More

    ಶಾಲಾರಂಭಕ್ಕೆ ಸಕಲ ಸಿದ್ಧತೆ

    ಮೃತ್ಯುಂಜಯ ಕಲ್ಮಠ ಗದಗ
    ಕರೊನಾ 3ನೇ ಅಲೆ ಆತಂಕದ ನಡುವೆಯೂ ಸರ್ಕಾರ 6ರಿಂದ 8ನೇ ತರಗತಿಯ ಶಾಲೆಗಳನ್ನು ಸೆ. 6ರಂದು ಆರಂಭಿಸುವುದಾಗಿ ಘೋಷಿಸಿದೆ. ಇದಕ್ಕೆ ಪೂರಕ ಎಂಬಂತೆ ಜಿಲ್ಲೆಯಲ್ಲಿ ಕರೊನಾ ಪಾಸಿಟಿವಿಟಿ ದರವೂ ಕಡಿಮೆ ಆಗಿದೆ. ಇದರಿಂದ, ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ.
    ಈಗಾಗಲೇ 9ರಿಂದ 12ನೇ ತರಗತಿ ಆರಂಭವಾಗಿವೆ. ಈಗ 6ರಿಂದ 8ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸಲು ಸರ್ಕಾರ ಸಜ್ಜಾಗಿದೆ. ಎಲ್ಲ ಶಾಲೆಗಳನ್ನು ಮತ್ತೊಮ್ಮೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಆಯಾ ಶಾಲಾ ವ್ಯಾಪ್ತಿಯಲ್ಲಿ ಮಕ್ಕಳಿಗೆ, ಪಾಲಕರಿಗೆ ಮಾಹಿತಿ ನೀಡಲಾಗುವುದು. ಮಕ್ಕಳು ನೀರು, ಆಹಾರ, ಮಾಸ್ಕ್ ತರುವಂತೆ ತಿಳಿಸಲಾಗುವುದು. ಶಾಲೆಗಳ ಆರಂಭದ ಬಗ್ಗೆ ಗ್ರಾಮದಲ್ಲಿ ಡಂಗುರ ಸಾರಿ, ಪ್ರಮುಖ ಸ್ಥಳಗಳಲ್ಲಿ ಬ್ಯಾನರ್ ಹಾಕಿಸಲಾಗುವುದು. ಮಕ್ಕಳನ್ನು ಶಾಲೆಗೆ ಕಳಿಸುವ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು. ಮಕ್ಕಳಿಗೆ ಕೋವಿಡ್ ಲಕ್ಷಣಗಳಿಲ್ಲ ಎಂದು ಬರೆದುಕೊಡುವುದು ಕಡ್ಡಾಯ ಎಂದು ಡಿಡಿಪಿಐ ಬಸವಲಿಂಗಪ್ಪ ತಿಳಿಸಿದ್ದಾರೆ.
    9ರಿಂದ 12ನೇ ತರಗತಿ ಆರಂಭಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಶಾಲೆಗಳಲ್ಲಿ ಮಕ್ಕಳ ಜವಾಬ್ದಾರಿ ನಮ್ಮದು, ಅವರನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳುಹಿಸಿ ಎಂದು ಸರ್ಕಾರ ಮನವಿ ಮಾಡಿಕೊಂಡಿತ್ತು. ಆನ್​ಲೈನ್ ಪಾಠ ಎಲ್ಲರಿಗೂ ಲಭಿಸದ ಕಾರಣ ಮಕ್ಕಳ ಶೈಕ್ಷಣಿಕ
    ಭವಿಷ್ಯ ಮನಗಂಡು ಅನೇಕ ಪಾಲಕರು ಶಾಲೆಗೆ ಕಳಿಸುತ್ತಿದ್ದಾರೆ. ಕರೊನಾ ಪಾಸಿಟಿವಿಟಿ ದರವೂ ಕಡಿಮೆಯಾಗುತ್ತಿರುವುದು ಪಾಲಕರಲ್ಲಿ ಕೊಂಚ ಧೈರ್ಯ ತಂದಿದೆ. ಶಾಲೆಗೆ ಹಾಜರಾಗುವುದು ಕಡ್ಡಾಯವಲ್ಲ, ಆನ್​ಲೈನ್ ಮೂಲಕವೂ ಶಿಕ್ಷಣ ಕಲಿಯಬಹುದು ಎಂದು ಸರ್ಕಾರ ಹೇಳಿದೆ. ಹೀಗಾಗಿ, ಕೆಲವರು ಆನ್​ಲೈನ್ ಶಿಕ್ಷಣ ಸಾಕೆಂದು ಮಕ್ಕಳನ್ನು ಶಾಲೆಗೆ ಕಳಿಸುತ್ತಿಲ್ಲ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

    ಸಂಪೂರ್ಣ ಸ್ಯಾನಿಟೈಸ್: ಕರೊನಾ 2ನೇ ಅಲೆಯಿಂದ 5 ತಿಂಗಳಿಂದ ಬಂದಾಗಿದ್ದ ಶಾಲೆ-ಕಾಲೇಜ್ ಕೊಠಡಿಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ. ಶಾಲೆ ಆರಂಭಕ್ಕೂ ಮುನ್ನ ಸ್ವಚ್ಛತೆಗೆ ಆದ್ಯತೆಗೆ ನೀಡಲಾಗುತ್ತಿದೆ. ಪ್ರತಿಯೊಬ್ಬ ಶಿಕ್ಷಕರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಸೋಂಕು ಇಲ್ಲದಿರುವುದು ಖಚಿತವಾದ ನಂತರವೇ ಶಾಲೆಗೆ ಆಗಮಿಸಲು ಅವಕಾಶ ನೀಡಲಾಗಿದೆ. ಹಾಗಾಗಿ, ಪಾಲಕರು ನೆಮ್ಮದಿಯಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ ಪ್ರವೇಶಕ್ಕೆ ಅವಕಾಶ ನೀಡುವುದು, ದೈಹಿಕ ಅಂತರ ಕಾಪಾಡಿಕೊಂಡು ತರಗತಿಗಳನ್ನು ಆರಂಭಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
    ಆ. 16ರಂದು ಆರಂಭವಾದ 9, 10ನೇ ತರಗತಿ ಮಕ್ಕಳ ದಾಖಲಾತಿಯಲ್ಲಿ ರಾಜ್ಯದಲ್ಲಿ ಗದಗ ಜಿಲ್ಲೆ ತೃತೀಯ ಸ್ಥಾನದಲ್ಲಿದೆ. ಬೆಳಗಾವಿ ವಿಭಾಗದಲ್ಲಿ ಶಿರಸಿ ಪ್ರಥಮ, ಗದಗ ಜಿಲ್ಲೆ ದ್ವಿತೀಯ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 9ನೇ ತರಗತಿಯಲ್ಲಿ 12908, 10ನೇ ತರಗತಿಯಲ್ಲಿ 13611 ವಿದ್ಯಾರ್ಥಿಗಳಿದ್ದಾರೆ. 6ನೇ ತರಗತಿ 19060, 7ನೇ ತರಗತಿ 18666, 8ನೇ ತರಗತಿ 18226 ಸೇರಿ 55,952 ವಿದ್ಯಾರ್ಥಿಗಳಿದ್ದಾರೆ.

    ಪಾಸಿಟಿವಿಟಿ ದರ ಶೇ. 0.06: ಜಿಲ್ಲೆಯಲ್ಲಿ 2 ತಿಂಗಳಿಂದ ಕರೊನಾ ಸೋಂಕಿನ ಪ್ರಮಾಣ ಬಹುತೇಕ ಕಡಿಮೆಯಾಗಿದೆ. ನಿತ್ಯ ಬೆರಳೆಣಿಕೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ ವಾರದಲ್ಲಿ ಕರೊನಾ ಪಾಸಿಟಿವಿಟಿ ದರ ಶೇ. 0.06ರಷ್ಟಾಗಿದೆ. ಆ. 24ರಿಂದ 31ರವರೆಗೆ ಕರೊನಾ ಪರೀಕ್ಷೆಗೊಳಪಟ್ಟ 12368 ಜನರಲ್ಲಿ 8 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿವರೆಗೆ ಸೋಂಕಿನಿಂದ 316 ಜನರು ಮೃತಪಟ್ಟಿದ್ದಾರೆ. 26033 ಜನರಿಗೆ ಸೋಂಕು ತಗುಲಿತ್ತು. 25696 ಜನರು ಗುಣವಾಗಿದ್ದಾರೆ. 11 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಚಿಕ್ಕಮಕ್ಕಳಿಗೆ ಕೆಮ್ಮು, ನೆಗಡಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಚಿಕ್ಕಮಕ್ಕಳಲ್ಲಿ ಶೀತ, ಕೆಮ್ಮು ಮತ್ತು ನೆಗಡಿ ಕಾಣಿಸುತ್ತಿದೆ. ಇವುಗಳಿಂದ 5 ವರ್ಷದೊಳಗಿನ 50ಕ್ಕೂ ಹೆಚ್ಚು ಮಕ್ಕಳು ಬಳಲುತ್ತಿದ್ದಾರೆ. ವಿಶೇಷವಾಗಿ 2 ವರ್ಷದೊಳಗಿನವರಲ್ಲಿ ಕೆಮ್ಮು, ನೆಗಡಿ, ಶೀತ ಕಂಡುಬಂದಿದೆ. ಇವುಗಳಿಂದ ಬಳಲುತ್ತಿರುವ 15ಕ್ಕೂ ಹೆಚ್ಚು ಮಕ್ಕಳ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಗದಗ ಜಿಲ್ಲಾ ಆರೋಗ್ಯ ಇಲಾಖೆಯು ಬೆಂಗಳೂರಿನ ನ್ಯಾಶನಲ್ ಇನ್​ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್​ಐವಿ) ಕಳಿಸುವ ಸಾಧ್ಯತೆಗಳಿದ್ದು, 2-3 ದಿನಗಳಲ್ಲಿ ಫಲಿತಾಂಶ ಬರಲಿದೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಬಹುತೇಕ ಶೂನ್ಯವಾಗಿದೆ. ಹೊರಜಿಲ್ಲೆ ರೋಗಿಗಳಿಂದಾಗಿ ಒಂದೊಂದು ಪಾಸಿಟಿವ್ ಕೇಸ್ ದಾಖಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಚಿಕ್ಕಮಕ್ಕಳಿಗೆ ಜ್ವರ, ಶೀತ, ಕೆಮ್ಮು ಕಾಣಿಸಿಕೊಳ್ಳುತ್ತಿದೆ. ಈ ಕುರಿತು ನಿಗಾ ವಹಿಸುವಂತೆ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.
    | ಡಾ. ಜಗದೀಶ ನುಚ್ಚಿನ, ಜಿಲ್ಲಾ ಸಮೀಕ್ಷಣಾಧಿಕಾರಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts