More

    ಠೇವಣಿ ಹಣ ವಾಪಸ್ ಒದಗಿಸಲು ಆಗ್ರಹ

    ಬೆಳಗಾವಿ: ಅಗ್ರಿ ಗೋಲ್ಡ್ ಕಂಪನಿಯ ಠೇವಣಿ ವಂಚನೆ ಪ್ರಕರಣದ ವಿಚಾರಣೆ ಕಳೆದ 6 ವರ್ಷದಿಂದ ನಡೆಯುತ್ತಲೇ ಇದ್ದು, ವಿನಾಕಾರಣ ವಿಳಂಬ ಮಾಡಲಾಗುತ್ತಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಪ್ರಕರಣ ಇತ್ಯರ್ಥಗೊಳಿಸಿ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಗ್ರಿ ಗೋಲ್ಡ್ ಕಂಪನಿಯ ಗ್ರಾಹಕರು ಮತ್ತು ನೌಕರರು ಬುಧವಾರ ಪ್ರತಿಭಟಿಸಿದರು. ಬಳಿಕ ಡಿಸಿ ಎಂ.ಜಿ. ಹಿರೇಮಠ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ಅಗ್ರಿಗೋಲ್ಡ್ ಕಂಪನಿಯ ಮಾಜಿ ಸಿಬ್ಬಂದಿ ರಾಜೇಶ್ವರಿ ಎಸ್.ಸಿ. ಮಾತನಾಡಿ, ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಎಂಬ ವಿಶ್ವಾಸದಿಂದ ಜನರು ಹೂಡಿಕೆ ಮಾಡಿದ್ದರು. ಆದರೆ, ಇದೀಗ ಸ್ವತಃ ಸರ್ಕಾರವೇ ಜನರ ಸಹಾಯಕ್ಕೆ ಮುಂದೆ ಬರುತ್ತಿಲ್ಲ. ರಾಜ್ಯದ ಜನ 1,700 ಕೋಟಿ ರೂಪಾಯಿಯಷ್ಟು ಠೇವಣಿ ಮಾಡಿದ್ದು, ಸಕಾಲಕ್ಕೆ ಬಡ್ಡಿಯೊಂದಿಗೆ ಠೇವಣಿ ವಾಪಸ್ಸಾಗದ ಕಾರಣಕ್ಕೆ ಈವರೆಗೆ 125 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    1995ರಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಅಗ್ರಿ ಗೋಲ್ಡ್ ಮಲ್ಟಿಸ್ಟೇಟ್ ಕಂಪನಿ ಸ್ಥಾಪನೆಯಾಯಿತು. ಅವಧಿ ಮುಗಿದರೂ ಜನರ ಠೇವಣಿ ಮರಳಿ ನೀಡದ ಹಿನ್ನೆಲೆಯಲ್ಲಿ ಗ್ರಾಹಕರು ನ್ಯಾಯಾಲಯದಲ್ಲಿ ದಾವೆ ಹೂಡಿದರು. ದೇಶದ 7 ರಾಜ್ಯದಲ್ಲಿ ಈ ಕಂಪನಿ ವಂಚಿಸಿದ್ದು, ಹೈದ್ರಾಬಾದ್ ನ್ಯಾಯಾಲಯದಲ್ಲಿ ಕಳೆದ 6 ವರ್ಷದಿಂದ ವಿಚಾರಣೆ ನಡೆಯುತ್ತಿದೆ. ಈವರೆಗೂ ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಆಂಧ್ರ ಸರ್ಕಾರದಂತೆ ರಾಜ್ಯ ಸರ್ಕಾರ ಜವಾಬ್ದಾರಿ ವಹಿಸಿಕೊಂಡು ಸಣ್ಣ ಹೂಡಿಕೆದಾರರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ದಯಾಮರಣಕ್ಕಾಗಿ ಅರ್ಜಿ ಹಾಕಲಾಗುವುದು ಎಂದು ಎಚ್ಚರಿಸಿದರು. ಎಂ.ಕೆ.ಶಿವರಾಜಯ್ಯ, ಸುಮಿತ್ರಾ ಕಲ್ಯಾಣಿ, ಶಿವಲೀಲಾ ಹಂಪಿಹೊಳಿ, ಎಸ್.ಬಿ. ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts