More

    ತಿಂಗಳಾದರೂ ವಾಪಸು ಸಿಕ್ಕಿಲ್ಲ ಠೇವಣಿ ಹಣ

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅನುದಾನದಲ್ಲಿ ಹೊಸ ರೂಪ ಪಡೆಯಲಿರುವ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಮಳಿಗೆದಾರರನ್ನು ಖಾಲಿ ಮಾಡಿಸಿ ಒಂದು ತಿಂಗಳು ಕಳೆದಿದೆ. ಆದರೆ, ಮಳಿಗೆದಾರರಿಂದ ಪಡೆದಿದ್ದ ಭದ್ರತಾ ಠೇವಣಿಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಹುಬ್ಬಳ್ಳಿ) ಇನ್ನೂ ಮರಳಿಸಿಲ್ಲ. ಸುಮಾರು 50 ಲಕ್ಷ ರೂ. ಹಣ ಮಳಿಗೆದಾರರಿಗೆ ಕೊಡಬೇಕಿದೆ.

    ಕರೊನಾದಿಂದ ಸಂಸ್ಥೆಯ ಆದಾಯಕ್ಕೆ ಕೊರತೆಯಾಗಿರುವುದು ನಿಜ. ಸಂಸ್ಥೆಗೆ ನೀಡಿದ್ದ ಲಕ್ಷಾಂತರ ರೂ. ಠೇವಣಿ ಹಣ ವಾಪಸ್ ಸಿಗದೇ ಖಾಲಿ ಮಾಡಿರುವ ಮಳಿಗೆದಾರರು ಹೆಚ್ಚಿನ ಸಂಕಷ್ಟದಲ್ಲಿದ್ದಾರೆ. ಬೇರೆ ವ್ಯಾಪಾರ-ವಹಿವಾಟು ನಡೆಸಲು ಬಂಡವಾಳವಿಲ್ಲದೆ ಪರದಾಡುವ ಪರಿಸ್ಥಿತಿ ಅವರದ್ದು. ಸಾರಿಗೆ ಸಂಸ್ಥೆಯು ನ್ಯಾಯಾಲಯಕ್ಕೆ ಕೇವಿಯಟ್ ಹಾಕಿ ಮಳಿಗೆಗಳನ್ನು ತೆರವುಗೊಳಿಸಿತ್ತು. ಇದೀಗ ಭದ್ರತಾ ಠೇವಣಿ ಮರಳಿಸುವಲ್ಲಿ ತನ್ನದೇನೂ ಉತ್ತರದಾಯಿತ್ವ ಇಲ್ಲವೆಂಬಂತೆ ವರ್ತಿಸುತ್ತಿದೆ. ಇಂದು ಸಿಗಬಹುದು, ನಾಳೆ ಸಿಗಬಹುದು ಎಂದು ಮಳಿಗೆದಾರರು ಎದುರು ನೋಡುತ್ತಿದ್ದಾರೆ. ಇವರು ಜನವರಿ 28ರಂದು ಮಳಿಗೆ ಖಾಲಿ ಮಾಡಿದ್ದಾರೆ.

    ಹಳೇ ಬಸ್ ನಿಲ್ದಾಣದಲ್ಲಿ 32 ವಾಣಿಜ್ಯ ಮಳಿಗೆಗಳಿವೆ. ಇದರಲ್ಲಿ 25 ಮಳಿಗೆಗಳು ವಹಿವಾಟು ನಡೆಸುತ್ತಿದ್ದವು. 30 ಸಾವಿರದಿಂದ 7 ಲಕ್ಷ ರೂಪಾಯಿವರೆಗೆ ಮಾಸಿಕ ಬಾಡಿಗೆ (ಪರವಾನಗಿ ಶುಲ್ಕ) ಮೇಲೆ ಮಳಿಗೆಗಳನ್ನು ಹಂಚಿಕೆ ಮಾಡಲಾಗಿತ್ತು. ಮಳಿಗೆದಾರರಿಂದ ಮಾಸಿಕ ಬಾಡಿಗೆಯ 3ರಿಂದ 8 ಪಟ್ಟು ಹಣವನ್ನು ಭದ್ರತಾ ಠೇವಣಿಯಾಗಿ ಪಡೆಯಲಾಗಿತ್ತು.

    ಕರೊನಾ ಹೊಡೆತ: 2020ರ ಮಾರ್ಚ್​ವರೆಗೆ ವ್ಯಾಪಾರ-ವಹಿವಾಟು ಸರಿಯಾಗಿಯೇ ಇತ್ತು. ಬಳಿಕ ಕರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಲಾಕ್​ಡೌನ್​ನಿಂದ ಎಲ್ಲವೂ ಬಂದ್ ಆಗಿತ್ತು. ಲಾಕ್​ಡೌನ್ ತೆರವುಗೊಂಡು ಬಸ್ ಸಂಚಾರ ಪುನಾರಂಭಗೊಂಡ ನಂತರ ಮೇ ತಿಂಗಳಿಂದ ಹಳೇ ಬಸ್ ನಿಲ್ದಾಣ ಗ್ರಾಮೀಣ ಸಾರಿಗೆ ಬಸ್ ಓಡಾಟಕ್ಕೆ ಸೀಮಿತಗೊಂಡಿದೆ. ಇದರಿಂದ ಮಳಿಗೆದಾರರು ಗಣನೀಯವಾಗಿ ಆದಾಯ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ತಕ್ಕಂತೆ ವಾಕರಸಾ ಸಂಸ್ಥೆ ಮಳಿಗೆಯ ಮಾಸಿಕ ಬಾಡಿಗೆಯಲ್ಲಿ ವಿನಾಯಿತಿ ಕೊಟ್ಟಿದೆ.

    ಸಂಪೂರ್ಣ ಲಾಕ್​ಡೌನ್, ಭಾಗಶಃ ಲಾಕ್​ಡೌನ್ ಹಾಗೂ ಪ್ರಯಾಣಿಕರ ಕೊರತೆಯ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ಮೇ 30ರ ವರೆಗಿನ ಮಳಿಗೆಯ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಜೂನ್ ತಿಂಗಳಲ್ಲಿ ಶೇ. 90 ವಿನಾಯಿತಿ, ಜುಲೈನಲ್ಲಿ ಸಂಪೂರ್ಣ ಮನ್ನಾ, ಆಗಸ್ಟ್​ನಲ್ಲಿ ಮಳಿಗೆಗಳಿಗೆ ಶೇ. 85 ಹಾಗೂ ಉಪಹಾರ ಗೃಹಗಳಿಗೆ ಶೇ. 90ರಷ್ಟು ವಿನಾಯಿತಿ ನೀಡಲಾಗಿತ್ತು. ಸೆಪ್ಟೆಂಬರ್​ನಲ್ಲಿ ಶೇ. 50, ಅಕ್ಟೋಬರ್​ನಲ್ಲಿ ಶೇ. 30, ನವೆಂಬರ್​ನಲ್ಲಿ ಶೇ. 30, ಡಿಸೆಂಬರ್​ನಲ್ಲಿ ಶೇ. 30, 2021ರ ಜನವರಿಯಲ್ಲಿ ಶೇ. 50ರಷ್ಟು ಬಾಡಿಗೆ ನಿಗದಿಪಡಿಸಿತ್ತು.

    35.38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ

    ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಕೆಲ ದಿನಗಳ ಹಿಂದೆ ಹಳೇ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿಯ ಟೆಂಡರ್ ಅಂತಿಮಗೊಳಿಸಿದೆ. ಸ್ಥಳೀಯ ಟ್ರಿನಿಟಿ ಗ್ರುಪ್ಸ್ 35.38 ಕೋಟಿ ರೂ. ವೆಚ್ಚಕ್ಕೆ ಟೆಂಡರ್ ಪಡೆದಿದೆ. ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ ಬಳಿಕ ಹಳೇ ಬಸ್ ನಿಲ್ದಾಣ ಹಸ್ತಾಂತರಕ್ಕೆ ಕಂಪನಿಯು, ವಾಕರಸಾ ಸಂಸ್ಥೆಯನ್ನು ಕೋರಲಿದೆ. ಬಹುತೇಕ ಮಾರ್ಚ್ ಅಂತ್ಯಕ್ಕೆ ನಿರ್ಮಾಣ ಕಾಮಗಾರಿ ಆರಂಭಗೊಳ್ಳಬಹುದು.

    ಕರೊನಾ ಕಾಲದಲ್ಲಿ ಇಂತಿಷ್ಟು ಮಾಸಿಕ ಬಾಡಿಗೆ ತುಂಬಿ ಎಂದು ಸಂಸ್ಥೆ ನಮಗೆ ಒಮ್ಮೆಯೂ ಲಿಖಿತವಾಗಿ ಹೇಳಿಲ್ಲ. ಲೆಕ್ಕ ಶಾಖೆಯವರು ತುಂಬಿಸಿಕೊಳ್ಳಲಿಲ್ಲ. ಒಟ್ಟಾರೆ ನಮ್ಮನ್ನು ಕತ್ತಲೆಯಲ್ಲಿಟ್ಟು ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿ ನಮ್ಮನ್ನು ತೆರವುಗೊಳಿಸಿದ್ದಾರೆ. ಇದೀಗ 1 ತಿಂಗಳಾದರೂ ಭದ್ರತಾ ಠೇವಣಿ ಹಣ ಮರಳಿಸಿಲ್ಲ. ತೆರವುಗೊಳಿಸುವಾಗ ಲಕ್ಷಾಂತರ ರೂ. ಫರ್ನಿಚರ್​ಗಳನ್ನು ಡ್ಯಾಮೇಜ್ ಮಾಡಿಕೊಂಡಿದ್ದೇವೆ.
    ಪ್ರಶಾಂತ ಪಟ್ಟಣಶೆಟ್ಟಿ, ನೋಂದ ಮಳಿಗೆದಾರ

    ಮಳಿಗೆದಾರರಿಗೆ ಅಂದಾಜು 50 ಲಕ್ಷ ರೂ. ಹಣ ಮರಳಿಸಬೇಕು. ಶೀಘ್ರದಲ್ಲೇ ಕೊಡುತ್ತೇವೆ.
    -ಎಚ್. ರಾಮನಗೌಡರ್, ವಿಭಾಗೀಯ ನಿಯಂತ್ರಣಾಧಿಕಾರಿ, ವಾಕರಸಾ ಸಂಸ್ಥೆ ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts