More

    ಬುಡಕಟ್ಟು ಜನರ ಅಹೋರಾತ್ರಿ ಧರಣಿ ಅಂತ್ಯ

    ಸಾಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಅರಣ್ಯಮೂಲ ಬುಡಕಟ್ಟುಗಳ ಒಕ್ಕೂಟ ಎಸಿ ಕಚೇರಿ ಎದುರು 4 ದಿನಗಳಿಂದ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಶಾಸಕ ಹರತಾಳು ಹಾಲಪ್ಪ ಮಧ್ಯಪ್ರವೇಶದಿಂದ ಸೋಮವಾರ ಅಂತ್ಯಗೊಂಡಿದೆ.

    ಅರಣ್ಯಹಕ್ಕು ಮಾನ್ಯ ಮಾಡುವ ಕ್ರಿಯೆ ಆರಂಭ, ಅರಣ್ಯ ಕಿರುಉತ್ಪನ್ನ ಸಂಗ್ರಹ ಮಾಡಲು ಗಿರಿಜನ ಕುಟುಂಬಗಳಿಗೆ ಗುರುತಿನ ಪತ್ರ ವಿತರಣೆ, ಪೌಷ್ಟಿಕ ಆಹಾರ ಯೋಜನೆ ಪುನರಾರಂಭ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಪ್ರದೇಶವೆಂದು ಶಿವಮೊಗ್ಗ ಜಿಲ್ಲೆಯನ್ನು ಘೊಷಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒಕ್ಕೂಟದ ಪದಾಧಿಕಾರಿಗಳು ಶುಕ್ರವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು.

    ಸೋಮವಾರ ಪರಿಶಿಷ್ಟ ಜನಾಂಗದ ಜಿಲ್ಲಾ ಕಲ್ಯಾಣಾಧಿಕಾರಿ ಅಜ್ಜಪ್ಪ ಭೇಟಿ ನೀಡಿ ಧರಣಿನಿರತರಿಂದ ಮನವಿ ಸ್ವೀಕರಿಸಿ ಕೆಲ ಬೇಡಿಕೆ ಈಡೇರಿಸಲಾಗಿದೆ. ಗುರುತಿನ ಪತ್ರ ಕೊಡಲು ಸರ್ಕಾರದಿಂದ ಮಂಜೂರಾತಿ ಪಡೆಯಲಾಗಿದೆ. ಜೇನುಕೃಷಿ ಕುರಿತು ತರಬೇತಿ ನೀಡಲಾಗುತ್ತಿದೆ. ಉಳಿದ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರೂ ಧರಣಿನಿರತರು ಪ್ರತಿಭಟನೆ ಹಿಂಪಡೆಯದೆ ಎಲ್ಲ ಬೇಡಿಕೆ ಈಡೇರಿಸುವಂತೆ ಪಟ್ಟುಹಿಡಿದರು.

    ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಶಾಸಕ ಹರತಾಳು ಹಾಲಪ್ಪ, ಬುಡಕಟ್ಟು ಜನರು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಗ್ರಾಪಂ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕೆಲ ಆಶ್ವಾಸನೆಗಳನ್ನು ಕೊಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಜನವರಿ ಮೊದಲ ವಾರ ಎಸಿ ಸಮ್ಮುಖದಲ್ಲಿ ಬುಡಕಟ್ಟು ಜನಾಂಗದ ಪ್ರಮುಖರು, ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.

    ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ, ಡಿಎಸ್​ಎಸ್ ಸಂಚಾಲಕ ನಾಗರಾಜ್, ಒಕ್ಕೂಟದ ಪ್ರಮುಖರಾದ ಲಕ್ಷಮ್ಮ, ನರಸಿಂಹ, ಸೀತಾರಾಮ್ ರೈತ ಮುಖಂಡರಾದ ಎನ್.ಡಿ.ವಸಂತಕುಮಾರ್, ಮಂಜಪ್ಪ, ವೈ.ಎನ್.ಹುಬ್ಬಳ್ಳಿ ಇದ್ದರು.

    ತಾಲೂಕು ಮಟ್ಟದಲ್ಲಿ ಈಡೇರುವ ಭರವಸೆಯನ್ನು ಇಲ್ಲಿಯೇ ಬಗೆಹರಿಸಿ, ಡಿಸಿ ಹಂತದ ಬೇಡಿಕೆಯನ್ನು ಅವರ ಹಂತದಲ್ಲಿ ಪೂರ್ಣಗೊಳಿಸುವ ಪ್ರಯತ್ನ ನಡೆಸಲಾಗುತ್ತದೆ. ಕೆಲವು ಬೇಡಿಕೆಗಳು ಸರ್ಕಾರದ ಹಂತದಲ್ಲಿ ಆಗಬೇಕಿದ್ದು ಪ್ರಮುಖರನ್ನು ಒಳಗೊಂಡ ನಿಯೋಗವನ್ನು ಸಿಎಂ ಬಳಿ ಕರೆದೊಯ್ಯಲಾಗುವುದು. ಅಲ್ಲಿವರೆಗೂ ಧರಣಿ ಹಿಂಪಡೆಯುವಂತೆ ಶಾಸಕರು ಮನವಿ ಮಾಡಿದ್ದಾರೆ.

    | ರಾಮಣ್ಣ ಹಸಲರು, ಒಕ್ಕೂಟದ ರಾಜ್ಯ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts