More

    ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ: ನಿರಂತರ ಸೀಮೆಎಣ್ಣೆ ಪೂರೈಕೆ ಆಗ್ರಹ

    ಉಡುಪಿ: ಮೀನುಗಾರರು ಪದೇ ಪದೆ ಸಮಸ್ಯೆ ಪರಿಹಾರಕ್ಕಾಗಿ ಹೋರಾಟದ ಹಾದಿ ಹಿಡಿಯುವುದನ್ನು ತಪ್ಪಿಸಲು ಸರ್ಕಾರ ಮೀನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ನಾಡದೋಣಿ ಮೀನುಗಾರರು ಹಾಗೂ ಅವರ ಕುಟುಂಬದವರಿಗೆ ನೆಮ್ಮದಿಯ ಬದುಕು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಹೇಳಿದರು.
    ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಆಶ್ರಯದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಬೃಹತ್ ಹಕ್ಕೊತ್ತಾಯ ಧರಣಿಯಲ್ಲಿ ಮಾತನಾಡಿದರು

    ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಸೀಮೆಎಣ್ಣೆ ಎಲ್ಲ ರಹದಾರಿಯಲ್ಲಿ 15 ದಿನದೊಳಗೆ ಸಿಗುವಂತಾಗಬೇಕು. ರಾಜ್ಯದ ಮೂರು ಜಿಲ್ಲೆಗಳಿಂದ 8030 ಸೀಮೆಎಣ್ಣೆ ರಹದಾರಿಗಳಿದ್ದು, ಪ್ರತಿ ರಹದಾರಿಗಳಿಗೆ 300 ಲೀಟರ್‌ನಂತೆ ಅಗಸ್ಟ್ ತಿಂಗಳಿಂದ 10 ತಿಂಗಳು ನೀಡಲು ಸರ್ಕಾರ ಆದೇಶಿಸಿದೆ. ಮೂರು ತಿಂಗಳವರೆಗೆ ಸೀಮೆಎಣ್ಣೆ ಬಿಡುಗಡೆಯಾಗದೆ ಇತ್ತೀಚೆಗೆ 3000 ಕೆ.ಎಲ್. ಕೇಂದ್ರದಿಂದ ಬಿಡುಗಡೆಯಾಗಿದ್ದು, ಮೀನುಗಾರ ಕುಟುಂಬಗಳಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ ಎಂದರು.

    ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ನಾಡದೋಣಿ ಮೀನುಗಾರಿಕೆಗೆ ಸೀಮೆಎಣ್ಣೆ ಸಮರ್ಪಕವಾಗಿ ಸಿಗುವ ಜತೆ ಸೀಮೆಎಣ್ಣೆ 15 ದಿನದೊಳಗೆ ಎಲ್ಲರಿಗೂ ಸಿಗುವಂತಾಗಬೇಕು. ಮೀನುಗಾರರ ಸಮಸ್ಯೆ ಪರಿಹಾರ ಮಾಡದಿದ್ದರೆ ಮೀನುಗಾರರ ಜತೆ ಸೇರಿ ಕಾಂಗ್ರೆಸ್ ದೊಡ್ಡಮಟ್ಟದ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.


    ಕರ್ನಾಟಕ ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಮಾಜಿ ಶಾಸಕ ಗೋಪಾಲ ಪೂಜಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ ಆರ್.ಕೆ., ಬೈಂದೂರು ವಲಯ ಸಂಘದ ಮಾಜಿ ಅಧ್ಯಕ್ಷ ರಾಮಚಂದ್ರ ಖಾರ್ವಿ, ವಲಯ ಗೌರವಾಧ್ಯಕ್ಷ ಮದನ್ ಕುಮಾರ್, ಮುಖಂಡರಾದ ಪುರಂದರ ಕೋಟ್ಯಾನ್, ಮುಹಮ್ಮದ್ ಅಜೀಜ್, ಯಶವಂತ್ ಖಾರ್ವಿ, ನಗರಸಭೆ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.
    ಮೀನುಗಾರರ ಬೃಹತ್ ಹಕ್ಕೊತ್ತಾಯ ಪ್ರತಿಭಟನೆ ರ‌್ಯಾಲಿ ಉಡುಪಿ ಎಂಜಿಎಂ ಕಾಲೇಜಿನಿಂದ ಜಿಲ್ಲಾಧಿಕಾರಿ ಸಂರ್ಕೀಣಕ್ಕೆ ಆಗಮಿಸಿತು. ಮೀನುಗಾರರು ಭಿತ್ತಿಪತ್ರ ಪ್ರದರ್ಶಿಸಿ ಅಪರ ಜಿಲ್ಲಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts