More

    ಸಂತ್ರಸ್ತರ ಖಾತೆಗೆ ಶೀಘ್ರ ಪರಿಹಾರ ಜಮೆ ಮಾಡಿ


    ಭಟ್ಕಳ: ನೆರೆ ಹಾವಳಿಯಿಂದ ಅನೇಕರ ಮನೆ, ಜಮೀನು ಹಾನಿಗೀಡಾಗಿವೆ. ಅವರ ಖಾತೆಗೆ ಶೀಘ್ರವೇ ಪರಿಹಾರ ಹಣ ಜಮಾ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಭಾನುವಾರ ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಆಯೋಜಿಸಿದ್ದ ನೆರೆ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
    ತಹಸೀಲ್ದಾರ್ ಬಿ. ಸುಮಂತ್ ಮಾತನಾಡಿ, ತಾಲೂಕಿನಲ್ಲಿ ನೆರೆ ಹಾವಳಿಯಿಂದ 4483 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿವೆ. ಅದರಲ್ಲಿ 3890 ಸಂತ್ರಸ್ತರಿಗೆ ಹಣ ಬಿಡುಗಡೆ ಮಾಡಲಾಗಿದೆ. 21 ಮನೆಗಳಿಗೆ ಸಂಪೂರ್ಣ ಹಾನಿಯಾಗಿವೆ. 32 ಮನೆಗಳಿಗೆ ತೀವ್ರ ಹಾನಿಯಾಗಿದೆ ಹಾಗೂ 88 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದರು.
    ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಹಾನಿಯ ವರದಿ ಪಡೆದ ಸಚಿವರು, ಕೂಡಲೆ ಸಂತ್ರಸ್ತರ ಖಾತೆಗೆ ಪರಿಹಾರದ ಹಣ ಜಮಾ ಮಾಡುವಂತೆ ಸೂಚಿಸಿದರು. ಅಂಗಡಿ ಹಾಗೂ ದೇವಸ್ಥಾನಗಳಿಗೆ ಹಾನಿಯಾದ ಪ್ರಕರಣಗಳ ವರದಿಯನ್ನು ಕಳುಹಿಸಿಕೊಟ್ಟರೆ ಮುಖ್ಯಮಂತ್ರಿಯಿಂದ ಹೆಚ್ಚುವರಿ ಪರಿಹಾರದ ಹಣ ಬಿಡುಗಡೆ ಮಾಡಿಸಿ ತರುವುದಾಗಿ ಸಚಿವರು ಭರವಸೆ ನೀಡಿದರು.
    ನೆರೆ ಹಾವಳಿಯಿಂದ ದೋಣಿ ಹಾನಿಯಾದ ಪ್ರಕರಣಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆ ಹಾನಿ ಅರ್ಜಿಗಳನ್ನು ಸ್ವೀಕರಿಸದೇ ಇರುವ ಬಗ್ಗೆ ಶಾಸಕರು ಸಭೆಯ ಗಮನಕ್ಕೆ ತಂದಾಗ ಸಚಿವರು, ಮನೆ ಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಸಮಯದಲ್ಲೂ ಅರ್ಜಿ ಸ್ವೀಕಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಸುನೀಲ ನಾಯ್ಕ ಹಲವು ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆದರು.
    ಉಪವಿಭಾಗಾಧಿಕಾರಿ ಮಮತಾ ದೇವಿ, ತಹಸೀಲ್ದಾರ್ ಬಿ. ಸುಮಂತ, ತಾ.ಪಂ. ಇ.ಒ ಪ್ರಭಾಕರ ಚಿಕ್ಕನಮನೆ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ. ಸುರೇಶ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
    ನೀರು ನುಗ್ಗಿದ್ದಕ್ಕೆ ಐಆರ್​ಬಿ, ಎನ್​ಎಚ್​ಎಐ ಹೊಣೆ
    ಭಟ್ಜಳದ ಮಣ್ಕುಳಿ, ಮೂಢಭಟ್ಕಳ ಭಾಗದಲ್ಲಿ ಹೆದ್ದಾರಿ ಪ್ರಾಧಿಕಾರದವರು ಸಮರ್ಪಕ ಚರಂಡಿ ನಿರ್ಮಾಣ ಮಾಡದ ಕಾರಣ ಇಂದು ಪಟ್ಟಣದ 800 ಮನೆಗಳಿಗೆ ನೀರು ನುಗ್ಗಿದೆ. ಇದಕ್ಕೆ ಐಆರ್​ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೇ ನೇರ ಹೊಣೆ ಎಂದು ಶಾಸಕ ಸುನೀಲ ನಾಯ್ಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಗಮನಕ್ಕೆ ತಂದರು.
    ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜೊತೆ ಮಣ್ಕುಳಿ ಭಾಗದಲ್ಲಿ ನೆರೆ ಹಾನಿ ವೀಕ್ಷಣೆ ಮಾಡಿ ಮಾತನಾಡಿದರು.
    ವೆಂಕಟಾಪುರ ಭಾಗದಲ್ಲಿ ಮಾಡಿರುವ ಚರಂಡಿ ಕಾಮಗಾರಿಯನ್ನು ಈ ಭಾಗದಲ್ಲಿ ಮಾಡಬೇಕು. ಪ್ರತಿ ಮಳೆಗಾಲದಲ್ಲಿ ಇಲ್ಲಿನ ಮನೆಗಳಿಗೆ ನೀರು ನುಗ್ಗುತ್ತದೆ. ಆ. 2ರಂದು ನೆರೆ ಬಂದಾಗ ಇಲ್ಲಿ ಆಳೆತ್ತರ ನೀರು ನಿಂತಿತ್ತು. ಆ ಸಮಸ್ಯೆಯನ್ನು ನಾನೂ ಅನುಭವಿಸಿದ್ದೇನೆ. ಕೂಡಲೆ, ಈ ಭಾಗದಲ್ಲಿ ಸಮರ್ಪಕ ಚರಂಡಿ ಮಾಡುವಂತೆ ಸಚಿವರಲ್ಲಿ ನಿವೇದಿಸಿಕೊಂಡರು.
    ಸ್ಥಳೀಯರಾದ ರಾಮನಾಥ ಬಳೆಗಾರ ಹಾಗೂ ಸತೀಶಕುಮಾರ ನಾಯ್ಕ ಇಲ್ಲಿನ ಸ್ಥಿತಿಯ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
    ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೇಗೌಡ ಮಾತನಾಡಿ, ಚರಂಡಿ ನಿರ್ವಿುಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ಆದರೆ, ಇಲ್ಲಿ ರಸ್ತೆ ನಿರ್ವಿುಸಲು ಮಾಲ್ಕಿ ಜಮೀನಿನವರು ಸ್ಥಳ ಬಿಟ್ಟುಕೊಡದ ಕಾರಣ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.
    ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಮಾಡಿ ಸ್ಥಳೀಯರ ಮನವೊಲಿಸಿ ಜಾಗ ಬಿಟ್ಟುಕೊಡಲಾಗುವುದು. ಐಆರ್​ಬಿಯವರು ಶೀಘ್ರದಲ್ಲಿ ಚರಂಡಿ ನಿರ್ವಿುಸುವಂತೆ ಸೂಚಿಸಲು ಸಚಿವರಿಗೆ ತಿಳಿಸಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಲಿಂಗೇಗೌಡ ಅವರು ಐಆರ್​ಬಿ ಅಧಿಕಾರಿ ಶ್ರೀನಿವಾಸ ಅವರಿಗೆ ಮಳೆ ಮುಗಿದ ಮೇಲೆ ಮಣ್ಕುಳಿಯಿಂದ ಮೂಢಭಟ್ಕಳ ನದಿಯ ತನಕ ಚರಂಡಿ ನಿರ್ವಿುಸುವಂತೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts