಸ್ ಠಾಣೆ ಪಕ್ಕದಲ್ಲಿ ಕಟ್ಟಡ ನಿರ್ವಿುಸಿ ಬೀಗ ಹಾಕಲಾಗಿದೆ ಹೊರತು ಈವರೆಗೂ ಊಟ ವಿತರಣೆಯಾಗಿಲ್ಲ.

    ವಿಳಂಬವೇಕೆ?: ಇಂದಿರಾ ಕ್ಯಾಂಟೀನ್ ನಿರ್ಮಾಣ ಕುರಿತು ಅಧಿಕಾರಿಗಳನ್ನು ಕೇಳಿದರೆ ಮೂಲಸೌಲಭ್ಯಗಳ ಕೊರತೆಯಿಂದ ತಡವಾಗಿದೆ ಎನ್ನುತ್ತಿದ್ದಾರೆ. ಆದರೆ, ಗುತ್ತಿಗೆದಾರರು ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ ಎಂಬುದು ಜನರ ಆರೋಪವಾಗಿದೆ.

    ವಿಪರ್ಯಾಸವೆಂದರೆ ಪಿ.ಬಿ. ರಸ್ತೆ ಬದಿ ಕ್ಯಾಂಟೀನ್ ನಿರ್ವಿುಸಿ ವರ್ಷವಾದರೂ ಉದ್ಘಾಟನೆ ಮಾಡಿಲ್ಲ. ಹೀಗಾಗಿ ಒಳಗಿರುವ ವಸ್ತುಗಳು ಧೂಳು ತಿನ್ನುತ್ತ ಬಿದ್ದಿವೆ. ಅಧಿಕಾರಿಗಳ ನಿರ್ಲಕ್ಷ್ಯಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಹಾಳಾಗುತ್ತಿವೆ. ನಗರದಲ್ಲಿ ಇಂದಿರಾ ಕ್ಯಾಂಟೀನ್ ಯಾವಾಗ ಪ್ರಾರಂಭವಾಗುತ್ತವೆಯೋ ಎಂದು ಬಡವರು ಕಾಯುತ್ತಿದ್ದಾರೆ. ಇನ್ನು ಮುಂದಾದರೂ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಿ ಕ್ಯಾಂಟೀನ್ ಆರಂಭಿಸಬೇಕಿದೆ.

    ಅನೈತಿಕ ಚಟುವಟಿಕೆ ತಾಣ

    ಪಿ.ಬಿ. ರಸ್ತೆ ಬದಿಯ ಕ್ಯಾಂಟೀನ್ ಸುತ್ತಲೂ ಗಿಡಗಂಟಿಗಳು ಬೆಳೆದು ಹಾಳು ಕೊಂಪೆಯಾದಂತಾಗಿದೆ. ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ರಾತ್ರಿಯಾದರೆ ಸಾಕು ಮದ್ಯಪ್ರಿಯರು, ಜೂಜುಕೋರರು, ಅನೈತಿಕ ಚಟುವಟಿಕೆ ತಾಣವಾಗುತ್ತಿದೆ. ಗೇಟ್ ಎದುರಿಗೆ ಕೆಲವರು ಗೂಡಂಗಡಿ ಹಾಕಿಕೊಂಡಿದ್ದಾರೆ. ಇದರಿಂದ ಕ್ಯಾಂಟೀನ್ ಇದೆಯೋ, ಇಲ್ಲವೋ ಎಂಬ ವಾತಾವರಣ ನಿರ್ವಣವಾಗಿದೆ. ಹಂದಿ, ನಾಯಿಗಳು ಕ್ಯಾಂಟೀನ್ ಆವರಣದಲ್ಲಿಯೇ ವಾಸಿಸುತ್ತಿವೆ. ಆದರೆ, ಈ ಕುರಿತು ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಮಾತ್ರ ನಿದ್ದೆಗೆ ಜಾರಿದಂತಿದೆ.

    ಪಿ.ಬಿ. ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ತರಕಾರಿ ಮಾರುಕಟ್ಟೆಯಲ್ಲಿ ಕಟ್ಟಡ ಕಾಮಗಾರಿ ಇನ್ನೂ ಆಗಬೇಕಿದೆ. ಆದರೆ, ಕೋವಿಡ್​ನಿಂದಾಗಿ ವಿಳಂಬವಾಗಿದೆ. ಈ ವಿಷಯವನ್ನು ಸರ್ಕಾರಕ್ಕೆ ತಿಳಿಸಿದ್ದು, ಸೂಚನೆ ಬಂದ ಬಳಿಕ ಕ್ಯಾಂಟೀನ್ ಆರಂಭಿಸಲಾಗುವುದು.
    | ಡಾ. ಮಹಾಂತೇಶ, ನಗರಸಭೆ ಆಯುಕ್ತ

    ಇಂದಿರಾ ಕ್ಯಾಂಟೀನ್ ಘೊಷಿಸಿದ ಕೂಡಲೆ ಕಡಿಮೆ ಬೆಲೆಯಲ್ಲಿ ಊಟ ಸಿಗುತ್ತದೆ ಎಂದು ನಂಬಿದ್ದೆವು. ಆದರೆ, ಮೂರು ವರ್ಷವಾದರೂ ಕ್ಯಾಂಟೀನ್ ಆರಂಭವಾಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ತರಕಾರಿ ಮಾರುಕಟ್ಟೆಯ ಕ್ಯಾಂಟೀನ್ ಆದರೂ ಬೇಗ ಆರಂಭಿಸಿದರೆ, ಬಡವರಿಗೆ ಹಾಗೂ ಚಿಕ್ಕಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ.
    | ರಾಮಚಂದ್ರ ತಾಳೂರು, ರಾಣೆಬೆನ್ನೂರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts