More

    ದೇರೆಬೈಲ್ ಬಳಿ ಬರೆ ಕುಸಿತ ಭೀತಿ

    ಮಂಗಳೂರು: ನಗರದ ದೇರೆಬೈಲ್ ಬಳಿ ಕಳೆದ ಮಳೆಗಾಲದಲ್ಲಿ ಬರೆ ಕುಸಿದು ಕೆಳಭಾಗದಲ್ಲಿರುವ ವಸತಿ ಸಮುಚ್ಚಯದ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದ ಘಟನೆ ಮತ್ತೆ ಮರುಕಳಿಸುವ ಭೀತಿ ಎದುರಾಗಿದೆ.

    ಕುಂಟಿಕಾನದಿಂದ ಕಾವೂರು ಕಡೆಗೆ ಬರುವ ರಸ್ತೆಯ ಹರಿಪದವು ಕ್ರಾಸ್ ಬಳಿ ಇರುವ ಎಸ್ಸೆಲ್ ಹೈಟ್ಸ್ ವಸತಿ ಸಮುಚ್ಚಯದ ಹಿಂಬದಿ ಬರೆ ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದು ವಸತಿ ಸಮುಚ್ಚಯದ ನಿವಾಸಿಗಳು ಮನೆ ಬಿಟ್ಟು ಹೊರ ಹೋಗುವಂತೆ ಮಾಡಿತ್ತು. ಇಲ್ಲಿನ ಪರಿಸರದ ನಿವಾಸಿಗಳಲ್ಲೂ ಭಯದ ವಾತಾವರಣ ಸೃಷ್ಟಿಸಿತ್ತು.

    ಇಲ್ಲಿ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದಾಗಲೇ ಬರೆ ಕುಸಿದು ಮೂವರು ಪ್ರಾಣ ಕಳೆದುಕೊಂಡಿದ್ದರು. ಸಮರ್ಪಕವಾಗಿ ರಕ್ಷಣಾ ಗೋಡೆ ನಿರ್ಮಿಸದ ಕಾರಣ ಕಳೆದ ವರ್ಷ ಮತ್ತೆ ಕುಸಿಯಲಾರಂಭಿಸಿದೆ. ಪ್ರಸ್ತುತ ರಕ್ಷಣಾ ಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಪೂರ್ಣಗೊಂಡಿಲ್ಲ.

    ರಕ್ಷಣಾ ಗೋಡೆ ಅಗತ್ಯ: ವಸತಿ ಸಮುಚ್ಛಯದ ಆವರಣದ ಹೊರಗಿನ ಪ್ರದೇಶದಲ್ಲಿ ಕಳೆದ ಮಳೆಗಾಲದಲ್ಲಿ ಮಳೆ ನೀರು ಬೀಳದಂತೆ ತಾತ್ಕಾಲಿಕವಾಗಿ ಟರ್ಪಾಲು ಹೊದೆಸಿ ಇಡಲಾಗಿದೆ. ಬಿಸಿಲಿನ ಕಾವಿಗೆ ಅದು ಅಲ್ಲಲ್ಲಿ ತೂತು ಬಿದ್ದಿದೆ. ಮಳೆಗಾಲ ಆರಂಭವಾದರೆ ಮಳೆ ನೀರು ಹೋಗಿ ಮಣ್ಣು ಮೆದುವಾಗಿ ಬರೆ ಕುಸಿಯುವ ಭೀತಿಯಲ್ಲಿದೆ. ಇಲ್ಲಿಯೂ ರಕ್ಷಣಾ ಗೋಡೆ ನಿರ್ಮಾಣ ಮಾಡುತ್ತಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಕಡಿಮೆ ಇತ್ತು.

    ರಸ್ತೆ ಕಡಿತಗೊಳ್ಳುವ ಸಾಧ್ಯತೆ: ಬರೆ ಕುಸಿದರೆ ಕುಂಟಿಕಾನ-ಕಾವೂರು ರಸ್ತೆಯಿಂದ ಹರಿಪದವು ಮೂಲಕ ಯೆಯ್ಯಡಿಗೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಕಡಿತಗೊಳ್ಳುವ ಸಾಧ್ಯತೆ ಇದೆ. ಈ ರಸ್ತೆ ಬರೆಯ ಮೇಲ್ಭಾಗದಿಂದ ಹಾದು ಹೋಗುತ್ತದೆ. ಮಣ್ಣು ಮೆದುವಾಗಿರುವಾಗ ವಾಹನಗಳು ಸಂಚರಿಸುವಾಗ ಮಳೆಗಾಲದಲ್ಲಿ ಕುಸಿದು ಬೀಳುವ ಎಲ್ಲ ಲಕ್ಷಣಗಳಿದ್ದು, ಕಳೆದ ವರ್ಷ ಮಳೆಗಾಲದಲ್ಲಿ ಈ ರಸ್ತೆ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಈ ವರ್ಷವೂ ಅದೇ ರೀತಿಯಲ್ಲಿ ವಾಹನಗಳು ಸಂಚರಿಸಲು ಅವಕಾಶ ನೀಡದೆ ಇರುವುದು ಒಳಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

    ವಸತಿ ಸಮುಚ್ಛಯದಲ್ಲಿ ಸುಮಾರು 75ಕ್ಕೂ ಅಧಿಕ ಮನೆಗಳಿದ್ದು, ಕಳೆದ ವರ್ಷ ರಾತ್ರಿ ವೇಳೆ ಇದರ ಹಿಂಬದಿ ಬರೆ ಕುಸಿದು ಬಿದ್ದಿತ್ತು. ಇಲ್ಲಿ ಪಾರ್ಕಿಂಗ್ ಮಾಡಿದ್ದ ಹಲವು ವಾಹನಗಳು ಜಖಂಗೊಂಡಿದ್ದವು. ಬರೆ ರಾತ್ರಿ ವೇಳೆ ಕುಸಿದು ಬಿದ್ದಿದ್ದರಿಂದ ಯಾರಿಗೂ ಅಪಾಯ ಸಂಭವಿಸಿರಲಿಲ್ಲ. ಹಲವು ಲೋಡುಗಳಷ್ಟು ಮಣ್ಣು ಕುಸಿದು ಬಿದ್ದಿರುವುದನ್ನು ಬಳಿಕ ತೆರವು ಮಾಡಲಾಗಿತ್ತು.

    ಈ ಸಂದರ್ಭ ಇದರಲ್ಲಿ ವಾಸವಿದ್ದ ನಿವಾಸಿಗಳೆಲ್ಲರೂ ಹೊರಗಡೆ ಓಡಿ ಬಂದಿದ್ದರು. ಬೆಳಗ್ಗೆ, ಮಧ್ಯಾಹ್ನ ತಿಂಡಿ, ಊಟಕ್ಕೆ ಹೋಟೆಲ್‌ಗಳನ್ನು ಆಶ್ರಯಿಸಬೇಕಾಯಿತು. ಇನ್ನು ಕೆಲವರು ಸ್ನೇಹಿತರ, ಸಂಬಂಧಿಕರ ಮನೆಗೆ ಹೋಗಿ ಆಶ್ರಯ ಪಡೆದರು. ಆ ಬಳಿಕ ಮಳೆಗಾಲ ಪೂರ್ಣಗೊಳ್ಳುವ ತನಕ ಭಯದಿಂದಲೇ ವಾಸ ಮಾಡುವಂತಾಗಿತ್ತು. ಮತ್ತೆ ಮಳೆಗಾಲ ಆರಂಭವಾಗುವಾಗ ಬರೆ ಕುಸಿತದ ಭಯ ಕಾಡುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
    ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಅಧಿಕಾರಿಗಳು ಬಂದು ವೀಕ್ಷಿಸಿ ಕಟ್ಟಡ ನಿರ್ಮಾಣ ಮಾಡಿದವರಿಗೆ ನೋಟಿಸ್ ಜಾರಿ ಮಾಡಿದ್ದರು. ಅವರು ರಕ್ಷಣಾ ಗೋಡೆ ಕಟ್ಟಿ ಕೊಡುವುದಾಗಿ ಹೇಳಿ ಕಾಮಗಾರಿ ಆರಂಭಿಸಿದ್ದಾರೆ. ಆದರೆ ಇನ್ನೂ ಪೂರ್ಣಗೊಂಡಿಲ್ಲ.

    ಬರೆ ಕುಸಿತ ಜಾಗ ಖಾಸಗಿ ಸ್ಥಳ. ವಸತಿ ಸಮುಚ್ಚಯದವರು ರಕ್ಷಣಾ ಗೋಡೆ ಕಟ್ಟುತ್ತಿದ್ದಾರೆ. ಅದರ ಬಲಭಾಗಕ್ಕೆ ಇರುವ ಜಾಗದ ಮಾಲೀಕರು ಮರಳು ಚೀಲ ಅಳವಡಿಸಿ, ಟರ್ಪಾಲು ಹಾಕಿ ಮತ್ತೆ ಕುಸಿಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ಮಳೆಗಾಲದಲ್ಲಿ ಬರೆ ಕುಸಿಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು.

    ರಜನಿ ಎಲ್.ಕೋಟ್ಯಾನ್ ಮನಪಾ ಸದಸ್ಯೆ ದೇರೆಬೈಲ್ ಪೂರ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts