More

    ಸ್ಮಾರಕಗಳ ಸಂರಕ್ಷಿಸುವ ಕೆಲಸವಾಗಲಿ

    ಕಾನಹೊಸಹಳ್ಳಿ: ರಾಜ್ಯದ 72 ಪಾಳೇಗಾರ ಸಂಸ್ಥಾನಗಳ ಪೈಕಿ ಗುಡೇಕೋಟೆ ಪಾಳೇಗಾರ ಸಂಸ್ಥಾನವೂ ಒಂದಾಗಿದೆ. ಪುರಾತನ ಸ್ಮಾರಕಗಳ ಬಗ್ಗೆ ಪ್ರಜ್ಞೆ ಮೂಡಿಸಿ ಸಂರಕ್ಷಿಸುವ ಕೆಲಸವಾಗಲಿ ಎಂದು ರಾಜ್ಯ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಪುರಾತತ್ವ ಸಹಾಯಕ ನಿರ್ದೇಶಕ ಡಾ.ಮಂಜಾನಾಯ್ಕ ಹೇಳಿದರು.
    ಗುಡೇಕೋಟೆಯಲ್ಲಿ ಶನಿವಾರ ಕರವೇ ಮತ್ತು ಸ್ಥಳೀಯ ಸಂಘಟನೆ ಸಹಯೋಗದಲ್ಲಿ ಎರಡು ದಿನಗಳ ಗುಡೇಕೋಟೆ ಉತ್ಸವದಲ್ಲಿ ಮಾತನಾಡಿ, ಗುಡೇಕೋಟೆ ಗ್ರಾಮಕ್ಕೆ ಶಿಲಾಯುಗದ ಇತಿಹಾಸವಿದೆ. ಇಲ್ಲಿನ ಪರಿಸರ ಶಿಲಾಯುಗದ ಜನರು ವಾಸಿಸಲು ಯೋಗ್ಯವಾಗಿತ್ತು. ಹಾಗಾಗಿ ಹತ್ತಾರು ಸ್ಮಾರಕಗಳನ್ನು ಇಲ್ಲಿ ಕಾಣಬಹುದಾಗಿದೆ. ಬಹುತೇಕ ಸ್ಮಾರಕ ನಶಿಸುವ ಹಂತಕ್ಕೆ ಬಂದಿದ್ದು, ಸಂರಕ್ಷಿಸುವ ಕಾರ್ಯವಾಗಬೇಕಾಗಿದೆ ಎಂದರು.
    ‘ಒನಕೆ ಓಬವ್ವನ ತವರು ಗುಡೇಕೋಟೆ’ ವಿಷಯ ಕುರಿತು ಭೀಮಸಮುದ್ರ ರಂಗನಾಥ ಉಪನ್ಯಾಸ ನೀಡಿ, ನಾಡಿನ ವೀರವನಿತೆ ಒನಕೆ ಓಬವ್ವ ಹುಟ್ಟೂರು ಗುಡೇಕೋಟೆ ಎಂಬುದು ಹೆಮ್ಮೆಯ ಸಂಗತಿ. ಓಬವ್ವಳ ಜನ್ಮವೃತ್ತ ತಿಳಿಸುವ ಕೃತಿಗಳ ಕೊರತೆಯಿದೆ. ಇಲ್ಲಿವರೆಗೂ ಬಂದಿರುವ ಐದಾರು ಕೃತಿಗಳು ಸಹ ಪರಿಪೂರ್ಣವಾಗಿಲ್ಲ. ಪ್ರೊ.ಲಕ್ಷ್ಮಣ್ ತೆಲಗಾವಿ ಮತ್ತು ಭೀಮಣ್ಣ ಗಜಾಪುರ ಅವರ ಕೃತಿಗಳು ಓಬವ್ವಳ ಜನ್ಮದ ಕುರಿತು ಬೆಳಕು ಚೆಲ್ಲುತ್ತವೆ ಎಂದು ಹೇಳಿದರು.
    ಹುಟ್ಟೂರಿನಲ್ಲಿ ವೀರವನಿತೆಯನ್ನು ನೆನಪಿಸುವಂತ ಕಾರ್ಯಗಳಾಗಬೇಕಿದೆ. ಅಲ್ಲದೆ ಸರ್ಕಾರವು ಗ್ರಾಮದಲ್ಲಿ ಓಬವ್ವನ ಪ್ರತಿಮೆ ಸ್ಥಾಪಿಸಿ, ಮುಂದಿನ ವರ್ಷದಿಂದ ಗುಡೇಕೋಟೆ ಉತ್ಸವ ಆಯೋಜಿಸಬೇಕು ಎಂದು ಒತ್ತಾಯಿಸಿದರು.
    ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ್ ಹ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು. ಉತ್ಸವಕ್ಕೆ ಕೂಡ್ಲಿಗಿ ಹಿರೇಮಠದ ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಲಲಿತಮ್ಮ ಗೋವಿಂದಪ್ಪ ಅಧ್ಯಕ್ಷೆತೆ ವಹಿಸಿದ್ದರು.
    ಪಾಳೇಗಾರ ವಂಶಸ್ಥ ಶಿವರಾಜವರ್ಮ, ಒನಕೆ ಓಬವ್ವ ವಂಶಸ್ಥ ಕಹಳೆ ಹನುಮಂತಪ್ಪ, ತಾಪಂ ಮಾಜಿ ಉಪಾಧ್ಯಕ್ಷೆ ವಿಶಾಲಾಕ್ಷಿ ರಾಜಣ್ಣ, ತಾಪಂ ಮಾಜಿ ಸದಸ್ಯ ಶಿವಪ್ರಸಾದ ಗೌಡ, ಕೆಇಬಿ ಗೋವಿಂದಪ್ಪ, ಕರವೇ ಅಧ್ಯಕ್ಷ ಜೆ.ಶಿವಕುಮಾರ್, ಗ್ರಾಪಂ ಸದಸ್ಯ ಎನ್.ಕೃಷ್ಣ, ಶಿಕ್ಷಣ ಇಲಾಖೆ ಅಧೀಕ್ಷಕ ಮಹ್ಮದ್ ರಫಿಕ್, ಹಿರಿಯ ಜಾನಪದ ಗಾಯಕ ಡಿ.ಓ.ಮುರಾರ್ಜಿ, ಉಪನ್ಯಾಸಕ ನಾಗರಾಜ ಕೊಟ್ಟಪ್ಪಗಳ್, ಸೊಸೈಟಿ ಬಸವರಾಜ್, ಪ್ರಾಣೇಶ್ ರಾವ್, ಕೆಇಬಿ ಅಜ್ಜಯ್ಯ, ವೈಬಿಹಟ್ಟಿ ಮಲ್ಲಯ್ಯ, ವಾಟಳ್ ನಾಗರಾಜ್, ಮಡಿವಾಳ ನಾಗರಾಜ್, ನಾಗರಹುಣಿಸೆ ದುರುಗೇಶ್ ಇದ್ದರು.
    ಮೆರಗು ಹೆಚ್ಚಿಸಿದ ಮೆರವಣಿಗೆ: ಗುಡೇಕೋಟೆ ಉತ್ಸವದ ಮೆರವಣಿಗೆಗೆ ಪಾಳೇಗಾರ ವಂಶಸ್ಥ ಶಿವರಾಜವರ್ಮ ಚಾಲನೆ ನೀಡಿದರು. 20ಕ್ಕೂ ಹೆಚ್ಚು ಎತ್ತಿನಗಾಡಿ, 5 ಟ್ರ್ಯಾಕ್ಟರ್‌ಗಳು ಗ್ರಾಮದ ವಿವಿಧ ಸ್ಮಾರಕಗಳ ಸ್ತಬ್ಧ ಚಿತ್ರಗಳನ್ನು ಹೊತ್ತು ಸಾಗಿದವು. ಜಾನಪದ ಕಲಾಮೇಳ ಮತ್ತು ಒನಕೆ ಓಬವ್ವ ಛದ್ಮವೇಷಧಾರಿಗಳು ಗಮನ ಸೆಳೆದರು.

    ಸರ್ಕಾರದ ನೆರವಿಲ್ಲದೆ ಗ್ರಾಮಸ್ಥರ ಸಹಕಾರದಿಂದ ಎರಡು ದಿನಗಳ ಗುಡೇಕೋಟೆ ಉತ್ಸವ ಆಯೋಜನೆ ಮಾಡಿರುವುದು ಸಂತಸ ತಂದಿದೆ. ನಿರಂತರವಾಗಿ ಉತ್ಸವ ಜರುಗಲು ಗ್ರಾಮದ ಜನರ ಜತೆಗೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಲಿ.
    ಶ್ರೀ ಪ್ರಶಾಂತ ಸಾಗರ ಸ್ವಾಮೀಜಿ
    ಹಿರೇಮಠ, ಕೂಡ್ಲಿಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts