More

    ಉಪ ಸಮರಕ್ಕೆ ಶೀಘ್ರ ಅಭ್ಯರ್ಥಿ ಘೋಷಣೆ

    ಬೆಳಗಾವಿ: ಬೆಂಗಳೂರಿನ ರಾಜರಾಜೇಶ್ವರಿ ನಗರ, ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಮುಂದಿನ ಎರಡು ದಿನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ರಾಜಾಧ್ಯಕ್ಷ ನಳಿನಕುಮಾರ್ ಕಟೀಲ್ ಹೇಳಿದ್ದಾರೆ.

    ಶನಿವಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ ನಗರ ಘಟಕದ ನೂತನ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಕುರಿತು ಪಕ್ಷದ ಹಿರಿಯರೊಂದಿಗೆ ಚರ್ಚಿಸಿ, ಘೋಷಣೆ ಮಾಡುತ್ತೇವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.

    ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಹಿಡಿತ ಸಾಧಿಸಲು ತಯಾರಿ ಕುರಿತು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

    ಸಿಬಿಐ ದುರುಪಯೋಗ ಆಗಿಲ್ಲ: ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿದೆ. ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಲವರ ಮೇಲೆ ದಾಳಿಯಾಗಿದೆ. ವೈ.ಎಸ್.ಜಗನ್ನಾಥ ರೆಡ್ಡಿ, ದಿ.ಜಯಲಲಿತಾ, ಲಾಲು ಪ್ರಸಾದ್ ಯಾದವ್ ಸೇರಿ ಘಟಾನುಘಟಿಗಳು ಜೈಲಿಗೆ ಹೋಗಿದ್ದಾರೆ. ಸಿಬಿಐ ದುರುಪಯೋಗದ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರಿಸಲಿ ಎಂದು ಕಟೀಲ್ ವಾಗ್ದಾಳಿ ನಡೆಸಿದರು.

    ತಪ್ಪು ಮಾಡಿಲ್ಲ ಎಂದರೆ ಭಯ ಏಕೆ?

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ತಪ್ಪು ಮಾಡಿಲ್ಲ ಅಂದ ಮೇಲೆ ಭಯ ಏಕೆ ಪಡಬೇಕು. ನಾನು ಯಾರಿಗೂ ಹೆದರಲ್ಲ. ನಾನು ಬಂಡೆ ಎಂದು ಹೇಳುತ್ತ ಜೈಲಿಗೆ ಹೋಗುವಾಗ ಮತ್ತು ಬರುವಾಗ ಜನರನ್ನು ಸೇರಿಸಿಕೊಂಡು ಮೆರವಣಿಗೆ ಮಾಡಿಸಿಕೊಂಡು ಓಡಾಡುವವರಿಗೆ ಭಯವೇಕೆ ಎಂದ ನಳಿನಕುಮಾರ ಕಟೀಲ್ ಅವರು, ಕಾನೂನು ತನಿಖೆ ಎದುರಿಸಲಿ ಎಂದು ಸವಾಲೆಸೆದರು.

    ಉತ್ತರ ಕರ್ನಾಟಕ ಭಾಗದ ಪ್ರಮುಖ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತು ಯಾವುದೇ ಚರ್ಚೆ, ಬೆಳವಣಿಗೆ ನಡೆದಿಲ್ಲ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ತಾವಾಗಿಯೇ ಪಕ್ಷಕ್ಕೆ ಬರಲು ಮುಂದೆ ಬಂದರೆ ಸ್ವಾಗತಿಸುತ್ತೇವೆ. ನಾವಾಗಿಯೇ ಪಕ್ಷಕ್ಕೆ ಕರೆಯುವ ಪ್ರಶ್ನೆಯೇ ಇಲ್ಲ.
    | ನಳಿನಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಈ ಬಾರಿ ಯುವ ಸಮುದಾಯಕ್ಕೆ ಅವಕಾಶ ನೀಡಿದರೆ ಸಂತೋಷ. ನಾನು ರಾಜಕೀಯ ನಿವೃತ್ತಿ ಆಗಿಲ್ಲ. ಒಂದು ವೇಳೆ ಪಕ್ಷ ನಿರ್ಧಾರ ಕೈಗೊಂಡರೆ ಸ್ಪರ್ಧೆಗೆ ಸಿದ್ಧ.
    | ಡಾ.ಪ್ರಭಾಕರ ಕೋರೆ ರಾಜ್ಯಸಭಾ ಮಾಜಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts