More

    ಭೂ ಸುಧಾರಣಾ ಕಾಯ್ದೆ ವಾಪಸ್‌ಗೆ ಆಗ್ರಹ

    ದಾವಣಗೆರೆ: ರೈತರ ಕೃಷಿ ಭೂಮಿಗೆ ಸಂಬಂಧಿಸಿದಂತೆ ಬಹು ಮುಖ್ಯವಾದ ಭೂ ಸುಧಾರಣಾ ಕಾಯ್ದೆಯನ್ನು ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

    ರಾಜ್ಯ ಸರ್ಕಾರ ಸರ್ಕಾರ ಸದನದಲ್ಲಿ ಎಪಿಎಂಸಿ ಕಾಯ್ದೆ ಹಿಂಪಡೆದಿರುವುದು ಸ್ವಾಗತಾರ್ಹ. ಆದರೆ, ಅತ್ಯಂತ ಅಪಾಯಕಾರಿ ಭೂ ಸುಧಾರಣಾ ಕಾಯ್ದೆಯನ್ನು ವಾಪಸ್ ಪಡೆಯಲು ಪ್ರಯತ್ನಿಸಿಲ್ಲ. ಈ ಸಂಬಂಧ ಕೂಡಲೇ ಕಾರ್ಯೋನ್ಮುವಾಗಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕೃಷಿ ಭೂಮಿ ಅಕ್ಷಯ ಪಾತ್ರೆ ಇದ್ದಹಾಗೆ. ಸಾವಿರಾರು ವರ್ಷಗಳವರೆಗೂ ಊಟ ಕೊಡುತ್ತದೆ. ಇದು ಹಾಳಾದರೆ ಗಂಡಾಂತರ ಬರಲಿದೆ. ಹಾಗಾಗಿ, ಅಂದಿನ ಎಲ್ಲ ಸರ್ಕಾರಗಳು ಕೃಷಿ ಭೂಮಿ ಬಗ್ಗೆ ಮುತುವರ್ಜಿ ವಹಿಸಿ ಜೋಪಾನವಾಗಿಡಲು ಹಾಗೂ ಭೂಮಿಯು ವ್ಯಾಪಾರೀಕರಣ ಆಗದೆ ರೈತರ ಕೈಯಲ್ಲಿರುವಂತೆ ಕಾಯ್ದೆ ಜಾರಿಗೆ ತಂದಿದ್ದರು. 1961ರ ಭೂ ಸುಧಾರಣಾ ಕಾಯ್ದೆ ಆಶಯ ಮತ್ತು ನಿಬಂಧನೆಗಳಿಗೆ ಯಾವುದೇ ಭಂಗ ಬರದಂತೆ ರಾಜ್ಯದ ಮುಖ್ಯಮಂತ್ರಿ ನೋಡಿಕೊಳ್ಳಬೇಕು ಎಂದರು.

    ಭೂ ಸುಧಾರಣಾ ಕಾಯ್ದೆ ವಾಪಾಸ್ ಪಡೆಯುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ತಿಂಗಳು ಪರಿಶೀಲನೆ ಮಾಡುವುದಾಗಿ ಹೇಳಿದ್ದರು. ಈ ಮಾತು ಅನೇಕ ವ್ಯಾಖ್ಯಾನಗಳಿಗೆ ಎಡೆಮಾಡಿಕೊಡುತ್ತದೆ. ಭೂ ವರ್ಗಾವಣೆಯಿಂದ ಪ್ರಸ್ತುತ ಸರ್ಕಾರಕ್ಕೆ 25 ರಿಂದ 30 ಸಾವಿರ ಕೋಟಿ ಆದಾಯ ಬರುತ್ತಿದೆ. ಹಣ ಬರುವುದು ಎಲ್ಲಿ ತಪ್ಪುತ್ತದೆಯೋ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿರಬಹುದು. ರೈತ ಹಾಗೂ ರೈತನ ಭೂಮಿ ಮುಖ್ಯವಾಗಬೇಕೆ ಹೊರತು ವ್ಯಾಪಾರದ ವಸ್ತು ಆಗಬಾರದು ಎಂದು ಹೇಳಿದರು.

    ಸರ್ಕಾರ ಕಾಯ್ದೆ ಹಿಂಪಡೆಯಲು ಪರಿಶೀಲನೆ ಮಾತು ಕೈಬಿಟ್ಟು ದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಯಾವುದೇ ಷರತ್ತಿಲ್ಲದೆ ಹೇಗೆ ಕಾಯ್ದೆ ಹಿಂತೆಗೆದುಕೊಂಡರೋ ಅದೇ ರೀತಿ ಭೂ ಸುಧಾರಣಾ ಕಾಯ್ದೆ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದ ಅವರು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪತ್ರ ನೀಡಿರುವುದಾಗಿ ತಿಳಿಸಿದರು.

    ರಾಜ್ಯದಲ್ಲಿ ಕೊಬ್ಬರಿ ಬೆಲೆ ಇಳಿಕೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಡಾ. ಸ್ವಾಮಿನಾಥನ್ ವರದಿ ಬೆಳೆಗಳ ಬೆಲೆ ನಿಗದಿಗೆ ಮಾನದಂಡ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದರು.

    ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಮಾದೇವಿ ಬೇನಾಳ್ ಮಠ್, ಶತಕೋಟಿ ಬಸಣ್ಣ, ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಚಿನ್ನಸಮುದ್ರ ಶೇಖರ್‌ನಾಯ್ಕ, ಆರಾಧ್ಯ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts